ಸ್ವಲ್ಪ ಕಣ್ ಬಿಟ್ಟು ಮೇಲೆ ನೋಡಣ್ಣೋ - ಯಾರು ಬೆಳಕನ್ನು ಚೆಲ್ತಾ ಇರೋದು ಅಂತ ?

 

 ಪದಪ್ರಣತಿ

ನನ್ನ – ಹೂಗಿಡದ ನಡುವಿನ  ಸಲ್ಲಾಪ

----------

ಸಂಚಿಕೆ #9

----------



ಸ್ವಲ್ಪ ಕಣ್ ಬಿಟ್ಟು ಮೇಲೆ ನೋಡಣ್ಣೋ  -

ಯಾರು ಬೆಳಕನ್ನು ಚೆಲ್ತಾ ಇರೋದು ಅಂತ ?

-----------

ಮುಂಜಾನೆ ಸಮಯ  6-00 ಇದ್ದಿರಬಹುದು. ಮನೆಯ ಬಾಗಿಲನ್ನು ತೆರೆದು, ಆಚೆ ಬಂದೆ, ಕಸದಬುಟ್ಟಿಯನ್ನು ಹೊರಗಿಡಲು.  ರಾತ್ರಿ,  ತನ್ನ ಸರದಿ(shift )ಯ ಕರ್ತವ್ಯ (duty ) ಮುಗಿಸಿ,   ಹಗಲಿಗೆ     ವರ್ಗಾಯಿಸ್ತಾ ಇತ್ತು. ಪ್ರಶಾಂತ ವಾತಾವರಣಕ್ಕೆ ಸುಂದರ ಮೆರಗು ಆವರಿಸಿದ್ದದ್ದು ನಸು ಬೆಳಕಿನಿಂದ.  ಸೂರ್ಯೋದಯ ಆಗಿರಲಿಲ್ಲ. ಆದರೂ ಹಿತವಾದ ಬೆಳಗು.

 ನನಗರಿವಿಲ್ಲದಂತೆಯೇ ನನ್ನಂತರಂಗದಿಂದ  “ಬೆಳಕು ನೀಡಲಾರಂಭಿಸಿದ ಆ ಸೂರ್ಯನಿಗೆ ನಮೋ ನಮಃ” ಎಂಬ ಉದ್ಗಾರ. ಕಣ್ಣು ಮುಚ್ಚಿದ್ದೆ. ಭಕ್ತಿ- ಕೃತಜ್ನತೆ ಎರಡೂ ಮಿಶ್ರಣವಾಗಿತ್ತು ನನ್ನೊಳಗಿನ ಭಾವದಲ್ಲಿ.

ಇದ್ದಕ್ಕಿದ್ದಂತೆಯೇ , ನನ್ನ ತನ್ಮಯತೆಗೆ ಭಗ್ನ, ಯಾರದ್ದೋ ಎತ್ತರದ ಧ್ವನಿಯಿಂದಾಗಿ.

“ಹಲೋ, good morning , ಏನಣ್ಣಾ ನೀನು ಮಾಡ್ತಾ ಇರೋದು ಸರೀನಾ?”

ಯಾರಪ್ಪಾ ಇದು , ಬೆಳಿಗ್ಗೆ ಬೆಳಿಗ್ಗೆ, ನನ್ನ ಮೇಲೆ ತಪ್ಪು ಹೊರಿಸ್ತಾ ಇರೋದು ಅಂತ ನೋಡಿದ್ರೆ….!!

ನನ್ನನ್ನು  ಆಗೊಮ್ಮೆ, ಈಗೊಮ್ಮೆ ಸಂವಾದಕ್ಕೆ  ಸೆಳೆದು, ನನ್ನ ತಲೆಕೆಡಿಸ್ತಾ (ಗಂಭೀರ ಭಾಷೆಯಲ್ಲಿ ಹೇಳಬೇಕೂಂದ್ರೆ ನನ್ನನ್ನು ಚಿಂತನೆಗೆ ಒಳಪಡಿಸ್ತಾ ಇದ್ದ ) , ನನ್ನ ಮಿತ್ರ ಹೂವಿನ ಗಿಡ.

