ಓ ಮನುಜ ನಿನಗೆ ವಂದನೆ- ಅಭಿನಂದನೆ-{ ಪ್ರಕೃತಿಯಿಂದ ಮನುಷ್ಯನಿಗೆ ವಂದನಾರ್ಪಣೆ }
ಓ ಮನುಜ ನಿನಗೆ ವಂದನೆ- ಅಭಿನಂದನೆ
{
ಪ್ರಕೃತಿಯಿಂದ ಮನುಷ್ಯನಿಗೆ ವಂದನಾರ್ಪಣೆ }
********
ಈ ಬರಹ/ಕವಿತೆ ಕುರಿತು ಒಂದು ಲಘು ಪ್ರಸ್ತಾವನೆ
********
ನಾವು, ಮನುಷ್ಯರು ಎಂದೆಂದಿಗೂ ಪ್ರಕೃತಿಗೆ ಋಣಿಗಳು.
ನಮ್ಮ
ಅಸ್ತಿತ್ವ – ಬಾಳ್ವೆ- ಸಾಧನೆ ಎಲ್ಲದಕ್ಕೂ
ಪ್ರಕೃತಿ ಮೂಲ .
ಸುಸಂಸ್ಕೃತ, ಸಂಸ್ಕಾರವಂತನಾದ ಯಾವುದೇ ಮನುಷ್ಯ ಪ್ರಕೃತಿಗೆ ಸದಾ ವಂದಿಸುತ್ತಲೇ ಇರುವುದು
ಸ್ವಾಭಾವಿಕ.
ಹಾಗೆಯೇ
ಮನುಷ್ಯ ತನ್ನ ಸ್ವಾರ್ಥ, ದುರಾಸೆಗೋಸ್ಕರ, ಪ್ರಕೃತಿಯ ನಾಶ ಮಾಡ್ತಾ ಇರುವುದರ ಬಗ್ಗೆ, ಪ್ರಕೃತಿಯ ಬಗ್ಗೆ ಸಂವೇದನೆ ಇರುವವರು, ಚಿಂತಕರು ಒಂದೇ ಸಮನೆ
ಮನುಜ ಕುಲವನ್ನೇ ದೂಷಿಸುತ್ತಾ, ಎಚ್ಚರಿಕೆ ಕೊಡುವ
‘ಪರಿಸರ ಜಾಗೃತಿ ಸಾಹಿತ್ಯ’ ತುಂಬಿ
ತುಳುಕುತ್ತಿವೆ.
----
ಆದರೆ ಈ ಬರಹ/ಕವಿತೆಯಲ್ಲಿ, ವಿಚಿತ್ರ
ಅನ್ನಿಸಬಹುದಾದ, ಒಂದು ಭಿನ್ನ, ಧನಾತ್ಮಕ
ದೃಷ್ಟಿಕೋನ
-------
ಪ್ರಕೃತಿಯೇ ಮನುಷ್ಯನಿಗೆ ಅಭಿನಂದನೆ ಮತ್ತು ವಂದನೆ ಸಲ್ಲಿಸುತ್ತಿದೆ. ಒಂದು ಧನಾತ್ಮಕ ಚಿಂತನೆ.
*****************
******
ಓ
ಮನುಜ
ಹೌದು
ವಂದಿಸಲೇಬೇಕು
ನಿನಗೆ ನಾ
ಕೋಟಿ
ಕೋಟಿ ಜೀವಿಗಳು ನನ್ನೊಡಲಲಿ
ಆದರೆ
ನೀ ಮಾತ್ರ ಎನಗೆ ಅತಿ ವಿಸ್ಮಯ
ನಿನ್ನ
ಬುದ್ಧಿ ಶಕ್ತಿಗೆ ನಮೋ ನಮಃ
ನಿನ್ನ
ಭಾವ ಶಕ್ತಿಗೆ ನಮೋ ನಮಃ
---
ನೀನೇ ತಾನೇ?
ನನ್ನೊಳಗಿನ ಮೂಲ
ಸಂಪತ್ತಾದ
ಮಣ್ಣು, ನೀರು ಅಗ್ನಿ, ಗಾಳಿ, ಆಕಾಶ ಬಳಸಿ
ಅದಕೆ ನಿನ್ನ
ಬುದ್ಧಿಶಕ್ತಿಯ ಹದದಿ ಬಳಸಿ ಆವಿಷ್ಕಾರ ಮಾಡಿ
ನಿನ್ನ ಸೌಕರ್ಯ, ಸಂತೋಷ, ಭೋಗಕ್ಕೆ ಬೇಕಾದ
ಕೃತಕ ( ಮಾಂತ್ರಿಕ)
ಪ್ರಪಂಚವ ಸೃಷ್ಟಿಸಿಕೊಂಡವ.
