ನಮ್ಮ ಕಾಲದಲ್ಲಿ ಕೆಂಪು ಸೂರ್ಯ ಕಾಣಿಸೋದು ಯುಗಾದಿ ದಿನ ಮಾತ್ರ!!

 ಮತ್ತೆ ಬಾಲ್ಯಕೆ ಮರಳಿ
{ಯುಗಾದಿ ಹಬ್ಬದ ದಿನ, ಹೀಗೊಂದು ನೆನಪು}
***************
ನಮ್ಮ ಕಾಲದಲ್ಲಿ ಕೆಂಪು ಸೂರ್ಯ ಕಾಣಿಸೋದು ಯುಗಾದಿ ದಿನ ಮಾತ್ರ!!
******************


ಮುಂಜಾನೆ, ಕೆಂಪು ಬಣ್ಣದಲ್ಲಿ, ದೊಡ್ಡಗಾತ್ರದಲ್ಲಿ ಸುಂದರವಾಗಿ ಉದಯಿಸ್ತಾನೆ ಸೂರ್ಯ. ಅದ್ಭುತ ದ ದೃಶ್ಯ!.

 ಇದು ಎಲ್ಲರಿಗೂ ಗೊತ್ತಿರೋ ಅತಿ ಸಾಮಾನ್ಯ ವಿಷಯ.

ಆದರೆ, ನಮ್ಮ ಕಾಲದಲ್ಲಿ ,

 ಇದು ಸಂಭವಿಸ್ತಾ ಇದ್ದದ್ದು  ಯುಗಾದಿಯ ದಿನ ಮಾತ್ರ

ಈ ವಿಚಾರ ಗೊತ್ತಿತ್ತಾ ನಿಮಗೆ?

ಹೌ..ದಾ? ಆಶ್ಚರ್ಯ!!

ಇದೇನು ಮೂರ್ಖ ಹೇಳಿಕೆಯೋ ? ಅಥವಾ  ಸೂರ್ಯನ ದಿನಚರಿಯಲ್ಲಿ ಕ್ರಾಂತಿಕಾರಿ ಬದಲಾವಣೆಯೋ ?

ಅಂದ್ಕೊಂಡ್ರಾ?

60 ವರ್ಷಗಳ ಹಿಂದೆ, ನನ್ನ ಬಾಲ್ಯದಲ್ಲಿ (ನಾನು ಸುಮಾರು ಐದಾರು ವರ್ಷದವನಾಗಿದ್ದಿರಬಹುದು )  ನನ್ನ ನಂಬಿಕೆ ಅಥವಾ ನನ್ನ ಸಿದ್ಧಾಂತ  ಇದಾಗಿತ್ತು.

ಯಾಕೆ ಅಂದರೆ, ಈ ಸ್ವಾರಸ್ಯ ಓದಿ

******************

ಒಮ್ಮೆ ಬಾಲ್ಯಕ್ಕೆ ಮರಳುವೆ – ನೀವೂ ಜೊತೆಗೆ ಬನ್ನಿ

*******************

ನಾ ನನ್ನ  ಸುಂದರ ಬಾಲ್ಯ ಕಳೆದದ್ದು,  ಮಲೆನಾಡಿನ ಜೋಗ ಜಲಪಾತದ ಹತ್ತಿರ, ಕಾಡುಕಣಿವೆಯ ಸುಂದರ ಹಳ್ಳಿ ಕಾಳಮಂಜಿ. ಪುಟ್ಟ ಮನೆ (ಮನೆಯೇನು?  ಒಂದು ಬಿಡಾರ) . ಮನೆಯ ಬಾಗಿಲು ಪೂರ್ವ ದಿಕ್ಕಿಗೆ. ಮನೆಯ ಎದುರಿಗೇ ಅಡಿಕೆಯ ತೋಟ ( ತ್ವಾಟ) .  ಆ ತೋಟದ ಹಿಂದೆ ಎತ್ತರದ,   ದಟ್ಟ ಕಾಡಿನಿಂದ ಆವೃತವಾದ ಗುಡ್ಡ.

ಮನೆಯ ಹಿಂಬಾಗ, ಅಂದರೆ ಪಶ್ಚಿಮದಲ್ಲಿಇನ್ನೊಂದು ಗುಡ್ಡ.

