“ಅಜ್ಜಾ, ದೇವರು bad boy”

ತೊದಲುನುಡಿದೀಪ

{ಬರಹ ಮಾಲಿಕೆ }

***********

ಸಂಚಿಕೆ #6 

*********

ಅಜ್ಜಾ,  ದೇವರು bad boy”

*******




ಕೃಪೆ :

ಶ್ರೀಮತಿ ಜ್ಯೋತಿ ಕಾಮತ್ (ನಾವು ಪ್ರತಿದಿನ ಹಾಲು ಮೊಸರು ಖರೀದಿಸುವ ಅಂಗಡಿಯವರು ) ಹಂಚಿಕೊಂಡ,  ಅವರ ಮೊಮ್ಮಗಳ ಜೊತೆಯ ಸ್ವಾರಸ್ಯಕರ  ಸಂವಾದಕ್ಕೆ , ನಾನು ಸ್ವಲ್ಪ ರೆಕ್ಕೆ ಪುಕ್ಕಹಚ್ಚಿದ್ದೇನೆ

**********

ಎರಡೂವರೆ ವರ್ಷದ ಮೊಮ್ಮಗಳು  ನನ್ನ ತೊಡೆ ಮೇಲೆ ಕುಳಿತಿದ್ಲು-  ತನ್ನ ಗೊಂಬೆ ಲಚ್ಚಿಗೆ ಜೋಗುಳ ಹಾಡಿ ಮಲಗಿಸ್ತಾ ಇದ್ಲು.

ಇದ್ದಕ್ಕಿದ್ದಂತೆಯೇ ಎಸೆದಳು ಒಂದು ಪ್ರಶ್ನೇನಾ

ಅಜ್ಜಾ ದೇವರು good boy ನಾ bad boy ನಾ?”

{ಥಟ್ಟನೆ ಉತ್ತರಿಸಿದೆ }

ದೇವರು good boy ಪುಟ್ಟ

ಅಜ್ಜಾ ನಿನ್ನ ಹೆಸರೇನು ?”

{ಇದೇನಪ್ಪಾ , ಮೊದಲನೇ ಪ್ರಶ್ನೆಗೂ ಎರಡನೇ ಪ್ರಶ್ನೆಗೂ ಸಂಬಂಧವೇ ಇಲ್ಲ??  - ಇವಳು ಯಾವಾಗ್ಲೂ ಇದೇ ಥರ ಪ್ರಶ್ನೆ ಕೇಳೋದು )

“ನನ್ನ ಹೆಸರು ಚಿದಂಬರ – ನೀನು ಚಿದು ಅಜ್ಜ ಅಂತ ಕರೀತೀಯಲ್ಲ ?”

{ ಎರಡು ನಿಮಿಷ ಅಲ್ಪವಿರಾಮ ,

ತನ್ನ ಗೊಂಬೆ ಲಚ್ಚಿ ಮಲಗಿಸೋದ್ರಲ್ಲಿ ಅವಳು ನಿರತ }

........

.........

ಮತ್ತೆ ಪ್ರಶ್ನೆ

“ಅಜ್ಜಾ ನಿನ್ನಪ್ಪನ ಹೆಸರು ಏನು?”

{ಓಹ್..ಇದು ಸುಲಭದ  ಸುಲಭದ ಪ್ರಶ್ನೆ- ತಕ್ಷಣ ಬಿಸಾಕಿಬಿಟ್ಟೆ ನನ್ನ ಉತ್ತರ }

“ ನನ್ನ ಅಪ್ಪನ ಹೆಸ್ರು ನಾರಾಯಣಜ್ಜ ಅಂತ ಪುಟ್ಟಿ ,  ನಿನಗೆ ಅವರು ಮುತ್ತಜ್ಜ”  

{ಅವಳು ಪುನರುಚ್ಚರಿಸಿದ್ಲು }

“ನಾರಾಯಣಜ್ಜ-  ನನ್ನ ಮುತ್ತಜ್ಜ”

“ಅವರು ಎಲ್ಲಿದಾರೆ?”

{ಇದು ಸ್ವಲ್ಪ ಕಠಿಣವಾದ ಪ್ರಶ್ನೆ. ನನ್ನಪ್ಪ ಕಾಲವಶ ಆಗಿ 15 ವರ್ಷಗಳೇ ಅಗಿವೆ. ಏನಪ್ಪಾ ಉತ್ತರ ಕೊಡಲಿ? ಆಲೋಚನೆಗೊಳಗಾದೆ.

 }

“ಅಜ್...ಜ್ಜಾ ಮುತ್ತಜ್ಜ ಎಲ್ಲಿದಾರೆ ?”

ಮತ್ತೆ ಕೇಳಿದ್ಲು. ಈ ಬಾರಿ, ಧ್ವನಿ ಎತ್ತರದಲ್ಲಿತ್ತು.

