ಅಗಲಿದ, ಆತ್ಮೀಯ, ಕಾಳಮಂಜಿ ಶ್ರೀನಿವಾಸನಿಗೆ, ಕಾಳಮಂಜಿ ಚಿದಂಬರಣ್ಣನಿಂದ ಒಂದು ಪತ್ರ (ನುಡಿನಮನ)

ಅಗಲಿದ,  ಆತ್ಮೀಯ,  ಕಾಳಮಂಜಿ ಶ್ರೀನಿವಾಸನಿಗೆ,

ಕಾಳಮಂಜಿ ಚಿದಂಬರಣ್ಣನಿಂದ  ಒಂದು ಪತ್ರ (ನುಡಿನಮನ)

                                                                     ಏಪ್ರಿಲ್   2025



ಆತ್ಮೀಯ ಜನ್ನೆಮನೆ ಶ್ರೀನಿವಾಸ. 

ಕಾವೆಂಶ್ರೀ (ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ) ಎಂದೇ ನೀನು ಉತ್ತರಕರ್ನಾಟಕ ಪ್ರಾಂತ್ಯದಲ್ಲಿ  ಪರಿಚಿತ, ಪ್ರಸಿದ್ಧ.  ಆದರೆ ನನಗೆ ಮತ್ತು ನಮ್ಮ ಹಳ್ಳಿ ಕಾಳಮಂಜಿಯ ನಿನ್ನ  ನಿಕಟವರ್ತಿಗಳಿಗೆ ಹಾಗೆ ಕರೆದರೆ ಯಾಕೋ ಆಪ್ತತೆ ಮೂಡುವುದಿಲ್ಲ. ಆದ್ದರಿಂದಲೇ ನಿನ್ನನ್ನು  ಜನ್ನೆಮನೆ ಶ್ರೀನಿವಾಸ ಎಂಬ ಸಂಬೋಧನೆಯಿಂದ ಪ್ರಾರಂಭಿಸಿದೆ.

ಇತ್ತೀಚೆಗೆ ನೀನು ತೀವ್ರ ಅನಾರೋಗ್ಯಕ್ಕೆ ಬಲಿಯಾಗಿ, 58 ನೇ ವಯಸ್ಸಿಗೇ , ಈ ಲೋಕದಿಂದ ದೂರವಾಗಿಬಿಟ್ಟೆ. ತುರ್ತಾಗಿ ನಿರ್ಗಮಿಸಿಬಿಟ್ಟೆ.  

ನೀನಿಲ್ಲ ಎಂಬುದನ್ನು  ಊಹಿಸಲೂ ಆಗ್ತಾ ಇಲ್ಲ.

ಈ ಸಂದರ್ಭದಲ್ಲಿ, ಯಾಕೋ ನನ್ನಂತರಾಳದಿಂದ ಸ್ಫುರಿಸುತ್ತಿರುವ ಅನಿಸಿಕೆ – ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂಬ ತುಡಿತ ನನಗೆ.  ಆದರೆ, ಒಂದು ಬಗೆಯ ತಳಮಳ, ಆತಂಕವೂ ಇದೆ. ಈ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ನಿನ್ನ ಕುಟುಂಬದವರ, ಆಪ್ತರ ಮನಸ್ಸಿಗೆ ಈ ಭಾವನಾತ್ಮಕ ಪತ್ರ , ಇನ್ನಷ್ಟು ನೋವು ಕೊಟ್ಟೀತೇನೋ ಎಂಬ ತಳಮಳ .

ಆದರೂ .....

ಈ ಪತ್ರದ ಮೂಲಕ ನನ್ನ ನುಡಿನಮನವನ್ನು ಸಲ್ಲಿಸ್ತಾ ಇದೀನಿ.

