ಮೆಟ್ಟಿಲಿಗೆ ಮಣಿದ ಮೂರ್ತಿ


 


                               ಮೆಟ್ಟಿಲಿಗೆ ಮಣಿದ ಮೂರ್ತಿ

ಹೌದು,

ಅದು ಖಂಡಿತಾ ಒಂದು ಅಸಾಮಾನ್ಯ , ಅಪರೂಪದ, ಅಚ್ಚರಿಯ ದೃಶ್ಯವೇ!!

ಪ್ರತಿದಿನ ನೂರಾರು ಭಕ್ತರಿಂದ ನಮಸ್ಕರಿಸಲ್ಪಡುವ  ಸುಂದರ ದೈವಮೂರ್ತಿ,  ಸಾಷ್ಟಾಂಗ ನಮಸ್ಕಾರ ಮಾಡಿತು;  

ಯಾರಿಗೆ ?

ಮೆಟ್ಟಿಲುಗಳಿಗೆ  !!    

*******************

ಯಾಕೆ?

*****************

ಅದೊಂದು ಸುಂದರ ದೇವಸ್ಥಾನ. ಎತ್ತರದ ಗುಡ್ಡದ ತುದಿಯಲ್ಲಿ.

ಒಳಗೆ ಗರ್ಭಗುಡಿಯಲ್ಲಿ ಅಲಂಕೃತವಾಗಿ , ರಾರಾಜಿಸುತ್ತಿರುವ ಸುಂದರ ದೇವರಮೂರ್ತಿ.

ಮಧ್ಯಾಹ್ನದ ಒಳಗಿನ ಪೂಜೆ ಪುನಸ್ಕಾರಗಳು ಮುಗಿದಿವೆ.  

ಇನ್ನು ಸಂಜೆಯ ವರೆಗೆ ಗರ್ಭಗುಡಿಯ ಬಾಗಿಲು ಮುಚ್ಚಿರುತ್ತೆ.

ಈ ಅವಧಿಯಲ್ಲಿ , ದೈವಮೂರ್ತಿಗೆ ವಿರಾಮ.  ಭಕ್ತರ, ಅರ್ಚಕರ ಕಾಟಇಲ್ಲ.

ಇದ್ದಕಿದ್ದಂತೆಯೇ ಆ ಮೂರ್ತಿ, ಗರ್ಭಗುಡಿಯ ಬಾಗಿಲನ್ನು ತೆರೆದು ಆಚೆ ಬಂದಿತು. ನಂತರ ಹೆಬ್ಬಾಗಿಲನ್ನೂ ದಾಟಿ, ಸುತ್ತಲಿನ ಪ್ರಾಕೃತಿಕ ಪರಿಸರವನ್ನು ವೀಕ್ಷಿಸತೊಡಗಿತು. ಯಾಕೋ ಏನೋ ದೇವಸ್ತಾನಕ್ಕೆ ಸಾಚಿಕೊಂಡಿದ್ದ ನೂರಾರು ಮೆಟ್ಟಿಲಗಳ ಮೇಲೆ ಅದರ ದೃಷ್ಟಿ ಬಿದ್ದಿತು.

ಅವುಗಳನ್ನು ನೋಡುತ್ತಾ ನೊಡುತ್ತಾ, ಅಂತರಂಗದಲ್ಲಿ,  ನೆನಪುಗಳು ಸುಳಿದಾಡಿದವು.   ತನ್ನ ಈಗಿನ   ಎತ್ತರದ ಸ್ಥಾನ, ಈ ಸ್ಥಾನವನ್ನೇರಲು ನಡೆದ ಘಟನಾವಳಿಗಳ ಮೆಲುಕು ಹಾಕತೊಡಗಿತು.  ಅದರಲ್ಲಿಯೂ , ಆ ಮೆಟ್ಟಿಲುಗಳ ಜೊತೆಯ  ತುಲನಾತ್ಮಕ ವಿಶ್ಲೇಷಣೆ ನಡೆಯಿತು.