“ಅವರು ಮೇ..ಲೆ ಇದ್ದಾರೆ ಪುಟ್ಟಿ”

“ಮೇಲೆ ಅಂದರೆ?”

ದೇವರ ಹತ್ತಿರ

...

{ ಮತ್ತೆ ಅಲ್ಪವಿರಾಮ – ಲಚ್ಚಿಗೆ ಹೊದಿಕೆ ಹೊದಿಸಿ, ನಿದ್ದೆ ಮಾಡಿಸೋ ಬ್ಯುಸೀ ಅವಳು }

..

ಮತ್ತೆ ಪ್ರಶ್ನೆ

“ಅಜ್ಜಾ ಮುತ್ತಜ್ಜ ಯಾವಾಗ ನಮ್ಮನೆಗೆ ಬರ್ತಾರೆ ?”  

“ಇಲ್ಲ ಪುಟ್ಟೀ , ಅವ್ರು ಬರಲ್ಲ”

“ಹೌದಾ – ಯಾಕೆ ಬರಲ್ಲಾ?”

{ಯಾಕೋ ಪ್ರಶ್ನೆಗಳು ಬರ್ತಾ ಬರ್ತಾ ಕಠಿಣ ಆಗ್ತಾ ಇದೆ ಅನಿಸಿತು. ಏನ್ಮಾಡೋದು-ತಡ ಮಾಡೋ ಹಾಗಿಲ್ಲ  }

ದೇವರು ಮುತ್ತಜ್ಜನ್ನಾ ಕಳಿಸಲ್ವಂತೆ ಪುಟ್ಟೀ

ಯಾಕೆ ಕಳಿಸಲ್ಲ? ನಂಗೆ ಮುತ್ತಜ್ಜ ಬೇ....ಕು

{ ಸ್ವಲ್ಪ ಹಟದ ಧ್ವನಿ ಶುರುವಾಯ್ತು }

{ಅವರು ಸತ್ತುಹೋಗಿದ್ದಾರೆ ಎಂಬುದನ್ನು ಹೇಳದಿರಲು ನನ್ನ  ತಂತ್ರ ಮುಂದುವರೆಸಿದೆ  }

ಯಾಕೇಂದ್ರೆ ದೇವರಿಗೆ ಮುತ್ತಜ್ಜ ಅಂದ್ರೆ ಇಷ್ಟ ಅಂತೆ. ಅದಕ್ಕೇ ಕಳಿಸಲ್ಲ.

ಓಹೋ-ಹೌದಾ?

ಅಜ್ಜಾ ನಂಗೂ ಮುತ್ತಜ್ಜ ತುಂಬಾನೇ ಇಷ್ಟ – ಕಳಿಸಕೆ ಹೇಳು ದೇವ್ರಿಗೆ

ಹೌದಾ – ಆಮೇಲೆ ಕೇಳ್ತೀನಿ ಆಯ್ತಾ?  ಈಗ ನೀನು ಲಚ್ಚಿಗೆ ಜೋಗುಳ ಹಾಡಿ ಮಲಗಿಸು.

{ವಿಷಯನ ಮರೆಸೋಕೆ ಪ್ರಯತ್ನಿಸಿದೆ }

ಯಾಕೋ ಪುಟ್ಟಿ ಕೃಪೆ ತೋರಿಸಿ ಸುಮ್ಮನಾದಳು

{ಅಬ್ಬಾ..ಕಷ್ಟದಿಂದ ಪಾರಾದೆ ಅಂತ ನಿರಾಳ

ಆದರೆ..ಆದರೆ... ಈ ನನ್ನ ನೆಮ್ಮದಿಯ ಕ್ಷಣ ಹೆಚ್ಚುಹೊತ್ತು ಮುಂದುವರೀಲಿಲ್ಲ   }

ಮತ್ತೆ ಪ್ರಶ್ನೆ

ಅಜ್ಜಾ – ದೇವರ ಹತ್ರ ಮೊಬೈಲ್ ಇದೆಯಾ? ಮಾತಾಡಕೆ ?

ಹೌದು ಚಿನ್ನೀ

ಮಾತಾಡ್ದ್ಯಾ? ಮುತ್ತಜ್ಜನ್ನ ಕಳಿಸ್ತಾನಂತಾ?

ಮಾತಾಡ್ದೆ ಪುಟ್ಟಿ –  ಇನ್ಯಾವಾಗ್ಲೂ ಮುತ್ತಜ್ಜನ ಕಳಿಸೋದೇ ಇಲ್ಲಂತೆ ದೇವರು

ಯಾಕಂತೆ ಅಜ್ಜಾ?