ಸದಾ ಸತ್ಯ
ಸಂಶೋಧಕ
ನಿನ್ನ
(ಉಪ ) ಸೃಷ್ಟಿ ತಾನೇ:
ಯಂತ್ರ ತಂತ್ರ
ಲೋಕ
ಗಗನಚುಂಬಿ
ಕಟ್ಟಡಗಳು
ವಿಮಾನ, ಹಡಗು, ಉಗಿಬಂಡಿ, ಬಗೆ ಬಗೆಯ
ವಾಹನಗಳು,
ಆಕಾಶದೆತ್ತರದಿ
ಸುತ್ತುವ ಉಪಗ್ರಹಗಳು
ಅನ್ಯಗ್ರಹಕೆ ಯಾನ ಮಾಡುವ ಕ್ಷಿಪಣಿಗಳು
ಮಾಂತ್ರಿಕ
ಮಾಹಿತಿ ಅಂತರರ್ಜಾಲ ಸಾಗರ
ಬೆರಳ
ತುದಿಯಲ್ಲೇ ವಿಶ್ವಪ್ರದರ್ಶನದ ಸಾಧನ ಮೊಬೈಲ್ ಫೋನ್ ಗಳು
ಇನ್ನಷ್ಟು
ಬೇಕೆಂಬ ನಿನ್ನ ದಾಹ, ಹಸಿವು, ಹುಡುಕಾಟ, ತಡಕಾಟ ,
ಹಪಹಪಿ, ದಾವಂತ ತಾನೇ ?
ನಿನ್ನ ಬುದ್ಧಿ
ಶಕ್ತಿಗೆ ಸವಾಲೊಡ್ಡಿ
ನಿರಂತರ
ಆವಿಷ್ಕಾರ ಕ್ರಿಯೆ-ಪ್ರಕ್ರಿಯೆಗೆ ಪ್ರೇರೇಪಣೆ
+++++++++++++++++++++++++++++++
ಇದೋ ನಿನ್ನ ಬುದ್ಧಿ ಶಕ್ತಿಗೆ ಸಾವಿರ ಸಾವಿರ ಅಭಿನಂದನೆಗಳು
+++++++++++++++++++++++++++++++
ಅದಕಿಂತಲೂ ಮಿಗಿಲು ....
ನಿನ್ನ ಭಾವ – ಸೌಂದರ್ಯ ಕಲ್ಪನಾ ಶಕ್ತಿ
*******
ನೀನೇ
ತಾನೇ ನನ್ನ ಸಹಜತೆಗೆ ಸೌಂದರ್ಯ ಲೇಪನ ಕೊಟ್ಟದ್ದು?
ನಾನು ಹರಿಯುತ್ತೇನೆ
ಹೊಳೆಯಾಗಿ,
ಝರಿಯಾಗಿ,
ನದಿಯಾಗಿ,
ಕಣಿವೆಯಲ್ಲಿ ಧುಮುಕಿ ಜಲಪಾತವಾಗಿ –
ಸೇರುತ್ತೇನೆ ಸಾಗರವ
ಇದು ನನ್ನ ಸಹಜ ಧರ್ಮ
ಆದರೆ—
ನನ್ನ ಪಯಣದ ಪ್ರತಿ ಹೆಜ್ಜೆಯ ಸೌಂದರ್ಯವ
ಗುರುತಿಸಿ,
ಆಸ್ವಾದಿಸಿ,
ವೈಭವೀಕರಿಸಿ ,
ಚಿತ್ರೀಕರಿಸಿ, ಹಂಚಿ
ಸಂಭ್ರಮಿಸುವವ ನೀನು.
--------------
ನಾ ನಿಂತಿದ್ದೇನೆ
ದಿಬ್ಬವಾಗಿ, ಗುಡ್ಡವಾಗಿ, ಬೆಟ್ಟವಾಗಿ, ಪರ್ವತವಾಗಿ
ನೀ ಏರಿದೆ ಸಾಹಸದಿ
ನೀ ಅಳೆದೆ, ಆನಂದಿಸಿದೆ, ನನ್ನೆತ್ತರವ
----------------
ನಾನು ಅರಳುತ್ತೇನೆ ಹೂವಾಗಿ ,
ವಿಧ ವಿಧದ ಬಣ್ಣ , ಆಕಾರ, ಪರಿಮಳ ಸೂಸುತ್ತ
ಇದು ನನ್ನ ಸಹಜ ಧರ್ಮ.