ಅಲ್ಲಿಯ ಪ್ರಾಕೃತಿಕ ಸೌಂದರ್ಯವನ್ನು ವರ್ಣಿಸುವುದು ಈ ಬರಹದ ಉದ್ದೇಶ ಅಲ್ಲ. ಸೂರ್ಯನ ಬಗ್ಗೆ ನನಗೆ ಅಂದು ಇದ್ದ ಮೂಢ ನಂಬಿಕೆಗೆ ಕಾರಣವನ್ನು ತಿಳಿಸೋದು.

ಸೂರ್ಯೋದಯ:

ಪ್ರತಿನಿತ್ಯ ಸೂರ್ಯ ಬೆಳಿಗ್ಗೆ ಸುಮಾರು 6 ರ ಹೊತ್ತಿಗೇ ಉದಯಿಸಿದರೂ, ನಮಗೆ ಮೊದಲ ದರ್ಶನ ನೀಡ್ತಾ ಇದ್ದದ್ದು ಸುಮಾರು 8 ಗಂಟೆಯ ಹೊತ್ತಿಗೆ, ಗುಡ್ಡದ ತುದಿಯ ಎರಡು ಮರಗಳ ನಡುವೆ ಅಡಗಿ ಕುಳಿತ ಹಾಗೆ.

ಇನು ಸೂರ್ಯಾಸ್ತ:

ಸೂರ್ಯವಾಸ್ತವವಾಗಿ ಸಂಜೆ 6 ಕ್ಕೆ ಅಸ್ತವಾದರೂ, ನಮ್ಮ ಹಳ್ಳಿಯಿಂದ ಬೇಗನೇ, ಗುಡ್ಡದ ಹಿಂದೆ ಜಾರಿ.  5 ಗಂಟೆಗೇ ಮಾಯ. ಸರ್ಕಾರೀ  ಕಛೇರಿಯ ಕೆಲವು ನೌಕರರ ಹಾಗೆ.

ಒಟ್ಟಿನಲ್ಲಿ ಎಲ್ಲರೂ ವರ್ಣಿಸುವ ಸುಂದರ ಕೆಂಪು ಸೂರ್ಯನನ್ನು, ನಿತ್ಯ  ಆನಂದಿಸೋ ಭಾಗ್ಯ ನಮಗಿರಲಿಲ್ಲ.

ಆದರೆ,

ನಮ್ಮೂರ ಗುಡ್ಡದ ಮೇಲೆಯೇ ಹತ್ತಿ ಎರಡು ಫರ್ಲಾಂಗ್ ನಡೆದು ಹೋದರೆ, ಇನ್ನೊಂದು ಗುಡ್ದ. ಆ ಗುಡ್ಡದ ಹೆಸರು ಭಾಸ್ಕರಗುಡ್ಡ.

ಯಾಕೆ ಆ ಹೆಸರು?

ಆ ಗುಡ್ದದ ತುದಿಯಿಂದಉದಯಿಸುವ ಕೆಂಪುಬಣ್ಣದಸೂರ್ಯ ಅಂದರೆ ಭಾಸ್ಕರನನ್ನು, ಅವನು ಹಾಸಿಗೆಯಿಂದ ಏಳುವಾಗಲೇ...ಅಂದರೆ ಸುಮಾರು  6 ಗಂಟೆಗೇ ನೋಡಬಹುದಿತ್ತು. ಆದ್ದರಿಂದ ಅದು ಭಾಸ್ಕರ ಗುಡ್ಡ.

ನಮ್ಮ ಯುಗಾದಿ ಹಬ್ಬದ ಪ್ರಾರಂಭ ಭಾಸ್ಕರಗುಡ್ಡದಲ್ಲಿ

ಹೊಸ ಸಂವತ್ಸರವನ್ನು ಸ್ವಾಗತಿಸುವ ಯುಗಾದಿಯ ಪಾಡ್ಯದ ದಿನ, ಹಳ್ಳಿಯ ಎಲ್ಲರೂ ಸೇರಿ (  ಹಾಗಂತಇದ್ದದ್ದೇ ಐದಾರು ಮನೆಗಳು), ಬೆಳಗಿನ ಜಾವವೇ  ಭಾಸ್ಕರನ ಗುಡ್ಡಕ್ಕೆ ಹೋಗಿ,   ಉದಯಿಸುವ ರವಿಗಾಗಿ ಕಾಯೋದು. ಈಗಲೋ ಆಗಲೋ ರವಿ ಉದಯಿಸ್ತಾನೆ ಎಂದು ಕಾಯುವ,  ಆಹಾ!, ಆ ಸಂಭ್ರಮವೇ ಚಂದ!