ಇದ್ದಕ್ಕಿದ್ದಂತೆ ತನ್ನಂತರಂಗದ ಭಾವನೆಗಳನ್ನು     ಮೆಟ್ಟಿಲುಗಳಿಗೆ ಬಹಿರಂಗಪಡಿಸುವ ಚಡಪಡಿಕೆ  ಹೆಚ್ಚಾಯಿತು.

ಪ್ರಾರಂಭಿಸಿಯೇಬಿಟ್ಟಿತು ಮಾತುಗಳನ್ನು.

ಓಹೋಯ್ – ಇತ್ತ ಗಮನಿಸಿ , ನನ್ನ ಸೋದರ ಮೆಟ್ಟಿಲುಗಳೇ,

ಇದೋ ನಾನು ಬಂದಿದ್ದೇನೆ.

ಅಯ್ಯೋ ಪಾಪ!! ಕನಿಕರ ಆಗ್ತಾ ಇದೆ ನನಗೆ ನಿಮ್ಮ ಈ ಅವಸ್ಥೆ ನೋಡಿ. ಪ್ರತಿದಿನ ನೂರಾರು ಮಂದಿಯ ಕಾಲ್ತುಳಿತಕ್ಕೆ, ಕಾಲಧೂಳಿಗೆ ಬಲಿಪಶುಗಳು ನೀವು.  ಆದರೆ ನಾನು, ಅದೇ ನೂರಾರು ಭಕ್ತರಿಂದ  ಪೂಜಿಸಿಕೊಳ್ಳುತ್ತಿರುವ ಸುಂದರ ದೈವಮೂರ್ತಿ. ಪ್ರತಿದಿನ ಅಭಿಷೇಕ, ಪುಷ್ಪಾರ್ಚನೆ , ಮಂಗಳಾರತಿ, ಭಕ್ತರ ಜೈಘೋಷ, ಭಜನೆ ಗಳಲ್ಲಿ ವಿಜೃಂಭಿಸುತ್ತಿದ್ದೇನೆ.

ವಿಪರ್ಯಾಸ ಏನು ಗೊತ್ತಾ? ನಾನೂ , ನೀವೂ ಒಂದೇ ಸ್ಥಳದಿಂದ ಬಂದವರು.

ಆದರೆ, ಯಾಕೆ ನಾನು ಹೀಗೆ ? ನೀವು ಹಾಗೆ ?

ಮೂರ್ತಿಯ ಆ  ಧ್ವನಿಯಲ್ಲಿ ಸ್ವಪ್ರತಿಷ್ಟೆ ,  ಅಹಂಕಾರ ತುಂಬಿ ತುಳುಕ್ತಾ ಇತ್ತು, ( ಮೆಟ್ಟಿಲುಗಳ ಮೇಲೆ ತಿರಸ್ಕಾರದ ಭಾವದ ಜೊತೆಗೆ)

ಮುಂದುವರೆಸಿತು ತನ್ನ ನುಡಿ ಪ್ರಹಾರವನ್ನು

ನೆನಪು ಮಾಡಿಕೊಳ್ಳಿ. ಅಂದೊಂದು ದಿನದ, ಆ ಕ್ಷಣಗಳನ್ನು.   

ಅಂದು ನಾವು ಹತ್ತಾರು  ಕಲ್ಲುಬಂಡೆಗಳು,  ಅಂದ ಆಕಾರವಿಲ್ಲದೆಯೇ, ಯಾರನ್ನೂ ಆಕರ್ಷಿಸುವ ಗುಣಗಳಿಲ್ಲದೆಯೇ, ಅಚಲರಾಗಿ ಕುಳಿತಿದ್ದಾಗ, ಬಂದ  ಆ ಶಿಲ್ಪಿ.

ಬರುವಾಗ ಬರಿಗೈಲಿ ಬರಲಿಲ್ಲ. ಉಳಿ,ಚಾಣ,ಸುತ್ತಿಗೆ ಹಿಡಿದುಕೊಂಡೇ ಬಂದಿದ್ದ.

ನಮ್ಮೆಲ್ಲರನ್ನೂ ಕೇಳಿದ.

“ ನಿಮ್ಮನ್ನು ಸುಂದರ ದೇವರಮೂರ್ತಿಗಳನ್ನಾಗಿ  ಪರಿವರ್ತಿಸಲು ಬಂದಿದ್ದೇನೆ. ಯಾರೆಲ್ಲಾ  ತಯಾರಿದ್ದೀರಿ?”