“ಓಹೋ, ನೀನಾ? – ಅದೇನು ತಪ್ಪು ಮಾಡಿದೆ ನಾನು- ಒದರು” ಅಂದೆ

“ ಅಲ್ಲಣ್ಣಾ, ಸುಮ್ ಸುಮ್ನೆ ಯಾರ್ಯಾರಿಗೋ credit ಕೊಟ್ಟು ನಮಸ್ಕರಿಸ್ತಾ ಇದ್ದೀಯಲ್ಲಾ? , ಇದು ಸರೀನಾ?”

ಪ್ರಶ್ನಿಸಿತು ಹೂಗಿಡ

“ ಅದೇನು – ಸ್ವಲ್ಪ ಬಿಡಿಸಿ ಹೇಳು”

“ ಎಲ್ಲಾ ಬಿಟ್ಟು, ಆ ಸೂರ್ಯನಿಗೆ ನಮಸ್ಕರಿಸ್ತಾ ಇದ್ದೀಯಲ್ಲ? ಸ್ವಲ್ಪ ಕಣ್ ಬಿಟ್ಟು , ಆಕಾಶದ ಕಡೆಗೆ ನೋಡಣ್ಣೋ  

ಆದೇಶ ಹೂಗಿಡದಿಂದ.

ನೋಡಿದೆ – ಆಕಾಶವನ್ನು

ವಾವ್ ! ಚಂ..ದದ ವೃತ್ತಾಕಾರದ , ಬೆಳಗುತ್ತಿರುವ  ಪೂರ್ಣ ಚಂದ್ರ!  

ನಾನು ಅವಾಕ್ಕಾಗಿ, ಆನಂದದಿಂದ  ನೋಡ್ತಾ ಇರುವಾಗಲೇ, ಮತ್ತೊಂದು ಆದೇಶವನ್ನು ಹೊರಡಿಸಿತು ಹೂಗಿಡ

“ ಈಗ ಬೆಳಕು ಕೊಡ್ತಾ ಇರೋದು ಚಂದ್ರನೋ? ಸೂರ್ಯನೋ? , ನಮಸ್ಕರಿಸು, ಧನ್ಯವಾದ ಹೇಳು ಚಂದ್ರನಿಗೆ “

*****

ಮತ್ತೆ ಪೇಚಿಗೆ ಸಿಲುಕಿಸಿತು ಈ ತರ್ಲೆ ಗಿಡ.

“ ಅಯ್ಯೋ ದೇವ್ರೇ, ಬೆಳಕು ಬರ್ತಾ ಇರೋದು ಇನ್ನೂ ಉದಯಿಸದ ಸೂರ್ಯನದೋ ? ಅಥವಾ ಮೇಲೆ ರಾರಾಜಿಸುತ್ತಿರುವ ಚಂದ್ರನದೋ ?”

ಗೊಂದಲಕ್ಕೊಳಗಾದೆ ನಾನು.

ಗಿಡದ ಆದೇಶಕ್ಕೆ ಗೌರವ ಕೊಡಬೇಕೆನಿಸಿತು.

ಇನ್ನೊಂದು ಅನುಮಾನ ಬಂತು.

