‘ಬಡತನ’ ಆ ‘ಬಿಕ್ಷುಕನಲ್ಲಿಯೋ’ ? ಅಥವಾ ನನ್ನೊಳಗೋ ?
‘ಬಡತನ’ ಆ ‘ಬಿಕ್ಷುಕನಲ್ಲಿಯೋ’ ? ಅಥವಾ ನನ್ನೊಳಗೋ ?
ಆತ ಹೋಳಿಗೆಯನ್ನು ಗಬ ಗಬ ತಿಂತಾ ಇದ್ದ , ತುಪ್ಪದಲ್ಲಿ
ಅದ್ದಿ. ‘ಹೋಳಿಗೆಮನೆ’ ಅಂಗಡಿ ಮುಂದೆ ಮೆಟ್ಟಲ ಮೇಲೆ ತುದಿಗಾಲಿನಲ್ಲಿ ಕುಳಿತು.
ತುಂಬಾ ಹಸಿವಾಗಿತ್ತೇನೋ.
ಕೆದರಿದ ತಲೆ ಕೂದಲು, ಕ್ಷೌರವಿಲ್ಲದ ಗಡ್ಡ ಮೀಸೆ,
ಮಾಸಿದ ಹರುಕಲು ಬಟ್ಟೆ, ........
ಬಿಕ್ಷುಕನೇ ಇರಬೇಕು. ಸ್ವಲ್ಪ ಭೀಕರವಾಗಿ ಕಾಣಿಸ್ತಾ ಇದ್ದ.
“ಅಜ್ಜಾ , ಮಕ್ಕಳಕಳ್ಳ ನೋಡು”
ನನ್ನ ಜೊತೆಗೇ ಹೆಜ್ಜೆಯಿಡುತ್ತಿದ್ದ,
ಎರಡು ವರ್ಷದ ಮೊಮ್ಮಗಳು ಆರೋಹಿಯ,
ಭಯಮಿಶ್ರಿತ ತೊದಲು ನುಡಿಯಲ್ಲಿ
.
{
ಸ್ವಲ್ಪ ಭೀಕರವಾಗಿ ಕಾಣಿಸುವ
ವ್ಯಕ್ತಿಗಳನ್ನೆಲ್ಲಾ ‘ಮಕ್ಕಳ ಕಳ್ಳ ’
ಅಂತ ಸುಳ್ಳು ಪಟ್ಟಿ ಕೊಟ್ಟು
ನಂಬಿಸಿದ್ದೇವೆ ಅವಳನ್ನು. ನಮ್ಮ ಕಾಲದಲ್ಲಿನ ‘ಗುಮ್ಮ’ ನ ಹಾಗೆ. ಆಕೆ ಏನಾದರೂ ಹಟ ಮಾಡಿದಾಗ, ಭಯ ಹುಟ್ಟಿಸಿ, ಸುಮ್ಮನಿರಿಸಲು ನಾವು ಮಾಡಿಕೊಂಡಿರುವ ತಂತ್ರ }.
ನಾನು ಆಕೆಯನ್ನು ತಟ್ಟನೇ ಎತ್ತಿಕೊಂಡೆ. ಸ್ವಾಭಾವಿಕವಾಗಿಯೇ
ಆ ‘ಹೊಲಸು ಮನುಷ್ಯ’
ನಿಂದ ಮಗುವನ್ನು ದೂರವಿಡುವ ಉದ್ದೇಶದಿಂದ.
ನಾವು ‘ಹೋಳಿಗೆ ಮನೆ’ ಗೆ ಹೋದ ಕೆಲಸ ಮುಂದುವರೆಸಿದೆವು. ನಾಲ್ಕು
ಹೋಳಿಗೆಗೆ ಆದೇಶ ನೀಡಿದೆವು.
ನಮ್ಮ ಹೋಳಿಗೆ ಬರುವವರೆಗೆ ,
ಆತನನ್ನು ಗಮನಿಸ್ತಾ ಇದ್ದೆ.
ನನಗೆ ಇದೊಂದು ಹುಚ್ಚು. ಸಾರ್ವಜನಿಕ ಸ್ಥಳಗಳಲ್ಲಿ,
ಸ್ವಲ್ಪ ವಿಶೇಷ ಅನಿಸುವ ವ್ಯಕ್ತಿಗಳ ಬಗ್ಗೆ ಕುತೂಹಲದಿಂದ ಗಮನಿಸೋದು.