*********************

ಶ್ರೀನಿವಾಸ, ನಾವು ಊಹಿಸಿಯೇ ಇರಲಿಲ್ಲ

ಯಕ್ಷಗಾನದ ಮೇರು ನಟನ ಕುರಿತು, ನೀ ಉನ್ನತ ಅಧ್ಯಯನ ಮಾಡ್ತೀಯ ಅಂತ

50 ವರ್ಷಗಳ ಹಿಂದೆ, ಮಲೆನಾಡಿನ  ಕಾಡುಕಣಿವೆಯ ಸುಂದರ ಪುಟ್ಟ ಹಳ್ಳಿ ಕಾಳಮಂಜಿಯಲ್ಲಿ, ನಮ್ಮನೆ ( ಶೇಡಿಮನೆ) ಯ ಹಿತ್ತಲಿನ, ದೊಡ್ಡ ಸಂಪಿಗೆಮರದ ಕೆಳಗೆ, ನೀನೂ ಮತ್ತು ನನ್ನ ತಮ್ಮ ಶ್ರೀಕಾಂತ (ಕಾಳಮಂಜಿ) , ಸೀರೆ – ಮಡಿ ಪಂಚೆಯಲ್ಲಿ ವೇದಿಕೆ ನಿರ್ಮಿಸಿ,  ಡಬ್ಬಿ , ಬಕೆಟ್ ಗಳನ್ನೇ ಚಂಡೆ ಮದ್ದಲೆಯನ್ನಾಗಿಸಿಕೊಂಡು, ಒಮ್ಮೊಮ್ಮೆ  ನನ್ನಂತಹ ಏಕೈಕ, ‘ಕಲಾಭಿಮಾನಿ  ಪ್ರೇಕ್ಷಕನ ಸಮ್ಮುಖದಲ್ಲಿ,   ಗಂಟೆ ಗಟ್ಟಲೇ ಯಕ್ಷಗಾನದ ಹುಡುಗಾಟದ ತಾದಾತ್ಮ್ಯತೆಯಲ್ಲಿ ಕಳೆದು ಹೋಗುತ್ತಿದ್ದಾಗ,

ಮುಂದೊಂದು ದಿನ ಹಂಪಿ ವಿಶ್ವವಿದ್ಯಾನಿಲಯದಿಂದ ರಂಗಸಂಕಥನಕಾರ ಚಿಟ್ಟಾಣಿ ರಾಮಚಂದ್ರ ಹೆಗಡೆ: ಒಂದು ಅಧ್ಯಯನಎಂಬ ಮಹಾಪ್ರಬಂಧಕ್ಕೆ, ನೀನು  ಡಿ-ಲಿಟ್ (ಡಾಕ್ಟರೇಟ್) ಪದವಿಯನ್ನು ಪಡೆಯುತ್ತೀಯ

ಎಂಬುದನ್ನು ನಾವು ಊಹಿಸಿಯೇ ಇರಲಿಲ್ಲ.

ಶ್ರೀನಿವಾಸ, ನಾವು ಊಹಿಸಿಯೇ  ಇರಲಿಲ್ಲ

ಒಂದು ದಿನ, ಭಾರತದ  ಪ್ರಧಾನಮಂತ್ರಿ ನಿನ್ನನ್ನು ದೆಹಲಿಗೆ ಕರೆಸಿಕೊಳ್ತಾರೆ ಅಂತ

50 ವರ್ಷಗಳ ಹಿಂದೆ , ವಿದ್ಯುತ್, ರಸ್ತೆ ಮುಂತಾದ ಯಾವ ಮೂಲ ಸೌಕರ್ಯವೂ ಇಲ್ಲದ ನಮ್ಮ ಕಾಳಮಂಜಿಯಲ್ಲಿ,, ಸ್ವಾಭಾವಿಕವಾಗಿಯೇ ,  ದೂರವಾಣಿ, ದೂರದರ್ಶನ ತಂತ್ರಜ್ಞಾನ ಪ್ರವೇಶವೇ ಆಗಿರದ ಕಾಲಘಟ್ಟದಲ್ಲಿ,    ಟ್ರಾನ್ಸಿಸ್ಟರ್ ರೇಡಿಯೋ ಎಂಬ ವಿಸ್ಮಯಕಾರೀಎಲೆಕ್ಟ್ರಾನಿಕ್ಸ್ ಉಪಕರಣದ ಮೂಲಕ,  ಧಾರವಾಡ, ಭದ್ರಾವತಿ  ಆಕಾಶವಾಣಿ ಬಿತ್ತರಿಸುತ್ತಿದ್ದ ವಾರ್ತೆ, ಸಂಗೀತ, ಹರಿಕಥೆ, ನಾಟಕ, ಕ್ರಿಕೆಟ್ ಕಾಮೆಂಟರಿ ಎಲ್ಲವನ್ನೂ , ಸಮಯ ಸಿಕ್ಕಾಗಲೆಲ್ಲಾ ಆಲಿಸಿ, ಆಸ್ವಾದಿಸುತ್ತಿದ್ದವರಲ್ಲಿ ನಾವು ಅನೇಕರು ಇದ್ದರೂ,

ಮುಂದೊಂದು ದಿನ ಇದೇ ರೇಡಿಯೋದಲ್ಲಿ  ದೇಶದ ಅನನ್ಯ,   ಮಹಾನ್ ನಾಯಕ, ಪ್ರಧಾನಿ ನರೇಂದ್ರ ಮೋದಿಯವರು,  ಪ್ರಖ್ಯಾತ ಜನಪರ ಕಾರ್ಯಕ್ರಮ  ಮನ್ ಕಿ ಬಾತ್ ನಲ್ಲಿ

ನಿನ್ನ ಕಲಾ ಸೇವೆ ಮತ್ತು ಸಾಧನೆಯನ್ನು ಗುರುತಿಸಿ, ಹೀಗೆ  ಶ್ಲಾಘಿಸಬಹುದು ಎಂಬುದನ್ನು ನಾವು ಊಹಿಸಿಯೇ ಇರಲಿಲ್ಲ :

