ಇಷ್ಟವೋ ಅಥವಾ ಪ್ರೀತಿಯೋ?

 

ಇಷ್ಟ‌  v/s ಪ್ರೀತಿ
-------
ಗಿಡದ ಜೊತೆ ಸಲ್ಲಾಪ
-----------
ಸಂಚಿಕೆ #10
************************
ಬಹಳ ದಿನಗಳ ನಂತರ, 
ನನ್ನ 'ತರ್ಲೆ ಸ್ನೇಹಿತೆ'  ಹೂವಿನಗಿಡದ ಬಳಿ ಹೋ‍ದೆ.
ಗಿಡ ಅದೇನೋ ಕಾತುರತೆ ತೋರಿಸಿತು.

"ಒಹ್...ಬಂದ್ಯಾ...ಬಾ! ಬಾ!
ಅಂದಿನಿಂದ ನಿನಗೆ  ಒಂದು ಪ್ರಶ್ನೆ ಕೇಳಬೇಕು ಅಂತ ಕಾಯ್ತಾ ಇದ್ದೆ"

'ಅಯ್ಯೋ ದೇವರೇ! ಏನು ಪ್ರಶ್ನೆ ಕೇಳುತ್ತಪ್ಪಾ' 
ಎಂಬ ಆತಂಕ ನನಗೆ.

ಸಾಮಾನ್ಯವಾಗಿ ನನ್ನನ್ನು ಗೋಜಲಿಗೆ ಸಿಕ್ಕಿಸುವ ಪ್ರಶ್ನೆಗಳನ್ನು ಕೇಳಿ ಮಜಾ ಪಡೆಯೋ ಸ್ವಭಾವ ಈ ಗಿಡದ್ದು.
{ ನಾ ಬರೆದಿರೋ ಹಿಂದಿನ 9 ಸಂಚಿಕೆಗಳನ್ನು ಓದಿದೋರಿಗೆ ಗೊತ್ತಿರುತ್ತೆ }

" ಸರಿ, ಅದೇನು ? ಕೇಳು"

ಗಿಡ ಮತ್ತೆ ಎಚ್ಚರಿಸಿತು
 " ಪ್ರಶ್ನೆ ತುಂಬಾ  ಸರಳ ಅನಿಸಬಹುದು. ಥಟ್ ಅಂತ ಉತ್ತರ ಕೊಟ್ಟುಬಿಡಬೇಡ"

" ಆಯ್ತು , ಅದೆಷ್ಟು build up ಕೊಡ್ತೀಯಾ? ಬೇಗ ಬೇಗ ಕೇಳು, ನನಗೆ ಬೇರೆ ಕೆಲ್ಸ ಇದೆ" 

ಗಿಡ ಕೇಳಿಯೇಬಿಟ್ಟಿತು

" ನೀನು ನನ್ನನ್ನು ಇಷ್ಟ ಪಡ್ತೀಯಾ? ಅಥವಾ ಪ್ರೀತಿಸ್ತೀಯಾ? "
"ಆ..., ಇನ್ನೊಮ್ಮೆ ಕೇಳು"
" ನೀನು ನನ್ನನ್ನು ಇಷ್ಟ ಪಡ್ತೀಯಾ? ಅಥವಾ ಪ್ರೀತಿಸ್ತೀಯಾ? "

-----------------
ನಾನು ಜೋರಾಗಿ ನಕ್ಕುಬಿಟ್ಟೆ. 
"ಅಯ್ಯ....ಇದೂ ಒಂದು ಪ್ರಶ್ನೆನಾ? 
ಸುಮಾರು 15 ವರ್ಷಗಳಿಂದ ನಿನ್ನ ಒಡನಾಟ ನನಗೆ. ನಾ ನಿನ್ನನ್ನು ಬಹಳ ಪ್ರೀತಿಸ್ತೇನೆ. ಅದರಲ್ಲೇನು ಸಂಶಯ? "

ಗಿಡದ ಪ್ರತಿಕ್ರಿಯೆ
" ಇಲ್ಲ , ಇಲ್ಲ, ಇಲ್ಲ 
ನೀನು ನನ್ನನ್ನು ಇಷ್ಟಪಡ್ತೀಯ ಅಷ್ಟೇ, ಪ್ರೀತ್ಸೋದಿಲ್ಲ.
ನೋಡು, ಅಲ್ಲಿ ನಮ್ಮ ತೋಟವನ್ನು ಸ್ವಚ್ಛ ಮಾಡ್ತಾ ಇದ್ದಾನಲ್ಲಾ ಆ ಮಾಲಿ, ಅವನು ನನ್ನನ್ನು ಪ್ರೀತಿಸ್ತಾನೆ"

ನನ್ನೊಳಗೆ  ಅಸೂಯೆಯ ಕಿಡಿ ಸಿಡಿಯಿತು.

