ನನ್ನ 66 ರ ಜನ್ಮದಿನದಂದು ಹೀಗೊಂದು ಕೃತಜ್ಞತೆ-ಬರಹ



ನನ್ನ 66 ರ ಜನ್ಮದಿನದಂದು ಹೀಗೊಂದು ಕೃತಜ್ಞತೆ

66 ನೇ ವಯಸ್ಸಿನ ಹೊಸಿಲಲ್ಲಿದ್ದೇನೆ ನಾನು ಇಂದು.

--------

ವೃತ್ತಿ,

ಪ್ರವೃತ್ತಿ

ಮತ್ತು

ಕುಟುಂಬ

ಮೂರೂ ಆವರಣದಲ್ಲಿ,

ಜೀವನವನ್ನು ನಿತ್ಯೋತ್ಸವವನ್ನಾಗಿ ಆಚರಿಸಿ,

ಒಂದು ಮಟ್ಟದ ಸಾರ್ಥಕತೆ ಪಡೆದಿದ್ದೇನೆ.

ಧನ್ಯತಾ ಭಾವವವಿದೆ.

ಈ ಸಂಭ್ರಮದ ಕ್ಷಣದಲ್ಲಿ,

ಒಮ್ಮೆ ನಡೆದುಬಂದ ದಾರಿಯ ಅವಲೋಕಿಸಿ,

ಕೃತಜ್ಞತೆ ಅರ್ಪಿಸುವ ಕರ್ತವ್ಯ

ಈ ಬರಹದ ಮೂಲಕ.

----------

ಸ್ವಾರಸ್ಯ ಅಂದರೆ ಈ ಬರಹದ ಪ್ರಕ್ರಿಯೆಯಲ್ಲಿ , ನನಗರಿವಿಲ್ಲದಂತೆಯೇ

ನಾ ನಡೆದು ಬಂದ ದಾರಿಯ

ಸ್ಥೂಲ ಅವಲೋಕನವೇ ಆಗಿಬಿಟ್ಟಿದೆ.

-----------

ಇದು ನನ್ನ ವೈಯುಕ್ತಿಕ ಜೀವನದ ಸ್ವಗತ.

ಆದರೂ ಯಾಕೆ ಪ್ರಕಟಿಸಿದ್ದೇನೆ?

{ ಒಂದು ರೀತಿಯ ಮುಜುಗುರದಲ್ಲೇ ಇದನ್ನು ಬರೆದಿದ್ದೇನೆ ಕಾರಣ ಅದ್ಯಾವ ದೊಡ್ಡಮನುಷ್ಯ ನಾನು, ಇಂಥದ್ದನ್ನು ಬರೆಯುವುದಕ್ಕೆ?....ಅನ್ನೋ ಭಾವವೂ ಒಂದುಕಡೆ !! }

*************

ಮೂರು ಕಾರಣಗಳು.

1. ನನ್ನ ಧನ್ಯತಾ ಭಾವವನ್ನು ನಾಕು ಜನರೊಂದಿಗೆ ಹಂಚಿಕೊಂಡು ಖುಶಿಪಡುವುದಕ್ಕಾಗಿ.

2. ಜನ್ಮದಿನದಂದು, ನನ್ನಂತಹ, ಇಳಿ ವಯಸ್ಸಿನ ಬಂಧುಮಿತ್ರರಿಗೆ ಈ ಬಗೆಯ ಭಾವನೆಗಳು ಬರುತ್ತವೆಯೇ ಎಂದು ತಿಳಿದುಕೊಳ್ಳುವ ಕುತೂಹಲ.

3. ನನಗಿಂತ ಕಿರಿಯರಿಗೆ ಇದು ಒಂದು ರೀತಿ ಮಾರ್ಗದರ್ಶಿಆದರೂ ಆಗಬಹುದೇನೋ! ? ( ಆಸಕ್ತರು, ತಮ್ಮ ಪ್ರತಿ ಜನ್ಮದಿನದಂದು, ಹೀಗೊಮ್ಮೆ ನಡೆದು ಬಂದ ದಾರಿಯನ್ನು ಅವಲೋಕಿಸಿಕೊಂಡರೆ ಚೆನ್ನಾಗಿರುತ್ತೇನೋ )

**************

**************

ಇಷ್ಟು ಪೀಠಿಕೆ ನಂತರ , ಈಗ ನನ್ನ ಕೃತಜ್ಞತಾರ್ಪಣೆ ಪ್ರಾರಂಭ

----------------

ಈಗ ಉದ್ಭವಿಸಿದ ಪ್ರಶ್ನೆ ???

----------------

ಯಾರು ಯಾರಿಗೆ, ಯಾವುದಕ್ಕಾಗಿ ಕೃತಜ್ಞತೆ ಸಲ್ಲಿಸಲಿ ?

