ತಪ್ಪಾಯಿತೇ ನನ್ನಿಂದ??!! { ಭಗವಂತನ ಸ್ವಗತ-ಸಂಕಲ್ಪ, ಅಕ್ಟೋಬರ್ 2019}-ಕವಿತೆ

 

ತಪ್ಪಾಯಿತೇ ನನ್ನಿಂದ??!!
{ ಭಗವಂತನ ಸ್ವಗತ-ಸಂಕಲ್ಪ, ಅಕ್ಟೋಬರ್ 2019}
**********
ಚಿತ್ರಕ್ಕೊಂದು ಬರಹ
----------
ಪದಪ್ರಣತಿ #16



ಈ ಬರಹಕ್ಕೆ ಪ್ರೇರೇಪಣೆ
4 ವರ್ಷಗಳ ಹಿಂದೆ,2020 ರಲ್ಲಿ , ಶ್ರೀ ರಾಜಾರಾಂ ಕಿಲಾರ Rajaram Kilar Subbarao ಅವರ ನೇತ್ರತ್ವದಲ್ಲಿ, ಸಾಗರ ಫೋಟೋಗ್ರಾಫಿಕ್ ಸೊಸೈಟಿ ಅವರಚಿಂತನಕ್ಕೆ ಸವಾಲ್ಎಂಬ ಚಿತ್ರಕವಿತೆ ಸ್ಪರ್ದೆ.
( ಚಿತ್ರವನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇನೆ)
ಅವರಿಗೆ ಮತ್ತೊಮ್ಮೆ ಧನ್ಯವಾದಗಳು ಆ ಅವಕಾಶಕ್ಕೆ.
--------
ಇದರ ಕಲ್ಪನೆ ಹೀಗಿದೆ
---------
2019 ರ ಅಕ್ಟೋಬರ್ ತಿಂಗಳಲ್ಲಿ
( ಅಂದರೆ ,COVID-19 ನ ಆಕ್ರಮಣಕ್ಕೆ ಸ್ವಲ್ಪ ದಿನಗಳ ಹಿಂದೆ ) ,
ನಗರದ ಒಂದು ಮುಖ್ಯ ರಸ್ತೆಯಲ್ಲಿ,
ದನಕರುಗಳು, ವಾಹನಗಳ ನಡುವೆ , ಪ್ರಯಾಸದಿಂದ , ಧಾವಂತದಿಂದ, ನಡೆದುಕೊಂಡು ಹೋಗುತ್ತಿರುವ ದೃಶ್ಯ .

ವಿಶ್ವವನ್ನು ಮೇಲಿನಿಂದ ವೀಕ್ಷಣೆ ಮಾಡುತ್ತಿರುವ ಭಗವಂತನಿಗೆ ಈ ದೃಶ್ಯ ಕಾಣಿಸುತ್ತೆ.
ಆಗ ಆತನೊಳಗೆ ಉದ್ಭವಿಸಿದ ತುಮುಲ, ಗೊಂದಲದ ಸ್ವಗತವೇ ಈ ಬರಹದ ವಸ್ತು.
*****************
ತಪ್ಪಾಯಿತೇ ನನ್ನಿಂದ?!
{ ಭಗವಂತನ ಸ್ವಗತ ಸಂಕಲ್ಪ ಅಕ್ಟೋಬರ್ 2019 ರಲ್ಲಿ }
****************
ಅವಲೋಕಿಸುತ್ತಿದ್ದೇನೆ, ಮೇಲಿನಿಂದ,
ಈ ಸ್ಥೂಲ ದೃಶ್ಯದ ಸೂಕ್ಷ್ಮವ,
ಗೋವು ಮತ್ತು ಮಾನವನ ಸಹ-ಪಯಣವ

ಇದು ಕೇವಲ ಎರಡು ಜೀವಿಗಳ ,
ಓಡಾಟದ ದೃಶ್ಯವಾಗಿ ಗೋಚರಿಸುತ್ತಿಲ್ಲ
ಎರಡು ಜೀವ ಸಂಕುಲವ ತೂಗುವ ತಕ್ಕಡಿಯಂತೆ ಭಾಸವಾಗುತ್ತಿದೆ,

ಮಾನವ,
                               ತಕ್ಕಡಿಯ ಒಂದು ತಟ್ಟೆಯಲ್ಲಿ
ಗೋವು,
                               ತಕ್ಕಡಿಯ ಇನ್ನೊಂದು ತಟ್ಟೆಯಲಿ,
--------
ಮಾನವ,
ತಕ್ಕಡಿಯ ಒಂದು ತಟ್ಟೆಯಲ್ಲಿ