 ‘ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ್ ಅವರು 25 ವರ್ಷಗಳಿಂದ ಪಟ್ಟುಬಿಡದೆ ತಮ್ಮನ್ಮು ತಾವು ತೊಡಗಿಸಿಕೊಂಡಿದ್ದಾರೆ. ಅವರ ಕಲಾಪೋಷಣೆ ಒಂದು ತಪಸ್ಸಿನಂತೆ ಮುಂದುವರಿದಿದೆ..............

https://drive.google.com/file/d/1aNWJ7YbyQ_PnoyijuYdMB_LAWNHJXgxU/view?usp=drive_link



ಶ್ರೀನಿವಾಸ,  ನಾವು ಊಹಿಸಿಯೇ ಇರಲಿಲ್ಲ

ದೆಹಲಿಯ ಗಣರಾಜ್ಯೋತ್ಸವ ಸಂದರ್ಭದಲ್ಲಿ, ಪ್ರಧಾನ ಮಂತ್ರಿಗಳು  ಗುರುತಿಸ್ತಾರೆ ಅಂತ

40 ವರ್ಷಗಳ ಹಿಂದೆ, ಕೇವಲ ಆರೆಂಟು ಮೈಲಿಗಳ ವ್ಯಾಪ್ತಿಯೊಳಗಿನ  ಕಾಳಮಂಜಿಲಿಂಗನಮಕ್ಕಿ, ಕಾರ್ಗಲ್, ಜೋಗ ಊರುಗಳನ್ನಷ್ಟೇ ನೋಡಿದ್ದ ನೀನು, ಪುಟ್ಟ ಊರು  ಕಾರ್ಗಲ್ಲಿನಲ್ಲಿ ಪ್ರತಿವರ್ಷ  ಜನವರಿ 26 ರ ಗಣರಾಜ್ಯೋತ್ಸವದ ಆಚರಣೆಯಲ್ಲಿ ಸಂಭ್ರಮಿಸುತ್ತಿದ್ದ ನೀನು,

ಮುಂದೊಂದು ದಿನ, ದೇಶದ ಪ್ರಧಾನ ಮಂತ್ರಿ, ನರೇಂದ್ರ ಮೋದಿಜೀಯವರ ಆದೇಶದಂತೆ, ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀಯ  , ಎಂಬುದನ್ನು ನಾವು ಊಹಿಸಿಯೇ ಇರಲಿಲ್ಲ.

 ಶ್ರೀನಿವಾಸ, ನಾವು ಊಹಿಸಿಯೇ ಇರಲಿಲ್ಲ

ನೀನೊಬ್ಬ ಹೋಟೆಲ್ ಉದ್ಯಮಿಯಾಗ್ತೀಯ, ಜೊತೆ ಜೊತೆಗೆ ಕಲೋಪಾಸನೆ ಮತ್ತು ಕಲಾಪೋಷಣೆಯಲ್ಲಿ ಗಮನಾರ್ಹ ಸಾಧನೆ ಮಾಡ್ತೀಯಾ ಅಂತ

 

ವಿದ್ಯುಕ್ತವಾಗಿ ನೀ ವ್ಯಾಸಂಗ ಮಾಡಿ ಪಡೆದದ್ದು ಚಿತ್ರಕಲಾ ಪದವಿ, ಪತ್ರಿಕೋದ್ಯಮ ಡಿಪ್ಲೊಮಾ ಪದವಿ. ಆದರೆ ಜೀವನ ನಡೆಸಲು  ನಿನ್ನದೇ ಆದ ಕಾರಣಗಳಿಂದ ನೀ ಆರಿಸಿಕೊಂಡಿದ್ದು, ಹೋಟೆಲ್ ಉದ್ಯಮ. ನೇಸರಹೋಟೆಲ್ ನ ಮಾಲಿಕ. ಹಾಗೆ ನೋಡ್ತಾ ಹೋದ್ರೆ, ನಮ್ಮ ಕಾಳಮಂಜಿಯಿಂದ ಉದ್ಯಮಿಯಾಗಿ ರೂಪುಗೊಂಡದ್ದು ನೀನೊಬ್ಬ ಮಾತ್ರ. 

ಸಾಮಾನ್ಯವಾಗಿ ಉದ್ಯಮಿ (Businessman) ಎಂದರೆ ನಮ್ಮ ಮನಸ್ಸಿಗೆ ಮೂಡುವ ಚಿತ್ರಣ ಸದಾ ತನ್ನ ವ್ಯವಹಾರಗಳಲ್ಲಿ ಮುಳುಗಿರುವ, ಉದ್ಯಮದಲ್ಲಿ ಎಷ್ಟು ಲಾಭ ಮಾಡಿದೆ ಎಂದು ಚಿಂತಿಸುವ, ಹಣಕಾಸಿನ ಲೆಕ್ಕಾಚಾರದ ಪುಸ್ತಕವೇ ಸಾಹಿತ್ಯ ಎಂಬಂತೆ ಭಾವಿಸುವ ವ್ಯಕ್ತಿ. ಆದರೆ , ನಿನ್ನ ತುಡಿತದ ಕಲೆ, ಸಾಹಿತ್ಯ, ಸಂಸ್ಕೃತಿ , ಗದುಗಿನಲ್ಲಿ ಪಸರಿಸಲು, ನೀನು ಕಟ್ಟಿ 25 ವರ್ಷಗಳ ಕಾಲ ಬೆಳೆಸಿದೆ  ಕಲಾಚೇತನಎಂಬ ಸಾಂಸ್ಕೃತಿಕ ಸಂಸ್ಥೆಯನ್ನು.