1. ನನಗೆ ಜನ್ಮ ನೀಡಿದ ನನ್ನಮ್ಮ ಅನ್ನಪೂರ್ಣೆ, ನನ್ನಪ್ಪ ನಾರಾಯಣ ( ಶೇಡಿಮನೆ ನಾರಣಣ್ಣ ). ಅತಿ ಮುಖ್ಯವಾಗಿ, ತಮ್ಮ ಇತಿ-ಮಿತಿಯಲ್ಲಿಯೇ , ಚಂದವಾಗಿ ಪಾಲನೆ- ಪೋಷಣೆ ಮಾಡಿದ್ದಕ್ಕಾಗಿ, ಉತ್ತಮ ಸಂಸ್ಕಾರ ಬಿತ್ತಿ, ಒಲವಿನಿಂದ ಬೆಳೆಸಿದ್ದಕ್ಕಾಗಿ.

---

2. ನನ್ನೊಳಗೆ ( ಅಂದರೆ ನನ್ನ DNA ಒಳಗೆ) ನನಗರಿಯದಂತೆಯೇ ಅಂತರ್ಗತವಾಗಿರುವ ಪೂರ್ವಜರ ಗುಣಗಳ ಋಣಕ್ಕೋ?

----

3. ನನ್ನ ಬಾಲ್ಯದಲ್ಲಿ ಒಂದು ಶಿಕ್ಷಣ ಶಾಲೆಯಂತಿದ್ದ, ಹಂಸಗಾರಿನ ಶೇಡಿಮನೆ ದೊಡ್ಡ ಕುಟುಂಬದ ಪರಿಸರಕ್ಕೋ?

----

4. ಬಾಲ್ಯದಲ್ಲಿ, ಮಲೆನಾಡಿನ , ಜೋಗ ಜಲಪಾತದ ಸಮೀಪದ, ಕಣಿವೆಯೊಳಗಿನ ನಮ್ಮಹಳ್ಳಿ ಕಾಳಮಂಜಿಯ ಹಸಿರುಕಾನು, ಕಾಲುದಾರಿ, ಬೆಟ್ಟ, ಗುಡ್ಡ, ಝರಿ, ಹಕ್ಕಿ ಪಕ್ಷಿಗಳ ಚಿಲಿಪಿಲಿ , ವಿಸ್ಮಯದ ಪ್ರಾಕೃತಿಕ ಪರಿಸರಕ್ಕೋ?

-----

5. ಬೆಟ್ಟಕ್ಕೆ ಹೋಗಿ ಭರ್ಜರಿ ಸೊಪ್ಪಿನ ಹೊರೆ ಹೊತ್ತು ಅಡಿಕೆ ತ್ವಾಟಕ್ಕೆ ಹಾಕಿ, ಮಳೆ-ಬಿಸಿಲೆನ್ನದೆಯೇ ಕೃಷಿ ಕೆಲಸಗಳನ್ನು ಸ್ವಲ್ಪವೂ ಬೇಸರಿಸದೆ ಮಾಡುತ್ತಿದ್ದ, ನಮ್ಮನೆಯ ಕೆಲಸದಾಳು , ಶೆಟ್ಟಿ ನಾರಾಯಣ ಕಲಿಸಿದ ಶ್ರದ್ಧೆ , ನಿಯತ್ತಿಗೋ ?

------

6. ಬಾಲ್ಯದಲ್ಲಿ, ರಾಮಾಯಣ , ಮಹಾಭಾರತದ ಕಥೆ ಗಳನ್ನು ನಮ್ಮೊಳಗೆ ನಾಟಿಸಿ, ಯಾವತ್ಕಾಲಕ್ಕೂ ಸಮಾಜದ ಭಾಗವಾಗಿರುವ, ದೇವ, ರಾಕ್ಷಸ, ಮನುಷ್ಯ ಗುಣಗಳನ್ನು ಪರಿಚಯಿಸಿದ, ಭದ್ರಗಿರಿ ಅಚ್ಯುತದಾಸ ರಂತಹ ಕಲಾವಿದರ ಹರಿಕಥೆ ಕಲೆ ಗೋ?

ಕೆರೆಮನೆ ಶಂಭುಹೆಗ್ಡೆ, ಚಿಟ್ಟಾಣಿ ರಾಮಚಂದ್ರ ಹೆಗ್ಡೆಯಂತಹ ಅನೇಕರ ಅದ್ಭುತ ಯಕ್ಷಗಾನ ಕಲೆಗೋ?