ನಾಗರೀಕತೆಯ ಹೆಸರಿನಲಿ,
ಪ್ರಗತಿಯ ಅಮಲಿನಲಿ,
ನಾ ಕರುಣಿಸಿದ ವಿಶೇಷ ಧೀ ಶಕ್ತಿಯ ದುರ್ಬಳಸಿ,
ನಾನೇ ಸೃಷ್ಟಿಸಿದ ಚರ, ಅಚರ ಪರಿಕರ ಬಳಸಿ,
ಕೃತಕ ಯಂತ್ರ ತಂತ್ರಲೋಕವ ನಿರ್ಮಿಸಿ,
ನನ್ನ ನಿಯಮಗಳ ಧಿಕ್ಕರಿಸಿ,
ತನ್ನದೇ ವಿಧಿ ವಿಧಾನ, ಸಂವಿಧಾನ ಬರೆದು,
ಸಹಜೀವಿಗಳ ಆವರಣವ ಆಕ್ರಮಿಸಿ, ಶೋಷಿಸಿ,
ಭೂಮಂಡಲವ ಅಗೆದು, ಬಗೆದು, ಕೊಳ್ಳಿಯಿಟ್ಟು,
'ವಿಶ್ವಕೆಲ್ಲಾ ತಾನೇ ಪ್ರಭು' ಎಂದು ಪರಿಗಣಿಸಿ
ಅಟ್ಟಹಾಸ, ಧಾವಂತದ, ಪರಾಕಾಷ್ಠೆಯ ತಲುಪಿದ
ಬುದ್ಧಿಜೀವಿ
-----------------
ಗೋವು,
ತಕ್ಕಡಿಯ ಇನ್ನೊಂದು ತಟ್ಟೆಯಲಿ,
ನಾನೇ ಸೃಷ್ಟಿಸಿದ
ಕೋಟಿ ಕೋಟಿ ಮೂಕ ಜೀವಿಗಳ ಪ್ರತೀಕ.

ಶತ ಶತಮಾನಗಳಿಂದ,
ನನ್ನ ನಿಯಮಗಳ ಪರಿಧಿಯಲಿ,
ಒಂದೇ ಗತಿಯಲಿ,
ತಾನೂ ಬದುಕಿ,
ಬೇರೆ ಜೀವಿಗಳನೂ ಬದುಕಲು ಬಿಟ್ಟು,
‌ ‌‌ ಶೋಷಣೆಯ ಸಹಿಸಿಯೂ
ಮನುಜಕುಲಕ್ಕೆ ಪರೋಪಕಾರಿಯಾಗಿ,
ಆದರೆ ಸ್ವಾತಂತ್ರ್ಯ ಕಳೆದುಕೊಂಡು ,
ಅನಿವಾರ್ಯತೆ, ಅಸಹಾಯಕತೆಯ ಬವಣೆಯಲಿ
ಬದುಕುತ್ತಿಹ ಜೀವ ಸಂಕುಲದ ಪ್ರತಿನಿಧಿ
ಮುಗ್ಧಜೀವಿ
--------------------
ಅಯ್ಯೋ ..
ಚಡಪಡಿಸುತ್ತಿದ್ದೇನೆ
ಈ ವಿದ್ಯಮಾನವ ಕಂಡು

ಆಯ ತಪ್ಪಿದೆ
ಅಸಮತೋಲನ ವಿಜ್ರಂಭಿಸುತ್ತಿದೆ
ತಕ್ಕಡಿಯೇ ಕುಸಿಯುತ್ತಿದೆ.
----------------
ತಪ್ಪಾಯಿತೇ ನನ್ನಿಂದ??!!
-----------------
ಮಾನವ ಜೀವಿಗೆ, ಅಧಿಕ ಧೀಶಕ್ತಿಯ ತುಂಬಿದ್ದು?

ಕುದಿಯುತ್ತಿದೆ ತುಮುಲ ನನ್ನೊಳಗೆ

ಸೃಷ್ಟಿ, ಸ್ಥಿತಿ, ಲಯದ ನಿರ್ವಹಣೆ
ಹೊಣೆ ನನ್ನದಲ್ಲವೇ?

ಎಲ್ಲ ಜೀವಿಗಳಿಗೆ ನ್ಯಾಯ ಒದಗಿಸುವ,
ತನ್ಮೂಲಕ, ಸಮತೋಲನದ ಕಾಪಾಡುವ
ಹೊಣೆ ನನ್ನದಲ್ಲವೇ ?

ಹೌದು, ಏನನ್ನಾದರೂ ಮಾಡಲೇ ಬೇಕು,
ಈ ಮನುಕುಲದ ಆಟಾಟೋಪಕೆ ಕಡಿವಾಣ ಹಾಕಲೇಬೇಕು
-----------
ಇದೋ,
ನನ್ನ ಸಂಕಲ್ಪ.
---------
ಶೀಘ್ರದಲಿ
ಗೋಕುಟುಂಬ
ಇದೇ ಹಾದಿಯಲಿ ,
ಮಾನವ ಜೀವಿಯ ಉಪಟಳ ವಿಲ್ಲದೆ,
ಸ್ವಚ್ಛಂದದಿ,
ನಡೆದು, ಓಡಿ, ಕುಣಿದು ಕುಪ್ಪಳಿಸುವ
ಸುಂದರ ದೃಶ್ಯದ ಸಂಕಲ್ಪ.

ಮನುಕುಲಕೆ ಪಾಠಕಲಿಸುವ ಸಂಕಲ್ಪ
ಧಾವಂತಕ್ಕೊಂದು ಅಲ್ಪವಿರಾಮದ ಸಂಕಲ್ಪ
----------------
ಹೊರಟಿದ್ದೇನೆ ಈಗಲೇ,
ನನ್ನ ಸೂಕ್ಷ್ಮೋಗ್ರ ಸ್ವರೂಪದಲಿ

ಈ ಸೂಕ್ಶ್ಮ ಅವತಾರ
ಮನುಕುಲದ ಗರ್ವಭಂಗಕ್ಕೆ
ಸಮತೋಲನದ ಪುನಃಸ್ಥಾಪನೆಗೆ
ವಿಶ್ವದೊಳಿತಿಗೆ
****

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