ಕನ್ನಡ ಸಾರಸ್ವತ ಲೋಕದ ದಿಗ್ಗಜರಾದ

ಡಾ. ಎಸ್​​.ಎಲ್. ಭೈರಪ್ಪ, ಪಾಟೀಲ ಪುಟ್ಟಪ್ಪ, ಡಾ. ಎಸ್.ಎನ್ ತಾರಾನಾಥ, ಡಾ. ವೀವೇಕ ರೈ, ಪ್ರೊ.ದೊಡ್ಡರಂಗೇಗೌಡ, ಡಾ. ಸುಮತೀಂದ್ರ ನಾಡಿಗ, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಸಂತೋಷ್ ಕುಮಾರ್ ಗುಲ್ವಾಡಿ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಅರವಿಂದ ಮಾಲಗತ್ತಿ, ಜಯಂತ ಕಾಯ್ಕಿಣಿ, ಇನ್ನೂ ಅನೇಕರ ಉಪನ್ಯಾಸಗಳನ್ನು ಆಯೋಜಿಸಿದೆ.

ಸಂಗೀತ ಲೋಕದ ಮೇರು ಕಲಾವಿದರ ಕಾರ್ಯಕ್ರಮಗಳನ್ನೂ ಆಯೋಜಿಸಿ, ಆ ಪ್ರಾಂತ್ಯದ ಸಂಗೀತಾಸಕ್ತರಿಗೆ ರಸದೌತಣ ಬಡಿಸಿದೆ.

 

ಇಲ್ಲಿ ಗಮನಿಸಲೇಬೇಕಾದ ಒಂದು ಅಂಶ ಅಂದರೆ ರಾಜಾಶ್ರಯವಿಲ್ಲದೆಯೇ (ಸರ್ಕಾರದ ಅತಿ ಕಡಿಮೆ ಆರ್ಥಿಕ ನೆರವನ್ನು ಪಡೆದು ), ನಿನ್ನ ಗಳಿಕೆಯ ಒಂದಿಷ್ಟು ಪಾಲನ್ನು ಈ ಕೈಂಕರ್ಯಕ್ಕಾಗಿ ಸದ್ವಿನಿಯೋಗಿಸಿದ್ದು.

 

ಶ್ರೀನಿವಾಸ , ನಾವು ಊಹಿಸಿಯೇ ಇರಲಿಲ್ಲ – ಈ ನಿನ್ನ ತುರ್ತು ನಿರ್ಗಮನವನ್ನು

------

ನನಗೆ ಚೆನ್ನಾಗಿ ಗೊತ್ತು,  ನೀನೊಬ್ಬ ಭಾವಜೀವಿ,  ಕನಸುಗಾರ, ಉತ್ಸಾಹದ ಚಿಲುಮೆ. ಹಾಗೆ ನೋಡಿದರೆ, ಕಳೆದ 40  ವರ್ಷಗಳಲ್ಲಿ, ನಾನೂ ನೀನೂ ಭೇಟಿಯಾದದ್ದು ಐದಾರು ಸಲ ಇರಬಹುದೇನೋ. ಆದರೆ, ಕಳೆದ ಹತ್ತು ವರ್ಷಗಳಿಂದ , ನೀ ನಿರಂತರವಾಗಿ ನನ್ನ ಜೊತೆ WhatsAppನ ಮೂಲಕ ಸಂಪರ್ಕದಲ್ಲಿದ್ದೆ. ನಿನ್ನ ಪ್ರಗತಿಯ ಒಂದೊಂದು ಹೆಜ್ಜೆಯನ್ನೂ  ಅದೆಷ್ಟು ಹೆಮ್ಮೆಯಿಂದ, ಖುಷಿಯಿಂದ ನನ್ನೊಂದಿಗೆ ಹಂಚಿಕೊಳ್ತಿದ್ದೆ. ನಿನ್ನ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲದ ಕುರಿತು ಹಂಚಿಕೊಳ್ಳುವಾಗ, ನಾ ಕಂಡಿದ್ದು , ಒಂದು ಬಗೆಯ ಸಾತ್ವಿಕ ಗರ್ವ. ಒಂದು ಮಗು ಶಾಲೆಯಲ್ಲಿ ಬಹುಮಾನ ಪಡೆದಾಗಅಪ್ಪ-ಅಮ್ಮನ ಜೊತೆ ಸಂಭ್ರಮಿಸುವ ಹಾಗೆ.