ನಮ್ಮೆಲ್ಲರಿಗೂ ಪರಮ ಸಂತೋಷ, ಉದ್ವೇಗ. ಅಸ್ತಿತ್ವವೇ ಇಲ್ಲದ ನಮಗೊಂದು ಅಪೂರ್ವ ಅವಕಾಶ ಸಿಗ್ತಾ ಇದೆ.

ಎಲ್ಲರೂ ಒಕ್ಕೊರಲಿನಿಂದ ಒಪ್ಪಿದೆವು.

ಆತ ಮುಂದುವರೆಸಿದ ಆತ ತನ್ನ ಮಾತುಗಳನ್ನು

“ ಸರಿಯಾಗಿ ಕೇಳಿಸಿಕೊಳ್ಳಿ. ನಿಮ್ಮ ಉತ್ಸಾಹಕ್ಕೆ ಧನ್ಯವಾದಗಳು. ನಿಮ್ಮನ್ನು ಮೂರ್ತಿಗಳನ್ನಾಗಿ ಮಾಡಲು ಸುಮಾರು ಒಂದು ತಿಂಗಳು ಬೇಕು ನನಗೆ. ನಾನು ನನ್ನ ಉಳಿ, ಚಾಣ, ಸುತ್ತಿಗೆಗಳಿಂದ  ನಿಮ್ಮಲ್ಲಿ ಬೇಡವಾದ ಭಾಗಗಳನ್ನೆಲ್ಲಾ ಕಿತ್ತೆಸೆದು, ನಂತರ ಸುಂದರ ವಿನ್ಯಾಸವನ್ನು ಕೆತ್ತಲಿದ್ದೇನೆ. ಒಂದು ದೈವಮೂರ್ತಿಯಾಗಿ  ಎತ್ತರದ ಸ್ಥಾನಕ್ಕೇರುವ ಅವಕಾಶ ನಿಮಗೆ.

ಆದರೆ,

ನಿಮಗೆ ಸಹಿಸಲಾಗದಷ್ಟು ನೋವು, ಯಾತನೆಯುಂಟಾಗುತ್ತೆ.

ಉಳಿಯ ಒಂದೊಂದು ಪೆಟ್ಟು ಬಿದ್ದಾಗಲೂ ನಿಮ್ಮ ಪ್ರಾಣವೇ ಹೋದ ಹಾಗೆ ಆಗುತ್ತೆ.

ಸಿದ್ಧರಿದ್ದೀರಾ?”

ಒಂದು ಕ್ಷಣ ಮೌನ; ಸ್ವಲ್ಪ ಸಮಯದ ನಂತರ ಗುಸು ಗುಸು ಪಿಸು ಪಿಸು.

“ಅಯ್ಯೋ, ಯಾರಿಗೆ ಬೇಕು ಈ ಗೋಳು? ಈಗಿರೋ ಹಾಗೆಯೇ ಬಿದ್ಗೊಂಡಿರೋಣ”  ಅಂತ ಕೆಲವು ಬಂಡೆಗಳು.

“ಆಸೆಯೇನೋ ಇದೆ, ಆದರೆ ದೈರ್ಯ ಇಲ್ಲ”  ಅಂತ ಇನ್ನೊಂದಿಷ್ಟು ಬಂಡೆಗಳು.

ನಾವು ದೈವಮೂರ್ತಿಗಳಾಗಿ ಏನಾಗಬೇಕಾಗಿದೆ?” ಮತ್ತೊಂದಿಷ್ಟು ಬಂಡೆಗಳು.

...

...

ಹೀಗೆ ಒಂದೊಂದು ಬಂಡೆಯದೂ ಒಂದೊಂದು ಗೊಣಗಾಟ.

ಇಂತಹ ಸನ್ನಿವೇಶದಲ್ಲಿ , ಗಟ್ಟಿ ಸಂಕಲ್ಪಮಾಡಿ, ಧೈರ್ಯದಿಂದ ಮುಂದೆ ಬಂದವನು ನಾನು.