ಆದರೆ,
ನನ್ನ ಸಹಜ ಚೆಲುವ ಒಲವಿನಿಂದ ಕಂಡು, ನೀ ಬರೆದೆ ಕವಿತೆಯ, ಹಾಡಿ ಕೊಂಡಾಡಿದೆ
ನೀ ಕೊಡಿಸಿದೆ ಪುಣ್ಯವ
ನಿನ್ನ ದೇವರ ಮುಡಿಗೋ, ನಾರಿಯ ಮುಡಿಗೋ ಏರಿಸಿ , ನನಗೆ ಪುಣ್ಯವ / ಮೌಲ್ಯವ ಕೊಡಿಸುವವ ನೀನು
-----------------------
ನಾನು ಬೆಳೆಯುತ್ತೇನೆ ಬೀಜದಿಂದ , ಮರದ ವರೆಗೆ
ಕೊಡುತ್ತೇನೆ ಕಾಯಿ-ಹಣ್ಣು
ನನ್ನ ಬೀಜ - ಕಾಯಿ- ಹಣ್ಣ ಬಳಸಿ ವಿಧ ವಿಧ ಅಡುಗೆಯ
ಸ್ವಾದವ ಆನಂದಿಸುವವ ನೀನು
ನನ್ನ ವಿಸ್ತಾರದಲಿ ಬಗೆ ಬಗೆಯ ಬಣ್ಣದ, ವಿನ್ಯಾಸದ ಪಕ್ಷಿ, ಪ್ರಾಣಿಗಳು.
ಅವುಗಳ ಸೌಂದರ್ಯವ ಆನಂದಿಸಿದವ ನೀನು.
ಒಟ್ಟಿನಲ್ಲಿ
ನೀ ನನ್ನ ನೋಡಿದೆ, ಕೇಳಿದೆ, ಆಘ್ರಾಣಿಸಿದೆ, ಆಸ್ವಾದಿಸಿದೆ, ಸ್ಪರ್ಷಿಸಿದೆ
ಸೌಂದರ್ಯವ ವರ್ಣಿಸಿ ಕವಿತೆ ಕಟ್ಟಿದೆ – ಚಿತ್ರ ಬರೆದೆ – ಶಿಲ್ಪ ಕೆತ್ತಿದೆ
ಮಾತಾಡಿದೆ- ಹಾಡಿದೆ – ನರ್ತಿಸಿದೆ -
*****
ನೀನಿಲ್ಲದಿದ್ದರೆ ನನಗೆಲ್ಲಿ ಅಸ್ತಿತ್ವ?
ಅಸ್ಮಿತೆ? ಧನ್ಯತೆ ?
ನಿನ್ನಿಂದ ನಾ ಏನೆಲ್ಲಾ ಪಡೆದಿದ್ದೇನಲ್ಲ,
ಅದಕ್ಕಾಗಿ
‘ವಂದನೆ’
ನಿನ್ನ ಅನನ್ಯ ಬುದ್ಧಿ-ಬಾವ ಸಾಮರ್ಥ್ಯಕ್ಕೆ
‘ಅಭಿನಂದನೆ’
*****************
ಹಾಂ...
ಹಾಂ—
ಇರು ಒಂದ್ನಿಮಿಷ
ಈ ಕೃತಕ ಪ್ರಪಂಚದ ( ಉಪ ಸೃಷ್ಟಿಯ )
ಬ್ರಹ್ಮ ನೀನು, ಸರಿ
ವಿಷ್ಣು ನೀನು, ಸರಿ
ಆದರೆ ಎಚ್ಚರ!!
ಅಪರೂಪಕ್ಕೆ ನಿನಗೆ ಸಿಕ್ಕ ಈ ಪ್ರಶಂಸೆ – ಕೃತಜ್ನತೆಯಿಂದ, ನಿನ್ನ ಸೊಕ್ಕಿನ ಅಮಲನ್ನೇನಾದ್ರೂ ಏರಿಸಿಕೊಂಡರೆ
ಎಚ್ಚರಿಕೆ!!!
ಲಯಕಾರಕ ಈಶ್ವರನೂ ನೀನೇ ಆಗ್ತೀಯ
*********
ಇಂದು, ಬೇಡ ಅದರ ವಿಚಾರ – ಇನ್ನೊಮ್ಮೆ!!!!!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