 ಅದೆಷ್ಟು ಕನಸುಗಳು-ಹಂಬಲ ನಿನಗೆ ! ಚಿಕ್ಕ-ಪುಟ್ಟ ಕನಸುಗಳೂ ಇದ್ದವು. ದೊಡ್ಡವೂ ಇದ್ದವು.

ನನಗೆ ಆಶ್ಚರ್ಯ ಅಂದರೆ, ನಿನ್ನ ಪ್ರಗತಿ, ನಲಿವನ್ನು ತೀವ್ರವಾಗಿ ಹಂಚಿಕೊಳುತ್ತಿದ್ದ  ನೀನು,  ನಿನ್ನ ನೋವುಗಳನ್ನು , ಸಮಸ್ಯೆಗಳನ್ನು  ಗಂಭೀರವಾಗಿ ಹಂಚಿಕೊಳ್ತಾನೇ  ಇರಲಿಲ್ಲ. ನಾನಾಗಿಯೇ ಕೆದಕಬೇಕಿತ್ತು.

ನಿನ್ನ ಅನಾರೋಗ್ಯದ ತೀವ್ರತೆ ಗೊತ್ತೇ ಇರಲಿಲ್ಲ. ಒಂದು ದಿನ ಇದ್ದಕಿದ್ದ ಹಾಗೆ ನೀ ಒಂದು ಸಂದೇಶ ಕಳಿಸಿದೆ. 

“”ನಾಳೆ ಬೆಳಿಗ್ಗೆ ಬೆಂಗಳೂರಿನ ಆಸ್ಟರ್ ಆರ್.ವಿ. ಆಸ್ಪತ್ರೆಯಲ್ಲಿ ಡಾ.ದಿವಾಕರ ಭಟ್ ಅವರು ನನ್ನ ಹೃದಯಕ್ಕೆ ಬೈಪಾಸ್ ಸರ್ಜರಿ ಮಾಡುತ್ತಾರೆ....” . ಜೊತೆಗೆ ವಾರ್ಡ ನ ಹಾಸಿಗೆಯ ಮೇಲೆ ಕುಳಿತು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವ ಫೋಟೋವನ್ನೂ ಕಳಿಸಿದ್ದೆ.

 ಕಳೆದ ತಿಂಗಳು  ನೀ ಕಣ್ಮರೆಯಾಗಿಯೇಬಿಟ್ಟೆ

ನಾವು ಊಹಿಸಿರಲಿಲ್ಲ , 58 ನೇ ವರ್ಷಕ್ಕೇ ನೀ ನಮ್ಮನ್ನೆಲ್ಲ ಅಗಲುತ್ತೀಯ ಅಂತ.

ಇಂತಹ ಸಂದರ್ಭದಲ್ಲಿ ನಾವು ಅಸಹಾಯಕತೆಯಿಂದ  ಸಾಂತ್ವನಗೊಳಿಸಿಕೊಳ್ಳುವುದು,

  ‘ವಿಧಿ ಲಿಖಿತ ವನ್ನು ಯಾರೂ ತಪ್ಪಿಸಿಕೊಳ್ಳಲಾಗುವುದಿಲ್ಲ ಅಂತ.

 ಆಘಾತವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾಗುತ್ತೆ.

 

ಶ್ರೀನಿವಾಸ

ನೀ ಈಗ ಇಲ್ಲ!!  ಆದರೂ   ಇದ್ದೀಯ

ನೀ ಭೌತಿಕವಾಗಿ(Physically )  ಇಲ್ಲ.

ಆದರೆ ನೀ ‘virtually’ ಇದ್ದೇ ಇರ್ತೀಯ ಇನ್ನೂ ಅನೇಕ ವರ್ಷಗಳ ಕಾಲ.

ಜನಮಾನಸದಲ್ಲಿ ಸುಳಿದಾಡ್ತಾನೇ ಇರ್ತೀಯ, ನಿನ್ನ ಜೀವಿತದ ಕಾಲದಲ್ಲಿ ಮಾಡಿದ ಸತ್ಕೈಂಕರ್ಯಗಳಿಂದಾಗಿ.

 

ನೀ ಬರೆದ ಪುಸ್ತಕಗಳಲ್ಲಿ,  

ನರೇಂದ್ರ ಮೋದಿಯವರ  ಮನ್ ಕೀ ಬಾತ್ನ ಮುದ್ರಣದ ಧ್ವನಿಯಲ್ಲಿ.

ಗದುಗಿನ ಹತ್ತಾರು ಸಾಹಿತ್ಯ-ಸಂಗೀತ ಕಾರ್ಯಕ್ರಮಗಳನ್ನು ಆಸ್ವಾದಿಸಿದ ಜನರ ನೆನಪುಗಳಲ್ಲಿ, ನನ್ನಂತಹ ಸ್ನೇಹಿತರಿಗೆ ನೀ ಕಳಿಸಿದ ಸಂದೇಶಗಳಲ್ಲಿ,

 ನಿನ್ನ ಅಸ್ತಿತ್ವ, ಅಸ್ಮಿತೆ ಅಮರ.