ಆತ , ಹೋಳಿಗೆ-ತುಪ್ಪ
ತಿಂದು ಮುಗಿಸಿ, ಅಂಗಡಿಯ
ಟೇಬಲ್ ಮೇಲಿದ್ದ ನೀರಿನ ಜಗ್ ನ್ನು ಎತ್ತಿ, ಗಟ ಗಟ ನೀರನ್ನು ಕುಡಿದು,
ಕೆಟ್ಟದಾಗಿ ತೇಗಿ, ಪಕ್ಕದ ಜ್ಯೂಸ್ ಅಂಗಡಿಗೆ ಧಾವಿಸಿದ.
ಆಗ, ನನ್ನ
ಮನಸ್ಸಿನೊಳಗೆ , ಆ ಕೆಲವು ಕ್ಷಣಗಳಲ್ಲಿ ಅನಿಸಿದ್ದು
‘ಈತ ಈ
ಅಂಗಡಿಗೆ ಬಂದು, ಬಿಟ್ಟಿ ತಿಂದು ಹೋಗುವ ಮಾಮೂಲೀ ಬಿಕ್ಷುಕ- ಗಿರಾಕಿ
ಇರಬೇಕು’ – ಎಂಬ ಊಹೆ
‘ಭಿಕ್ಷುಕನ ವೇಷದಲ್ಲಿ, ಬಿಟ್ಟಿ
ಹೋಳಿಗೆ-ತುಪ್ಪ ತಿನ್ನುವ ಸೌಭಾಗ್ಯ ಇವನದು’ ಅಂತ ಲೇವಡಿಯ ಭಾವ.
‘ಅಯ್ಯೋ ಪಾಪ- ಏನೋ ಎಂತೋ ಆತನ
ಬದುಕಿನ ಹಿನ್ನೆಲೆ’ ಅಂತ
ಕರುಣೆ
‘ ನಾನೂ ಆತನಿಗೆ ಸಹಾಯ / ಭಿಕ್ಷೆ ರೂಪದಲ್ಲಿ ಹಣ ನೀಡಿದರೆ
ಹೇಗೆ?’ .. ಅಂತ ಅನುಕಂಪ
{ಆದರೆ ನನ್ನಲ್ಲಿ ನಗದು ಹಣ ಇರಲಿಲ್ಲ ನಾನು
ಅಳವಡಿಸಿಕೊಂಡಿರುವ GooglePay ಸಂಸ್ಕೃತಿಯಿಂದಾಗಿ}
....ಇನ್ನೂ
ಏನೇನೋ....
-------------
ನನ್ನ ಕುತೂಹಲ ತಡೆಯಲಾರದೆಯೇ,
ಅಂಗಡಿಯವನನ್ನು ಕೇಳಿದೆ
“ ಏನ್ ಸ್ವಾಮೀ, ಈ ಮನುಷ್ಯನಿಗೆ, ಪ್ರತಿದಿನಾನೂ
ನಿಮ್ಮಿಂದ ಬಿಟ್ಟಿ ‘ಹೋಳಿಗೆ-ತುಪ್ಪ’ ಉಚಿತ
ಸೇವೆನಾ?” – ವ್ಯಂಗ್ಯ ಇತ್ತು ನನ್ನ ಮಾತಿನಲ್ಲಿ.
----------
ಆಗ ಅಂಗಡಿಯವನಿತ್ತ ಉತ್ತರ ಕೇಳಿ ದಂಗಾದೆ ಆದೆ ನಾನು .
“ ಇಲ್ಲಾ ಸಾರ್. ಯಾವ ಬಿಟ್ಟಿ ಸೇವೇನೂ
ಇಲ್ಲ. ಆತ ಪ್ರತಿದಿನ ನಮ್ಮ ಅಂಗಡಿಗೆ ಬರೋದು ನಿಜ.
ಆದರೆ ದುಡ್ಡು ಕೊಟ್ಟೇ, ಬಗೆ ಬಗೆಯ ಹೋಳಿಗೆ ತಿಂತಾನೆ.
ಸ್ವಾರಸ್ಯ ಅಂದರೆ, ಆತ ಹೆಚ್ಚಿನ ಸಮಯ ಕೊಡೋದು 500 ರೂಪಾಯಿಗಳ ಗರಿ ಗರಿ ನೋಟು.