ನೀವೆಲ್ಲರೂ ಹಿಂದೆ ಸರಿದಿರಿ.

ನಂತರ

ಅಪಾರ ನೋವನ್ನು ಅನುಭವಿಸಿದೆ.

ಆದರೆ ಒಂದು ದಿನ, ನಾನು ಅತಿ ಸುಂದರ, ಭವ್ಯವಾದ ದೈವಮೂರ್ತಿಯಾದೆ

 

ಆದರೆ ನಿಮ್ಮ ಅವಸ್ಥೆ?

ಆ ಶಿಲ್ಪಿಯಿಂದ ಏನೋ  ನೀವು   ತಪ್ಪಿಸಿಕೊಂಡಿರಿ. ಆದರೆ ದೇವಸ್ತಾನದ ಕಟ್ಟೋರು, ನಿಮ್ಮನ್ನೆಲ್ಲಾ ಮೆಟ್ಟಿಲು ಮಾಡಿ, ಇಲ್ಲಿ ಜೋಡಿಸಿದರು. ನೀವೂ ಪೆಟ್ಟು ತಿಂದಿರಿ. ಆದರೆ ನನ್ನಷ್ಟಲ್ಲ.   

ಅಂದು ನಾನು ತೆಗೆದುಕೊಂಡ ನಿರ್ಧಾರದಿಂದ ನನ್ನದು  ಶ್ರೇಷ್ಠ ಸ್ಥಾನ  

ಆದರೆ, ನಿಮ್ಮ ನಿರ್ಧಾರದಿಂದ, ನಿಮ್ಮದು ಕನಿಷ್ಟ ಸ್ಥಾನ

ಇನ್ನೂ ಮುಂದುವರೆಸುವುದರಲ್ಲಿತ್ತು .

“ ಏಯ್  ಮಹಾಮೂರ್ತಿಯೇ , ನಿಲ್ಲಿಸು ನಿನ್ನ  ಭಾಷಣವನ್ನು”

ಹೀಗೊಂದು ತಾರಕ ಧ್ವನಿ ಉದ್ಭವಿತು  ಒಂದು ಮೆಟ್ಟಿಲಿಂದ.

ನಿನ್ನ ಮಾತುಗಳನ್ನು ಸಾವಧಾನದಿಂದ ಕೇಳಿಸಿಕೊಂಡಿದ್ದೇವೆ. ಅದು ಅನಿವಾರ್ಯ ಆಗಿತ್ತು ನಮಗೆ. ಯಾಕೇಂದ್ರೆ ನಾವು ಇಲ್ಲಿಂದ ಓಡಿ ಹೋಗೋಕೆ ಆಗೋಲ್ವಲ್ಲ?

ಈಗ  ಕೇಳಿಸಿಕೊಳ್ಳೋದು ನಿನ್ನ ಸರದಿ. ಕೇಳುವ ಸಹನೆ ಇದೆ ತಾನೇ? ”

ಮೂರ್ತಿ ವಿಕಟವಾಗಿ ನಕ್ಕು

 “ ಓಹೋ, ನಿಮಗೂ ಹೇಳಲಿಕ್ಕೇನಾದರೂ ಇದೆಯೋ, ಬೇಗ ಹೇಳಿ ಮುಗಿಸಿ ?”

ಮೆಟ್ಟಿಲು ಮುಂದುವರೆಸಿತು

ಅನಿರೀಕ್ಷಿತವಾಗಿ ನಿನ್ನಿಂದ ಸುರಿದ ಸ್ವಪ್ರಶಂಸೆ ಮತ್ತು ನಮ್ಮ ಕುರಿತ ಅವಹೇಳನ ಮಾತುಗಳನ್ನು  ಆಲಿಸಿದ್ದೇವೆ . ಈಗ ನಮಗಿರುವ (ನಿನಗೂ ನಾವು ಕೊಡುವ )  ಆಯ್ಕೆಗಳು

1.  ನಿನ್ನ ಮಾತುಗಳನ್ನು ಒಪ್ಪಿ, ನಿನಗೆ ಜೈಕಾರ ಹಾಕಿ,  ನಮ್ಮ ಹಣೇಬರಹವೇ ಹೀಗೆ,  ಏನ್ಮಾಡೋಕಾಗುತ್ತೆ ಅಂತ ಅತ್ತು ಸುಮ್ಮನಿರೋದು.