 ಶ್ರೀನಿವಾಸ

ಇದುವರೆವಿಗೆ ನಾವು ಊಹಿಸಿರದ ವಿಷಯಗಳ ಪಟ್ಟಿ ಮಾಡಿದೆ.

ಈಗ, ನಾವು ಊಹಿಸಿದ್ದ , ನಿರೀಕ್ಷಿಸಿದ್ದ  ವಿಷಯ ಹೇಳಿಬಿಡ್ತೀನಿ

ನೀನು ಜನಸಂಪತ್ತನ್ನು ಗಳಿಸಿಯೇ ಗಳಿಸ್ತೀಯ ಅಂತ

ಜನ್ನೆಮನೆ ಕುಟುಂಬವನ್ನು ನಾ ಬಾಲ್ಯದಿಂದಲೂ ನೋಡಿಕೊಂಡು ಬಂದವ. ನೀ ನಿನ್ನಪ್ಪನನ್ನು ಬೇಗ ಕಳೆದುಕೊಂಡೆ. ನಂತರ ನೀ ಬೆಳೆದದ್ದು , ನಿನ್ನಮ್ಮ, ನಿನ್ನಕ್ಕ ಸರೋಜಕ್ಕ , ನಿನ್ನಣ್ಣ ಗೋವಿಂದಣ್ಣಯ್ಯ  ನ ಆಶ್ರಯದಲ್ಲಿ.

ಈ ಸಂದರ್ಭದಲ್ಲಿ ಗೋವಿಂದಣ್ಣಯ್ಯನ ಬಗ್ಗೆ ಎರಡು ಮಾತನ್ನು ಬರೆಯಲೇಬೇಕು.

ಬಾಲ್ಯದಲ್ಲಿ ನನ್ನನ್ನೂ  ಎತ್ತಿ ಆಡಿಸಿದವ.

ನಾನು ಅತ್ಯಂತ ಗೌರವಿಸುವ, ಪ್ರೀತಿಸುವ,  ವ್ಯಕ್ತಿ ಆತ. KPC ಯಲ್ಲಿ ನೌಕರಿ ಮಾಡಿಕೊಂಡು, ಮನೆಯ  ಆರ್ಥಿಕ ಬಡತನದ ಸವಾಲನ್ನು  ಜಾಗರೂಕತೆಯಿಂದ ನಿರ್ವಹಿಸುತ್ತಿದ್ದ.

ಅಂದಿನಿಂದ ಇಂದಿನವರೆಗೂ ,  ಆತನ ವಿಶೇಷ ಗುಣ ಅಂದರೆ, ಜನಬಳಕೆ. ತನ್ನ ಸಜ್ಜನಿಕೆಯ , ಸ್ನೇಹಪರ ವರ್ತನೆಯಿಂದಾಗಿ  ಸ್ನೇಹ ಸಂಪತ್ತನ್ನು ಪಡೆದವ ಗೋವಿಂದಣ್ಣಯ್ಯ.

ಆ ಸಂಸ್ಕಾರವೇ ನಿನ್ನಲ್ಲಿ ರೂಢಿಗತವಾದದ್ದು.

ನೀ ಗಳಿಸಿದ, ಉಳಿಸಿದ ಆರ್ಥಿಕ ಸಂಪತ್ತಿನ ಬಗ್ಗೆ ನನಗೆ ಗೊತ್ತಿಲ್ಲ.  ಆದರೆ ನಿನ್ನ ಪರಿಶ್ರಮ , ಸಮಾಜದೊಂದಿಗೆ ಸದ್ವರ್ತನೆಯಿಂದ, ಉತ್ತಮ  ಜನಸಂಪತ್ತನ್ನು ಗಳಿಸಿದ್ದೀಯ ಎಂಬುದು ಸ್ಪಷ್ಟ.

 


ಯಾಕೋ, ಈ ಸಂದರ್ಭದಲ್ಲಿ, ‘ಕಾಳಮಂಜಿಯ ಬಗ್ಗೆಯೇ,  ಸಾತ್ವಿಕ ಗರ್ವದ ನುಡಿಗಳನ್ನು ಬರೆಯಬೇಕಿನಿಸ್ತಾ ಇದೆ.  

ಈ ಕಾಳಮಂಜಿ ಹಳ್ಳಿ ಒಂಥರಾ ವಿಶೇಷ ಹಳ್ಳಿ.