ಇನ್ನೊಂದು ವಿಶೇಷ ಅಂದರೆ,  ಭಾಸ್ಕರ ಗುಡ್ಡದ ತುದಿಯಿಂದ,  ಲಿಂಗನಮಕ್ಕಿ ಅಣೆಕಟ್ಟಿನ ಹಿಂಬಾಗದ ವಿಸ್ತಾರವಾದ  ಶರಾವತಿ ನದಿಯ ಸುಂದರ ನೋಟ.

ನಾವು ಕಾಯುತ್ತಾ ಇದ್ದ,ಉದಯ ರವಿ, ಆ ನದಿಯಿಂದ ಮೆಲ್ಲಗೆ ಮೇಲೇಳಲು ಪ್ರಾರಂಭಿಸಿದ ಕೂಡಲೇ, ಒಮ್ಮೆ ಎಲ್ರೂ ಹೋ..ಎಂದು ಕೂಗೋದು; ಜೋರಾಗಿ ಗಂಟೆ, ಜಾಗಟೆಯನ್ನು ಮೊಳಗಿಸಿ, ಉದಯರವಿಗೆ ಸುಸ್ವಾಗತ.   ನಂತರ  ನಮ್ಮ ಅರ್ಚನೆ ಪ್ರಾರಂಭ.  ಸಾಮಾನ್ಯವಾಗಿ ಅಲ್ಲಿಯೇ ಇರುವ  ಹೊಳೆದಾಸವಾಳ ಗಿಡದಿಂದ , ಹೂ ಬಿಡಿಸಿ, ದೂರದ ಕೆಂಪು ಬಣ್ಣದ ರವಿಗೆ ಪುಷ್ಪಾರ್ಚನೆ.

ಕೇವಲ ಹೂವನ್ನು ಅರ್ಪಿಸಿದರೆ ಸಾಕೇ? ಹಣ್ಣು ಬೇಡವೇ?

ಅದಕ್ಕೂ ದೂರ ಹೋಗಬೇಕಾಗಿಲ್ಲ, ನಗರಗಳ ಹಾಗೆ, ಅಂಗಡಿಯಿಂದ ತರುವುದು ಬೇಕಿಲ್ಲ. ಸಮೀಪದ ಮುಳ್ ಹಣ್ಣಿನ ಗಿಡಗಳಿಂದ ಪುಟ್ತ ಪುಟ್ಟ ಬಿಳೀ ಹಣ್ಣುಗಳನ್ನು ಕಿತ್ತರಾಯ್ತು, ದಿಗಂತದ ರವಿಗೆ ನೈವೇದ್ಯ ಮಾಡಿ, ನಮ್ಮ ಬಾಯನ್ನು ಸಿಹಿ ಮಾಡಿಕೊಂಡರಾಯ್ತು. ಜೊತೆಗೆ, ಈ ಶ್ಲೋಕದ ಪಠಣ :

“ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರಃ
ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಸ್ತುತೇ”

ಸೂರ್ಯ ಸ್ವಲ್ಪ ಮೇಲೇರುವ ವರೆಗೂ ಅಲ್ಲಿಯೇ ಇದ್ದು, ಇನ್ನೊಂದಿಷ್ಟು ಮುಳ್ಳ್ ಹಣ್ಣುಗಳನ್ನು ಕೊಯ್ದು, ಹರಟೆ ಹೊಡೆದು, ಮನೆಗೆ ಮರಳುತ್ತಿದ್ದೆವು.

************

ಈಗಾಗಲೇ ನಿಮಗೆ ಅರ್ಥ ಅಗಿರಬೇಕು,  ನಾ ಪ್ರಾರಂಭದಲ್ಲಿ ತಿಳಿಸಿದ ನನ್ನ ನಂಬಿಕೆ / theory ಗೆ ಕಾರಣ.