ಯಾಕೋ ಗೊತ್ತಿಲ್ಲ ಪುಟ್ಟಿ ..ಅದು ದೇವರ ಇಷ್ಟ

----------------

ಅಜ್ಜ – ನೀ ಸುಳ್ಳು ಹೇಳ್ತಾ ಇದೀಯ

{ಅಯ್ಯೋ ದೇವ್ರೇ – ನನ್ನ ಸುಳ್ಳು ಇವಳಿಗೆ ಗೊತ್ತಾಗಿ ಹೋಯ್ತಾ!!! ..ಏನಪ್ಪಾ ಮಾಡೋದು .}

ನಾನೇನು ಸುಳ್ಳು ಹೇಳಿದೆ ಬಂಗಾರೀ?

ದೇವರು GOOD BOY ಅಂದೆ ? ಸುಳ್ಳು -   ಈಗ ಗೊತ್ತಾಯ್ತು. ದೇವರು BAD BOY. GOOD BOY ಆಗಿದ್ರೆ , ಮುತ್ತಜ್ಜನನ್ನು ಕಳಿಸ್ತಿದ್ದ ನನಗಾಗಿ”  

************************

 ಅಂತೂ ಇಂತೂ ಎರಡು ತೀರ್ಮಾನಗಳನ್ನು  ಮಾಡಿಯೇಬಿಟ್ಲು ಅವಳು

ಒಂದು:  ನಾನು ಸುಳ್ಳುಗಾರ 

ಎರಡು :  ದೇವರು BAD BOY’

{ ಓ ದೇವರೇ – ನೀನೇ ನನ್ನನ್ನು ಕಾಪಾಡು }

**************

ಅದೃಷ್ಟವಶಾತ್ , ಅವಳಿಗೆ ನಿದ್ದೆ ಬಂದುಬಿಡ್ತು ಅವಳ ಗೊಂಬೆ ಲಚ್ಚಿ ಮಲಗಿಸೋ ಪ್ರಕ್ರಿಯೆಯಲ್ಲಿ.

ಅಬ್ಬಾ... ಇಂದಿಗೆ ಬಚಾವಾದೆ ಅಂತ ನಾನೂ ಮಲಗಿದೆ

******

ನನ್ನ ನಿದ್ದೆಯಲ್ಲಿ –ಹೊಯ್ದಾಟ – ತೊಳಲಾಟ-ಗೋಜಲು

ಇಂದು ನನಗೆ ಮತ್ತುದೇವರಿಗೆ ಆಗಿರೋ ಹಾನಿಯನ್ನು  ಹೇಗೆ ಸರಿಪಡಿಸೋದು ?  

ಅವಳಿಗೆ ಮನವರಿಕೆ  ಮಾಡೋದು ಹೇಗೆ ?

ನಾಳೆ, ಏನೇನು ಪ್ರಶ್ನೆಗಳ/ ಸಲಹೆಗಳ  ಬಾಂಬ್ ಸುರಿಮಳೆಯಾಗಬಹುದು ಅವಳಿಂದ ಅಂತ ಊಹೆ

-----------

ಅಜ್ಜಾ- ಮೊಬೈಲ್ ಕೊಡು – ನಾನೇ ಮಾತಾಡಿ ದೇವರನ್ನ ಕೇಳ್ತೀನಿ . ಒಪ್ಪದಿದ್ರೆ ಬೈತೀನಿ ಅಷ್ಟೆ

ಅಜ್ಜಾ- ಇನ್ನೊಂದು ಐಡಿಯಾ;  ಮುತ್ತಜ್ಜನ್ನ ಕಳಿಸೋಕೆ ದೇವರಿಗೆ ಇಷ್ಟ ಇಲ್ಲದಿದ್ರೆ, ನಾವೇ ಅಲ್ಲಿಗೆ ಹೋಗೋಣ್ವಾ?

ಅಜ್ಜಾ- ಎಲ್ರೂ ಮೇಲೆ ದೇವರ ಹತ್ತಿರ ಹೋಗ್ತಾರಾ?

                                 ಇತ್ಯಾದಿ ಇತ್ಯಾದಿ

******************

ನನಗೆ ಚೆನ್ನಾಗಿ ಗೊತ್ತು. ಎಲ್ಲಾ ತಂದೆ ತಾಯಿಯಂದಿರೂ ಮಕ್ಕಳ ಜೊತೆ ಇಂತಹ ಸಂದಿಗ್ಧ ಸನ್ನಿವೇಶಗಳನ್ನು ಎದುರಿಸಿಯೇ ಎದುರಿಸಿರ್ತೀರ. ನಿಮ್ಮ ಅನುಭವವನ್ನೂ ಹಂಚಿಕೊಳ್ಳಿ . ಕಠಿಣ ಪ್ರಶ್ನೆಗಳಿಗೆ ಚತುರ ಉತ್ತರ ದೊರೆಯಬಹುದು. ಹೊಸ ತಾಯಿ ತಂದೆಯರಿಗೆ ಮಾರ್ಗದರ್ಶಕ ಆಗಲಿ

 

 

 

 

 

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