ಈಗ ಚಂದ್ರನಿಗಷ್ಟೇ ವಂದಿಸಿದ್ರೆ, ತರ್ಲೆ ಗಿಡ ಇನ್ಯಾರನ್ನಾದ್ರೂ ತೋರಿಸಿದ್ರೆ!? ‘

ಹಾಂ! ಒಂದುಪಾಯ ಹೊಳೀತು ನನ್ನ ದಡ್ಡ ತಲೇಗೆ

ಗಿಡಕ್ಕೂ ಕೇಳಿಸುವ ಹಾಗೆ , ಎತ್ತರದ ಧ್ವನಿಯಲ್ಲಿ ಉಚ್ಚರಿಸಿದೆ

“ಈಗ ಚೈತನ್ಯ ಹಬ್ಬಿಸುತ್ತಿರುವ ಎಲ್ಲಾ  ಬೆಳಕಿನ ಸಂಪನ್ಮೂಲಗಳಿಗೂ – ಇದೋ ವಂದನೆಗಳು”

************

ಹೂಗಿಡ ನನ್ನೆಡೆಗೆ, ಲೇವಡಿಮಿಶ್ರಿತ  ವಿಜಯದ ನಗೆ ಬೀರಿತು “ ಏನೋ ! ಮಹಾ!  ನನ್ನನ್ನು ಮೂರ್ಖನನ್ನಾಗಿ ಮಾಡಿದ ಹಾಗೆ.

ನಾನೂ ಒಂಥರಾ ನಗೆಯನ್ನು ಬಿಸ್ಸಾಕಿದೆ “ ನಾನೇನೂ ಅಷ್ಟು ದಡ್ಡ ಅಲ್ಲ ..ಅಂತ”

ನಾನು ಸೋತೆ ಅಂತ ತೋರಿಸ್ಕೋಬಾರ್ದು ಅಂತ

**************

ನಂತರ...

ಹಾಗೇ ಒಂದು ಪುಟ್ಟ ಚಿಂತನೆ ಮನದೊಳಗೆ

“ ನಮ್ಮ ಬದುಕಿನಲ್ಲಿಯೂ ಹೀಗೇ ಅಲ್ವೇ ಆಗೋದು? ಯಾವುದೋ(ನಾವು ನೋಡಿರದ ) ಮಹಾನುಭಾವವರನ್ನು ಪ್ರಪಂಚಕ್ಕೆಲ್ಲಾ ಬೆಳಕು ನೀಡುವವರು ಎಂದು ಒಪ್ಪಿಕೊಂಡುಬಿಟ್ಟಿರ್ತೇವೆ. ಅದು ಸ್ವಾಭಾವಿಕವೇ, ಆದರೆ , ಬೆಳಕು ಚೆಲ್ಲುತ್ತಿರುವವರು:

ಕೇವಲ ಸೂರ್ಯ ಚಂದ್ರರೋ?

ನಕ್ಷತ್ರಗಳೂ ಇಲ್ವಾ?

ಸುತ್ತ ಮುತ್ತಲಿರುವ ಹಣತೆಗಳು ? ಬೀದಿ ದೀಪಗಳು, ಒಮ್ಮೊಮ್ಮೆ ಮಿಂಚುಹುಳುಗಳೂ...

ಅಂದರೆ , ನಮಗೆ ಬೆಳಕನ್ನು ನೀಡಿದ, ನೀಡುತ್ತಿರುವ , ನಮ್ಮ ಕಣ್ಣೆದುರಿಗೇ ಇರುವ ಅನೇಕ ಸಣ್ಣಪುಟ್ಟ ಬೆಳಕಿನ  ಸಂಪನ್ಮೂಲ ವ್ಯಕ್ತಿ/ ವಸ್ತು/ ಸಂಗತಿಗಳನ್ನು ನಿರ್ಲಕ್ಷಿರುತ್ತೇವೆ.  

******

ಹೂಗಿಡದೊಂದಿಗಿನ ನನ್ನ ಹುಸಿಮುನಿಸನ್ನು ಬದಿಗೊತ್ತಿ,

ಅದಕ್ಕೆ ವಂದಿಸಿದೆ “ Thanks ಗುರೂ, ಪರೋಕ್ಷವಾಗಿ,  ನೀ ಈ ಬೆಳಕನ್ನು ಚೆಲ್ಲಿದ್ದಕ್ಕೆ “

 

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