Simple,

ನಾನು ಕೆಂಪನೆಯ ಸೂರ್ಯನನ್ನು ನೋಡ್ತಾ ಇದ್ದದ್ದು  ಪ್ರತಿ ಯುಗಾದಿಯ ದಿನ ಮುಂಜಾನೆ ಮಾತ್ರ, ಯಾಕೆ ಅಂದರೆ ಅಂದು ಮಾತ್ರ  ಭಾಸ್ಕರನ ಗುಆಚರಣೆ ಡ್ಡಕ್ಕೆ ಹೋಗ್ತಾ ಇದ್ದದ್ದು, ಆಚರಣೆಯ ನೆಪದಲ್ಲಿ. ಏಷ್ಟೋ ದಿನಗಳ ನಂತರ ಗೊತ್ತಾಯ್ತು. ಪ್ರತಿದಿನ ಸೂರ್ಯ ಕೆಂಪಾಗಿಯೇ ಉದಿಸ್ತಾನೆ ಅಂತ.

*************

ಮುಗಿಸುವ ಮುನ್ನ ಎರಡು ವಿಚಾರಗಳು.

1.           1. ಇದೊಂದು  ಅರ್ಥಪೂರ್ಣ ಆಚರಣೆ

ಈಗ ವಿಶ್ಲೇಷಿಸಿದಾಗ, ಅಂದಿನ ,  ನಮ್ಮ ಹಳ್ಳಿಯ ಯುಗಾದಿಯ ಈ ಆಚರಣೆ ಎಷ್ಟೊಂದು ಅರ್ಥಪೂರ್ಣ ಅನಿಸ್ತಾ ಇದೆ. ಹೊಸ ವರ್ಷವನ್ನು ಸ್ವಾಗತಿಸುವ ಈ ಹಬ್ಬ ಇದು. ಇಡೀ ಜಗತ್ತಿಗೆ ಚೈತನ್ಯ ಸೂರ್ಯ. ವರ್ಷದ ಪ್ರಾರಂಭದಲ್ಲಿ  ಆ ಚೈತನ್ಯದ ಮೊದಲ ಕಿರಣವನ್ನು (ಇದಕ್ಕೆ ತಡಕ್ಅನ್ನುವ ಇನ್ನೊಂದು ಪದವೂ  ಇದೆಯಂತೆ )    ಸ್ವಾಗತಿಸಿ,  ಸಂಭ್ರಮಿಸಿ, ಪ್ರಕೃತಿಯ ಮಡಿಲಲ್ಲಿಯೇ ಊರಿನವರೆಲ್ಲಾ ಸೇರಿ ಮಾಡುವ ಪೂಜೆ,   ಸರಳ ಆಚರಣೆ.

 2.   ಬಾಸ್ಕರಗುಡ್ಡ ನೆನಪಾದದ್ದು ‘ಹುಲಿಗುಡ್ಡ’ ದಲ್ಲಿ

ಕಳೆದ ವರ್ಷ ನಾವು ಡಾರ್ಜಿಲಿಂಗ್ ಗೆ ಪ್ರವಾಸಕ್ಕೆ ಹೋದಾಗ, ಅಲ್ಲಿನ ಟೈಗರ್ ಹಿಲ್ (ಬೇಕಿದ್ರೆ ನಮ್ಮ ಭಾಷೆಲಿ ಹುಲಿಗುಡ್ಡಅಂತ ಕರೆಯೋಣ ) ತುದಿಯಲ್ಲಿ ನಿಂತು  ಹಿಮಾಲಯ ತಪ್ಪಲಿನ  ಕಾಂಚನಜಂಗಾ ಮಹಾಪರ್ವತ ಶ್ರೇಣಿಯಲ್ಲಿ ಕಾಣುವ ಅಪರೂಪದ ದೃಶ್ಯವನ್ನು.   

ಏನು ಈ ದೃಶ್ಯದ ವಿಶೇಷ ?

ಉದಯಿಸುವ ಸೂರ್ಯನ ದೃಶ್ಯ ಎಲ್ಲಾ ಕಡೇನೂ ಸಿಗುತ್ತೆ. ಆದರೆ, ಇಲ್ಲಿ ಕಾಣಿಸೋದು ಒಂದು ಅನನ್ಯ ದೃಶ್ಯ.  ರಾತ್ರಿ ಕತ್ತಲಲ್ಲಿ ಅದೃಶ್ಯವಾದ ಕಾಂಚನಜಂಗಾ ಮಹಾಪರ್ವತ ಶ್ರೇಣಿ, ಬೆಳಗಿನಜಾವದ ಹೊತ್ತಿಗೆ ಬಂಗಾರದಬಣ್ಣದಲ್ಲಿ  ಕ್ರಮೇಣ ಗೋಚರವಾಗಿ, ಬೆಳಗಾದ ನಂತರ ಬಿಳಿಯ ಬಣ್ಣಕ್ಕೆ ತಿರುಗುವುದು.