“ ಮೂರ್ತಿ ಚಿಕ್ಕದಾದರೂ , ಕೀರ್ತಿ ದೊಡ್ಡದು ದೊಡ್ಡದು” ಎಂಬ ಗಾದೆ ಪೂರ್ತಿ ಸೂಕ್ತ ಆಗುತ್ತೆ  

ಈ ಊರಿಗೆ. ಕಾಡು ಕಣಿವೆಯ ಭೌಗೋಳಿಕ ಸೌಂದರ್ಯದ ಜೊತೆಗೆ, ಈ ಹಳ್ಳಿ ಕಳೆದ 4 ದಶಕಗಳಲ್ಲಿ ಸೃಷ್ಟಿಸಿದ ಮಾನವ ಸಂಪನ್ಮೂಲ ‘ , ತನ್ಮೂಲಕ ತಂದುಕೊಟ್ಟ ಜನಪ್ರಿಯತೆ, ಶ್ಲಾಘನೀಯ.

ಕೇವಲ ಏಳು  ಸುಶಿಕ್ಷಿತ ಕುಟುಂಬಗಳಿರುವ ಈ ಹಳ್ಳಿಯಲ್ಲಿ ಜನಜೀವನ ಸಾಗ್ತಾ ಇದ್ದದ್ದುಒಂದು ಕಾಲದಲ್ಲಿ,  ಕೇವಲ ಕೃಷಿಯಿಂದ. ಸ್ವಾಭಾವಿಕವಾಗಿಯೇ ಆ ಕಾಲಘಟ್ಟದ ಅನಿವಾರ್ಯತೆ, ಅಸಹಾಯಕತೆ.

ಈಗ , ಕೃಷಿಯ ಜೊತೆಗೆ, ‘ಕಾಳಮಂಜಿ ಎಂಬ ವೃಕ್ಷದ ಪ್ರತಿಭಾನ್ವಿತ  ಬಿಳಿಲುಗಳು , ನಗರಗಳಲ್ಲಿ, ವಿದೇಶದಲ್ಲಿ ಹರಡಿರೋದು, ಹೆಮ್ಮೆಯ ಸಂಗತಿ.

ವೃತ್ತಿಪರ ಬಿಳಿಲುಗಳು – ಇಂಜಿನಿಯರಿಂಗ್,  ಬೋಧನೆ, ಚಾರ್ಟೆಡ್ ಅಕೌಂಟಿಂಗ್, ಸಂಶೋಧನೆ, ಪೌರೋಹಿತ್ಯ ಇತ್ಯಾದಿ

ಇನ್ನು ಸಾಂಸ್ಕೃತಿಕ ಕ್ಷೇತ್ರದ ಬಿಳಿಲುಗಳು ಅತ್ಯಂತ ಶ್ಲಾಘನೀಯ.  

ಸಂಗೀತ (ಶಾಸ್ತೀಯ ಮತ್ತು ಲಘು) ,

 ಸಾಹಿತ್ಯ

ಯಕ್ಷಗಾನ ( ತಾಳಮದ್ದಲೆ ಅರ್ಥಗಾರಿಕೆ) ,

ರಂಗಭೂಮಿ,

ನಿರೂಪಣೆ,

ಚಿತ್ರಕಲೆ,

ನೃತ್ಯ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಳಮಂಜಿಯ ಪ್ರತಿಭೆಗಳು, ಒಂದು ಸ್ತರದಲ್ಲಿ,  ಮಿಂಚಿವೆ, ಮಿಂಚುತ್ತಿವೆ. ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಯನ್ನು ನೀಡಿವೆ. ಸಾಮಾಜಿಕ ಜಾಲತಾಣದಲ್ಲಿಯೂ ಛಾಪನ್ನು ಮೂಡಿಸಿವೆ.

ಒಂದು ಸ್ತರದಲ್ಲಿದ್ದ,  ‘ಕಾಳಮಂಜಿಯ ಪ್ರತಿಭಾನ್ವಿತ ಸಾಂಸ್ಕೃತಿಕ ಸಂಪನ್ಮೂಲಕ್ಕೆ ,  ಅಧಿಕೃತವಾಗಿ   ರಾಷ್ಟ್ರಮಟ್ಟದ  ಪ್ರಖ್ಯಾತಿಯ ಗರಿ ಏರಿಸಿದ್ದು ನೀನು, ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ.

 

ಕಡೆಯದಾಗಿ, ನಮ್ಮ ಆಶಯ – ಪ್ರಾರ್ಥನೆ

ಸ್ವಾಭಾವಿಕವಾಗಿಯೇ, ನಿನ್ನ ಕುಟುಂಬದ ಸದಸ್ಯರಿಗೆ ( ಪತ್ನಿ ನರ್ಮದ , ಮಗ  ನೇಸರ ಮತ್ತು ಮಗಳು ಇಬ್ಬನಿ) ಅಗಿರುವ  ದುಃಖದ ಆಳ, ಅಷ್ಟು ಸುಲಭವಾಗಿ ಮೂರನೆಯವರಿಗೆ ಅರ್ಥ ಆಗಲು ಸಾಧ್ಯವೇ ಇಲ್ಲ. ಬಂಧುಮಿತ್ರರು ಔಪಚಾರಿಕವಾಗಿ ಹೇಳುವ ಸಾಂತ್ವನದ ನುಡಿಗಳೂ ಬೇಡ ಅನಿಸುತ್ತೆ.  