2.  ನಿನ್ನ ಉದ್ವೇಗದ ಮಾತುಗಳಿಗೆ ಕೆರಳಿ ಕೆಂಡವಾಗಿ, ನಿಯಂತ್ರಣ ಮೀರಿ, ಕೀಳುಮಾತುಗಳಿಂದ  ನಿನ್ನನ್ನು  ಅವಹೇಳನ ಮಾಡುವುದು.

3.  ಸಮಾಧಾನದಿಂದ ನಮ್ಮ  ಆತ್ಮಗೌರವದ ವಿಚಾರಗಳನ್ನು ನಿನಗೆ ಮನದಟ್ಟುಮಾಡುವುದು. 

 ಯಾವುದು ಬೇಕು ಹೇಳು?”

ಮೂರ್ತಿಗೆ,  ಮೆಟ್ಟಿಲಿನ ಈ ಪ್ರತಿಕ್ರಿಯೆ ಅನಿರೀಕ್ಷಿತ, ಜೊತೆಗೇ ಕುತೂಹಲ.

 ಒಲ್ಲದ ಮನಸ್ಸಿನಿಂದ ಹೇಳಿತು

“ ಸರಿ, ಮೂರನೇ ಆಯ್ಕೆ ನನ್ನದು, ಹೇಳಿ ಮುಗಿಸು ಬೇಗ ”

-------

 “ಹೌದು, ನಿನ್ನ ಅಂದಿನ ಆ ಧೄಡನಿರ್ಧಾರವನ್ನು,  

ನೀ ಕಲ್ಲಿನ ರೂಪದಿಂದ  ಸುಂದರ ಮೂರ್ತಿಯಾಗಲು ಅನುಭವಿಸಿದ ನೋವನ್ನು

ಮೆಚ್ಚಿದ್ದೇವೆ,

ಹೆಮ್ಮೆಪಟ್ಟಿದ್ದೇವೆ.

ನೀ ಪ್ರತಿಷ್ಠಾಪನೆಗೊಂಡಿರುವ ದೇವಸ್ಥಾನದಲ್ಲಿಯೇ ಮೆಟ್ಟಿಲಾಗಿರುವುದು ನಮ್ಮ ಭಾಗ್ಯ ಎಂದೇ ಭಾವಿಸಿದ್ದೇವೆ.

ಆದರೆ

ಇಂದು ನಮಗೆ ಅನಿರೀಕ್ಷಿತ ನಿರಾಸೆ, ಆಘಾತ , ನಿನ್ನ ದುರಹಂಕಾರದ ಮತುಗಳಿಂದ.

ನೀನೇ ಶ್ರೇಷ್ಠ ,

ನಾವು, ಮೆಟ್ಟಿಲುಗಳು ಕನಿಷ್ಟ ಎಂಬ ನಿನ್ನ ಅಸಡ್ಡೆಯ ಮಾತುಗಳಿಗೆ

ಇದೋ ನಮ್ಮ ಪ್ರತಿವಾದ :

ಗೊತ್ತಿದೆ ತಾನೇ ನಿನಗೆ?

ನಾವಿರದಿದ್ದರೆ, ಎತ್ತರದಲ್ಲಿರುವ ನಿನ್ನನ್ನು  ದರ್ಶನ ಮಾಡಲು ಬರುವ ಭಕ್ತರಿಗೆ  ಸಾಧ್ಯವೇ ಆಗುತ್ತಿರಲಿಲ್ಲ. ನೀ ಒಂಟಿಯಾಗಿಯೇ ಇರಬೇಕಿತ್ತು ಗುಡ್ಡದ ತುದಿಯಲ್ಲಿ. ನಿನ್ನ ಅಸ್ತಿತ್ವಕ್ಕೆ,  ಅಸ್ಮಿತೆಗೆ  ನಾವೂ ಅನಿವಾರ್ಯ.

