ನದಿಯ ಸಂಕಟ (ಸ್ವಗತ) -ಬರಹ / ಕವಿತೆ
ನದಿಯ ಸ್ವಗತ
ಕವಿ ವರ್ಣಿಸಲಾರಂಭಿಸಿದ
"
ಓ ನದಿ,
ದೂರದ
ನಿನ್ನ ಪ್ರಿಯತಮ ಸಾಗರನ ಮಿಲನಕ್ಕಾಗಿ
ಬಳುಕುತ ,
ಬಾಗುತ ,
ಲಾಸ್ಯವಾಡುತ ,
ಓಡುತ
ಕುಣಿಯುತ ,
ಗುಡ್ದ ಬೆಟ್ಟ
ಕಾಡು ಕಣಿವೆಯಲ್ಲಿ ನುಸುಳುತ ,
ಪ್ರಪಾತದಲ್ಲಿ ಧುಮುಕುತ,
ಧಾವಿಸುತಿಹ ಪ್ರೇಮವಾಹಿನಿ ನೀ ..
....
ಧನ್ಯಳು ನೀನು
“
ಇನ್ನೂ
ಮುಂದುವರೆದಿತ್ತು ................... ಕವಿಯ ವರ್ಣನೆ
ನಿನ್ನ ಕವಿ ಕಲ್ಪನಾಲಾಪವನ್ನು-ಭ್ರಮೆಯನ್ನು
“
ಇದ್ದಕಿದ್ದಂತೆಯೇ
ಒಂದು ಏರು ಧ್ವನಿ ಮೊಳಗಿತು.
ಯಾರ ಧ್ವನಿ?
ಆಶ್ಚರ್ಯ!
ನದಿಯದೇ ಧ್ವನಿ!!
ನೀ ವರ್ಣಿಸಿದ
ಆ ಸಾಗರ
ಯಾರೋ ?
ಎಲ್ಲಿದ್ದಾನೋ?
ಹೇಗಿದ್ದಾನೋ
?
ನನಗಂತೂ
ಗೊತ್ತಿಲ್ಲ
ಏನು ಮಾಡೋದು?
ಪ್ರಕೃತಿ
ನಿಯಮ (ಭೌತಶಾಸ್ತ್ರದ ನಿಯಮ )
ಮೇಲಿನಿಂದ ಕೆಳಗೆ
ನಾ ಹರಿಯಲೇಬೇಕು.
ಎಲ್ಲೋ
ಹುಟ್ಟಿ,
ಎಲ್ಲೋ
ಬೆಳೆದು,
ದಿಕ್ಕು ದೆಸೆಯಿಲ್ಲದೆಯೇ ಹರಿಯುತ್ತೇನೆ.
ಹಾದಿ
ಮಧ್ಯೆ,
ಒಮ್ಮೊಮ್ಮೆ
ಸಲೀಸು
ಹಾದಿಯಲಿ ಪ್ರಶಾಂತ
ಹರಿವು
ಇನ್ನೊಮ್ಮೆ
ಅನಿರೀಕ್ಷಿತ
ತಿರುವುಗಳ ಸಂಕಷ್ಟ
ಇದ್ದಕಿದ್ದಂತೆಯೇ
ಎದುರಾಗುವ ಕಲ್ಲು ಬಂಡೆ ಪ್ರಪಾತದಲ್ಲಿ ,
ಕ್ಷಣಮಾತ್ರದಲಿ ಧುಮುಕಲೇಬೇಕಾದ
ಅಸಹಾಯಕತೆ, ಅನಿವಾರ್ಯತೆ,
ಭೀಕರತೆ
ಇನ್ನೆಷ್ಟು
ದೂರ ಸಾಗಬೇಕೋ ಎಂಬ ಅನಿಶ್ಚಿತತೆ
ಇನ್ನೇನೇನು
ಕಠಿಣ ಹಾದಿಯನ್ನು ಎದುರಿಸಬೇಕೋ ಎಂಬ ಆತಂಕ
ಹಾಗೂ
ಹೀಗೂ ಮುಂದೆ ಅದೆಷ್ಟೋ ದೂರ ಹರಿದ ನಂತರ
ಕಡೆಗೊಮ್ಮೆ
ಎದುರಾದದ್ದು
ಅಚ್ಚರಿಯ ಅನಂತ ಜಲರಾಶಿ!!
ಅದೆಷ್ಟು
ಉದ್ದಗಲ ಆಳವೋ
ವಿಸ್ಮಯ ನನಗೆ!!
ನಾನೊಂದು ಕ್ಷಣ ಸ್ಥಬ್ದ
ಓಹೋ, ಇವನೇನಾ ?
ಕವಿಕಲ್ಪನೆಯ
ನನ್ನ ಪ್ರಿಯತಮ, ಸಾಗರ ?
ನನ್ನೊಳಗೇ
ಪ್ರಶ್ನೆ
ಉತ್ತರ
ಹೊಳೆಯುವ ಮುನ್ನವೇ
ಕ್ಷಣಮಾತ್ರದಲಿ
ಆ
ಜಲರಾಶಿಯೊಳಗೆ ನನ್ನ ಮಿಳಿತ
ಗಾಬರಿಮಿಶ್ರಿತ ರೋಮಾಂಚನ !
ಮರುಕ್ಷಣವೇ
ಶೂನ್ಯ ಭಾವ – ಮತ್ತಷ್ಟು ಪ್ರಶ್ನೆಗಳು!!
ಅಯ್ಯೋ..!!
ಮುಗಿದೇ ಹೋಯಿತೇ ನನ್ನ ದೀರ್ಘ ಪಯಣ?
ಈ ಅನಂತ ಜಲರಾಶಿಯಲ್ಲಿ
ನಾನೆಲ್ಲಿ?
ನನ್ನ ಅಸ್ತಿತ್ವವೆಲ್ಲಿ?
ನನ್ನ ಅಸ್ಮಿತೆ ಎಲ್ಲಿ?
ನಾ ಶೂನ್ಯ ಈಗ
.....
?????!!!!!!
“
****************************
ನದಿಯ ವರ್ಣಿಸಿದ ಕವಿ, ಈಗ ಮೂಕವಿಸ್ಮಿತ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