 ಭೂತಕಾಲದ ಕೊರಗು

ಭವಿಷ್ಯತ್ತಿನ ಆತಂಕ, ಭಯ ದಿಂದಾಗಿ

ವರ್ತಮಾನ ಕ್ಷಣಗಳು ಕಾರ್ಮೋಡದಿಂದ ಕವಿದಿರುತ್ತೆ.

ಆದರೂ....

ಆದರೂ...

ಜೇವನ ಸಾಗಲೇಬೇಕು. ಕ್ರಮೇಣ , ಹೊಸ ಅಧ್ಯಾಯ ಪ್ರಾರಂಭಿಸಲೇಬೇಕು.  ಆ ಜವಾಬ್ದಾರಿ ನಿನ್ನ ಪತ್ನಿ ನರ್ಮದಳ ಮೇಲಿದೆ.  ನಿನ್ನ ಮಗ ನೇಸರ, ಮಗಳು  ಇಬ್ಬನಿ ಭವಿಷ್ಯ ಅರ್ಥಪೂರ್ಣವಾಗಿ ರೂಪುಗೊಳ್ಳಲೇಬೇಕು.

 ನಿನ್ನ ಪತ್ನಿ ನರ್ಮದಳಿಗೆ  ಹೋರಾಟದ ಬದುಕು ಹೊಸದಲ್ಲ. ಸಂಕಲ್ಪ ಶಕ್ತಿ, ಅನುಭವ, ಸ್ಥೈರ್ಯ ಎಲ್ಲವೂ ಇದೆ. ನಿನ್ನ ಹೋಟೆಲ್ ಉದ್ಯಮವನ್ನೇ ಸುಗಮವಾಗಿ   ಮುಂದುವರೆಸಿಕೊಂಡು ಹೋಗ್ತಾಳೆ ಎಂಬ ಭರವಸೆ ನನಗಿದೆ.

ಇಂಜಿನಿಯರಿಂಗ್ ವ್ಯಾಸಂಗದ ಕೊನೆಯ ಹಂತದಲ್ಲಿರುವ ನೇಸರನ ವ್ಯಕ್ತಿತ್ವದಲ್ಲಿ  ಪ್ರಬುದ್ಧತೆ ಇದೆ. ( ಆಶಾವಾದಿತ್ವ, ಬುದ್ಧಿವಂತಿಕೆ ಮತ್ತು ವಿಚಾರವಂತಿಕೆ ).  

ಇಬ್ಬನಿಯ ಬಗ್ಗೆ ನನಗೆ ಹೆಚ್ಚಿಗೆ ಗೊತ್ತಿಲ್ಲ.

ನೀನು ಮತ್ತು ನರ್ಮದ ಸಂಪಾದಿಸಿರುವ ಜನಸಂಪತ್ತು’ , ಕಾಳಮಂಜಿ ಸದಸ್ಯರ ಸಹಕಾರ, ನಿಮ್ಮ ಕುಟುಂಬದ ಭವಿಷ್ಯವನ್ನು ಚಂದಗಾಣಿಸಬಹುದೆಂಬ ಆಶಾವಾದ ನನಗಿದೆ.

ಕಾಲ, ಎಂತಹ ಕದಡಿದ ವಾತಾವರಣವನ್ನು ತಿಳಿಗೊಳಿಸುತ್ತೆ.

ನಿನ್ನ ಕುಟುಂಬದ ಎಲ್ಲಾ ಸದಸ್ಯರೂ,  ದುಃಖದಿಂದಾಚೆ ಬಂದು, ತಮ್ಮ ತಮ್ಮ ಕರ್ತವ್ಯಗಳನ್ನು ಬದ್ಧತೆಯಿಂದ ನಿರ್ವಹಿಸಿ, ಬದುಕನ್ನು  ಚಂದವಾಗಿ ಕಟ್ಟಿಕೊಳ್ಳಲಿ, ಮತ್ತೆ ಉತ್ಸಾಹ ಚಿಗುರಲಿ  ಎಂಬುದು ನನ್ನ ಆಶಯ ಮತ್ತು ಆ ಜಗನ್ನಿಯಾಮಕ ಶಕ್ತಿಯಲ್ಲಿ ಪ್ರಾರ್ಥನೆ .

ನಿನಗೆ ನುಡಿನಮನದ ಈ ಪತ್ರವನ್ನು ಸಂಪನ್ನಗೊಳಿಸುತ್ತಿದ್ದೇನೆ.

ಅಗಲಿಕೆ ಅನಿವಾರ್ಯ – ನೆನಪು ಚಿರಂತನಎಂಬ ಉಕ್ತಿಯಿಂದ

- ಇಂತಿ ನಿನ್ನಾತ್ಮೀಯ

ಚಿದಂಬರಣ್ಣ ಕಾಳಮಂಜಿ  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