ಈ ಬಂಗಾರದ ಬಣ್ಣ ಬಳಿಯುವ ಬಣ್ಣಗಾರ ಮತ್ಯಾರೂ ಅಲ್ಲ. ಕಾಂಚನಜಂಗಾ ಪರ್ವತಶ್ರೇಣಿಯ ವಿರುದ್ಧ ದಿಕ್ಕಿ ನಲ್ಲಿ ಉದಯಿಸುವ ಸೂರ್ಯ.  ಕಾಂಚನಜಂಗಾ  ಪರ್ವತದ canvas ಮೇಲೆ, ಉದಯರವಿ ದೂರದಿಂದ  ಹೊಂಬಣ್ಣವ ಚೆಲ್ಲಿ, ಬಿಡಿಸುವ  ಚಿತ್ತಾರ.  ಪ್ರವಾಸಿಗರು ಏಕಕಾಲಕ್ಕೆ  ಬಣ್ಣಗಾರನನ್ನೂ, canvas ನ್ನೂ ನೋಡಬಹುದು.

ಬೆಳಗಿನ ಜಾವ 4 ಗಂಟೆಯಿಂದಲೇ , ಸಾವಿರಾರು ಪ್ರವಾಸಿಗರು, ಸೂರ್ಯನ ಆಗಮನಕ್ಕಾಗಿ ಕಾಯುವಿಕೆ.

ಹುಲಿಗುಡ್ಡ(Tiger Hill) ದ ಮೆಲೆ ನಿಂತು ಈ ರೋಮಾಂಚನಕಾರೀ ದೃಶ್ಯವನ್ನು ನಾವು ಆನಂದಿಸುವಾಗ, ನನ್ನ ಸ್ಮೃತಿಪಟಲದಲ್ಲಿ ಸುಳಿದಾಡಿದ್ದು ಕಾಳಮಂಜಿಯ ಭಾಸ್ಕರಗುಡ್ಡ ಮತ್ತು ಯುಗಾದಿ ಸಂಭ್ರಮ.

ಈ ನೆನಪುಗಳೇ  ಹಾಗೆ ನೋಡಿ.  ನಾವು ಕುಳಿತ ಸ್ಥಳದಿಂದಲೇ, ಒಂದು ಕ್ಷಣ,  ಕಾಲವನ್ನು ಹಿಂದಕ್ಕೆ ತಳ್ಳಿ, ಯಾವುದೋ ಲೋಕಕ್ಕೆ, ಯಾವುದೋ ಅನುಭವಕ್ಕೆ ಕರೆದುಕೊಂಡು ಹೋಗಿಬಿಡುತ್ತವೆ.

ಅವು ಕಹಿ ನೆನಪುಗಳಾಗಿದ್ದರೆ, ಈ ಕ್ಷಣ ಬೇವು.

ಅವು ಸಿಹಿ ನೆನಪುಗಳಾಗಿದ್ದರೆ ಈ ಕ್ಷಣ ಬೆಲ್ಲ,

ಯುಗಾದಿ ಅಂದರೆ ಬೇವು, ಬೆಲ್ಲ ಅಂತಾರೆ. ನೆನಪಿನಲೋಕದಲ್ಲಿ ವಿಹರಿಸುವವರಿಗೆ ಸದಾ ಯುಗಾದಿ.

ಚಿದಂಬರ ಕಾಳಮಂಜಿ

30 ಮಾರ್ಚ್ 2025

ಕಾಮೆಂಟ್‌ಗಳು

  1. ಬಹಳ ಚೆನ್ನಾಗಿದೆ.
    ನೆನಪು ಅಲೆಯಂತೆ ಬಂದು ಹೋದರೆ ಚೆಂದವೆಂದು
    ನನ್ನ ಅನಿಸಿಕೆ. ಧಾನ್ಯವಾದ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