ಭಕ್ತರ ನಡಿಗೆಯನ್ನು ಕಾಲ್ತುಳಿತ ಎಂದು ನಾವು ಎಂದೂ ಭಾವಿಸಿರಲಿಲ್ಲ. ತಮ್ಮ ಭಕ್ತಿಭಾವಾಂತರಂಗದಿಂದ ನಿನ್ನೊಳಗಿನ ದೈವವನ್ನು  ಕಂಡು , ಭಕ್ತರು ಪಡೆಯುವ ಪುಣ್ಯದಲ್ಲಿ ನಮಗೂ ಪಾಲು ಸಿಗ್ತಾ ಇದೆ ಎಂಬ ಪುನೀತ ಭಾವ ದಲ್ಲಿರುವವರು ನಾವು.

ನೀನು ಸುಂದರ ಮೂರ್ತಿಯಾಗುವಾಗ ,   ಶಿಲ್ಪಿಯಿಂದ ಉಳಿ, ಚಾಣ, ಸುತ್ತಿಗೆಯ ನೋವನ್ನು ಅನುಭವಿಸಿರಬಹುದು. ಆದರೆ ನಾವು, ಸದಾಕಾಲ ,  ಮಳೆ , ಬಿಸಿಲು, ಚಳಿ ಎಲ್ಲವನ್ನೂ ಸಹಿಸಿಕೊಂಡು ನಿನ್ನ ಸೇವೆ ಸಲ್ಲಿಸುತ್ತಿದ್ದೇವೆ.  ಗರ್ಭಗುಡಿಯಲ್ಲಿ ಸುರಕ್ಷಿತವಾಗಿ, ವೈಭವಯುತವಾಗಿ ವಾಸಿಸುವ ನಿನಗಿಂತಲೂ ನಾವು ಕಷ್ಟಸಹಿಷ್ಣುಗಳು.

ಇದಿಷ್ಟು ಸಾಕು ಅನಿಸುತ್ತೆ , ನಿನ್ನ ಸ್ಥಾನ ಎಷ್ಟು ಶ್ರೇಷ್ಠವೋ,  ಅಷ್ಟೇ ಶ್ರೇಷ್ಠ ನಮ್ಮದೂ ಎಂದು ಸಾಬೀತು ಪಡಿಸಲು”

ಮೂರ್ತಿಯ ಚಹರೆ ಈಗ ಸಂಪೂರ್ಣ ಬದಲಾಯಿತು.

ಮೆಟ್ಟಿಲು ಮುಂದುವರೆಸಿತು.

“ಹಾಂ!

ಯಾಕೋ ನಮಗೀಗ ಬಲವಾಗಿ ಸಂದೇಹ ಮೂಡ್ತಾ ಇದೆ.

ಇಂದು ಮಾತಾಡಿದ ನೀನು ದೈವಮೂರ್ತಿಯಲ್ಲ , ಕೇವಲ ಕಲ್ಲಿನ ಮೂರ್ತಿ, ಅಂದರೆ ದೇವಾಲಯದ  ಅರ್ಚಕರು,  ನಿನ್ನೊಳಗೆ ದೈವದ ಆವಾಹನೆ ಮಾಡಿರಲಿಲ್ಲವೇನೋ!!

ನೀ ದೈವಮೂರ್ತಿಯೇ ಆಗಿದ್ದಿದ್ದರೆ, ಇಂತಹ ಅಪ್ರಬುದ್ಧ, ಘನತೆರಹಿತ ಮಾತುಗಳು ಬರುತ್ತಿರಲಿಲ್ಲ.

....

....

.....

******************

ದೈವಮೂರ್ತಿ ಸ್ಥಬ್ದ – ಮೌನ

ಬಾಗಿತು,

ಸಾಷ್ಟಾಂಗ ನಮಸ್ಕಾರ ಮಾಡಿತು ಮೆಟ್ಟಿಲುಗಳಿಗೆ

*****

ನನಗೆ ಈಗ ದ್ವಂದ್ವ .

ಮೂರ್ತಿಗೆ ನಮಸ್ಕರಿಸಬೇಕೋ?

ಮೆಟ್ಟಿಲುಗಳಿಗೋ?

!!!!????

ಕಾಮೆಂಟ್‌ಗಳು