ಆತ ಸೇದೋದು costly branded ಸಿಗರೇಟ್ ಗಳನ್ನೇ. ಪಕ್ಕದ ಅಂಗಡಿನಲ್ಲಿ order ಮಾಡಿ ಸಿಗರೇಟ್ ತರಿಸಿಕೊಳ್ತಾನೆ. Uber –Ola ದಲ್ಲಿಯೇ ಓಡಾಡೋದು ”
ನಾ
ಕೇಳಿದೆ
“ ಮತ್ಯಾಕೆ ಹೀಗೆ ಭಿಕ್ಷುಕನ ಥರ ಇದಾನೆ? “
“ಗೊತ್ತಿಲ್ಲ ಸಾರ್. ಆತ ಭರ್ಜರಿ
ಶ್ರೀಮಂತನಂತೆ. ಮಕ್ಕಳೆಲ್ಲಾ ವಿದೇಶದಲ್ಲಿದ್ದಾರಂತೆ. ಇಲ್ಲಿ ಒಬ್ಬನೇ ಇದಾನೆ. ಯಾಕೆ
ಹೀಗಿದ್ದಾನೋ!!- ನಾವೇನೂ ಕೇಳೋಕೆ ಹೋಗಿಲ್ಲ.
ನಮಗಂತೂ ಒಳ್ಳೆ business ಅವನಿಂದ”
ಇಷ್ಟು ಹೊತ್ತಿಗೆ , ಪಕ್ಕದ ಅಂಗಡಿಯಲ್ಲಿ ಆತ apple milk shake ಕುಡಿದು, ಅದರ ಪಕ್ಕದ ಅಂಗಡಿಯಲ್ಲಿ branded ಸಿಗರೇಟ್ ಖರೀದಿಸಿ ಸೇದಲು ಪ್ರಾರಂಭಿಸಿದ್ದ
*******************
ಐದೇ ಐದು ನಿಮಿಷದ್ದು ಈ
ಪುಟ್ಟ ಸಂಗತಿ, ನನ್ನನ್ನು ಚಿಂತನೆಗೊಳಪಡಿಸಿತು
ನನ್ನ ಮೇಲೆಯೇ ನನಗೆ ಬೇಸರ
ಅನಿಸಿತು.
ಐದು ನಿಮಿಷಗಳ
ಹಿಂದೆ, ಆತನ ಕೇವಲ ಬಾಹ್ಯರೂಪ – ವೇಷ ನೋಡಿ, ಹಿನ್ನೆಲೆ ಗೊತ್ತಿಲ್ಲದೆಯೇ ನನಗರಿವಿಲ್ಲದೆಯೇ ತೀರ್ಮಾನಿಸಿಬಿಟ್ಟಿದ್ದೆ
‘ಆತ ಬಿಕ್ಷುಕ, ನನ್ನಷ್ಟು
ಸ್ಥಿತಿವಂತ, ವಿದ್ಯಾವಂತ ಅಲ್ಲ’.
ಆದರೆ ಈಗ ನನ್ನನ್ನೇ
ಪ್ರಶ್ನಿಸಿಕೊಂಡೆ
‘ಬಡತನ’ ಆ ‘ಬಿಕ್ಷುಕನಲ್ಲಿಯೋ’ ? ಅಥವಾ ನನ್ನೊಳಗೋ ?’
ಅನೇಕ
ಸಂದರ್ಭದಲ್ಲಿ, ಧಿಡೀರ್ ಅಂತ, ಈ ರೀತಿ Judgemental ಆಗಿಬಿಡ್ತೇವೆ ಅಲ್ವಾ, ಕೂಲಂಕುಶವಾಗಿ ವಿಶ್ಲೇಷಿಸದೆಯೇ.
**************************
ಮೊಮ್ಮಗಳು ಸ್ವಲ್ಪ
ನಿರಾತಂಕದಿಂದ ಕೇಳಿದಳು
“ ಅಜ್ಜಾ-
ಮಕ್ಕಳ ಕಳ್ಳ ಹೋದ – ನನ್ನ ಇಳಿಸು”
ಆಕೆಯನ್ನು
ಇಳಿಸಿದೆ
ಆದರೆ
ನನ್ನ ಮನಸ್ಸಿನ ಭಾರ ಇಳಿಯಲಿಲ್ಲ
****
ನಿಮಗೂ ಇಂತಹ
ಅನುಭವ ಆಗಿದ್ದ್ರೆ, ದಯವಿಟ್ಟು
ಹಂಚಿಕೊಳ್ಳಿ
-----
Facebook link
https://www.facebook.com/share/p/18yUhqCe1Z/

ಕೆಲವಂದು ಶಬ್ದಗಳು ತುಂಬಾ ಇಷ್ಟ ಆಯ್ತು.
ಪ್ರತ್ಯುತ್ತರಅಳಿಸಿ