" ಏನು ಹೇಳ್ತಾ ಇದೀಯ ನೀನು? 
ನಿನ್ನ ಮತ್ತು ನೀ ಅರಳಿಸುತ್ತಿರುವ ಸುಂದರ ಹೂವುಗಳನ್ನು ಅದೆಷ್ಟು ಪ್ರೀತಿಸ್ತೀನಿ ನಾನು! 
ನಿನ್ನನ್ನು‌ ಎಷ್ಟು ಪ್ರೀತಿಯಿಂದ ಮಾತಾಡಿಸ್ತೀನಿ.
ಪ್ರತಿದಿನ ನಿನ್ನ ಹೂವುಗಳನ್ನು ಬಿಡಿಸಿ ದೇವರಿಗೆ ಅರ್ಪಿಸುವ ಪವಿತ್ರ ಕೆಲಸ ಮಾಡ್ತೀನಿ...
ಆದರೂ, 
ನೀನು ಅದ್ಯಾವುದೋ ಮಾಲಿ ಪ್ರೀತಿಸ್ತಾನೆ ಅಂತ ಹೇಳ್ತಿದೀಯಲ್ಲಾ? 
ಸರೀನಾ ಈ ಆಲೋಚನೆ?"
-------
ಆಗ ಗಿಡ ಕೊಟ್ಟ ಸ್ಫೋಟಕ ಉತ್ತರ ನನ್ನನ್ನು ಅಚ್ಚರಿಗೊಳಿಸಿತು
----
" ಹೌದು. ನಿನಗೆ ನಾನು ಮತ್ತು ನನ್ನ ಹೂವುಗಳು ಇಷ್ಟ. ಒಪ್ತೀನಿ.  ಆದ್ದರಿಂದ ನಿನ್ನ ಬಳಕೆಗೋಸ್ಕರ ಹೂವುಗಳನ್ನು ಕಿತ್ತುಕೊಂಡು ಹೋಗ್ತೀಯ.
ಆದರೆ...
"
"ಏನು ಆದರೆ!?"
ಆದರೆ,  ಆ ಮಾಲಿ,  ನನ್ನನ್ನು ಪ್ರತಿದಿನ ಪ್ರೀತಿಯಿಂದ ಮಾತಾಡಿಸ್ತಾನೆ. 
ಮುಖ್ಯವಾಗಿ  ಪ್ರತಿದಿನ ನನಗೆ ನೀರು ಹಾಕಿ,ಆಗ್ಗಾಗ್ಯೆ ಗೊಬ್ಬರ ಹಾಕಿ , ನಾನು ಬೆಳೆಯುವಂತೆ ಮಾಡ್ತಾನೆ. 
ನನ್ನ ಬೆಳವಣಿಗೆ ಅವನಿಗೆ ಆದ್ಯತೆ. 
ನನ್ನಿಂದ ಸಿಗುವ ಪ್ರಯೋಜನ ನಿನ್ನ ಆದ್ಯತೆ.
ಈಗ ಅರ್ಥ ಆಯ್ತಾ ?
         ಇಷ್ಟ 
             ಮತ್ತು 
         ಪ್ರೀತಿಯ 
ನಡುವಿನ ವ್ಯತ್ಯಾಸ?
"
-----

ಗಲಿಬಿಲಿಗೊಂಡೆ.
ಸದ್ದಿಲ್ಲದೆಯೇ ಓಡಿದೆ.
**********************
ಈಗ ಪಟ್ಟಿ ಮಾಡ್ತಾ ಇದೀನಿ.
ನಾನು ಯಾರು ಯಾರನ್ನು ಪ್ರೀತಿಸ್ತೀನಿ?
ಯಾರು ಯಾರನ್ನು ಕೇವಲ ಇಷ್ಟಪಡ್ತೀನಿ?
ನೀವೂ ಪಟ್ಟಿ ಮಾಡಲು ಪ್ರಯತ್ನಿಸಿ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