-------

7. ನಮ್ಮ ಅವಿಭಕ್ತಕುಟುಂಬದಲ್ಲಿ,

ಪ್ರತಿ ಸಂಜೆಯ ಸಾಂಸ್ಕೃತಿಕ ಪರಿಪಾಠ ( ಬಾಯಿಪಾಠ, ಶ್ಲೋಕಪಠಣ, ಭಜನೆ ,ಹಾಡು ) ನನ್ನೊಳಗೆ ಬಿತ್ತಿದ ಸಂಗೀತಾಸಕ್ತಿಯ ಪರಿಗೋ?

--------

8. ಸಂಗೀತ, ನಾಟಕ, ಮಾತುಗಾರಿಕೆಯ ಹುಚ್ಚನ್ನು ಹತ್ತಿಸಿದ ಆಕಾಶವಾಣಿಗೋ?

-------

9. ಕುಟುಂಬದಲ್ಲಿ ಆಗ್ಗಾಗ್ಯೆ ಜರುಗುತ್ತಿದ್ದ ಮದುವೆ, ಉಪನಯನ ಮುಂತಾದ ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಓಡಾಡಿಕೊಂಡು, ಚಂದವಾಗಿ ಎಲ್ಲವನ್ನೂ ನಿರ್ವಹಿಸುತ್ತಿದ್ದ ನನ್ನ ಸೋದರ ಮಾವ ಉದ್ದೇಮನೆ ರಾಮಣ್ಣ, ವೆಂಕಟಗಿರಿ ಚಿಕ್ಕಯ್ಯನಂಥವರ Management (ಇಂದಿನ MBA ಪದವೀಧರರಿಂದಲೂ ಸಾಧ್ಯವಾಗದ) ಕೌಶಲ್ಯಕ್ಕೋ ?

---------

10. ಸ್ವೇಚ್ಚೆಯಾಗದಂತೆ ಎಲ್ಲಾ ಸ್ವಾತಂತ್ರ್ಯವನ್ನೂ ಕೊಟ್ಟು ಜಾಗ್ರತೆಯಿಂದ ಹದಿವಯಸ್ಸಿನವರೆಗೆ ಬೆಳೆಸಿದ ನನ್ನಪ್ಪ ಅಮ್ಮನ ಪೋಷಕರ ಜವಾಬ್ದಾರಿಗೋ ?

----------

11. ಒಂದನೇ ತರಗತಿಯಿಂದ – BE- ( Electronics& Communication ) ಸ್ನಾತಕೋತ್ತರದ ವರೆಗೆ , ಶಾಲಾ ಕೊಠಡಿಯೊಳಗೆ, ವಿದ್ಯೆ ಕಲಿಸಿದ ವಿದ್ಯಾ ಸಂಸ್ಥೆಗಳ - ನೂರಾರು ಶಿಕ್ಷಕರ ಜ್ನಾನ ಕೌಶಲ್ಯಕ್ಕೋ ?

------------

12. ನನ್ನ ಸಂಗೀತಾಸಕ್ತಿ ಗಮನಿಸಿ, ಸುರತ್ಕಲ್ Engineering college ಗ್ರಂಥಾಲಯದ Engineering ಪುಸ್ತಕಗಳ ನಡುವೆ ಎಲ್ಲೋ ಅವಿತುಕೊಂಡಿದ್ದಸಂಗೀತ ರತ್ನ ಚೂಡಾಮಣಿಪುಸ್ತಕವನ್ನು, ಕರ್ನಾಟಕ ಸಂಗೀತದ ಕಟಪಯಾದಿ ಸೂತ್ರವನ್ನು ನನಗೆ ಪರಿಚಯಿಸಿದ ಪ್ರೊ, ಕೆ.ಎಂ. ಹೆಬ್ಬಾರ್ ಅವರ ಪ್ರೋತ್ಸಾಹಕ್ಕೋ ?

---------------

13. ದಾವಣಗೆರೆಯಲ್ಲಿ 5 ವರ್ಷದ ಇಂಜಿನಿಯರಿಂಗ್ ವ್ಯಾಸಂಗದ ಅವಧಿಯಲ್ಲಿ , ಉಚಿತ ವಸತಿ ಸೌಲಭ್ಯ ಒದಗಿಸಿದ ಚೆನ್ನಗಿರಿ ರಂಗಪ್ಪ-ವಿರೂಪಾಕ್ಷಪ್ಪ ಅವರ ಔದಾರ್ಯದ ಗುಣಕ್ಕೋ?

--------

14. ನನ್ನ 40 ವರ್ಷದ professional ಜೀವನ ಪಯಣದಲ್ಲಿ ಹಂತ ಹಂತವಾಗಿ ಬೆಳೆಸಿದ ಸುಬ್ಬರಾವ್, ಡಾ.ಪ್ರಭಾಕರ್ ರಂತಹ ಅದೆಷ್ಟೋ ವ್ಯಕ್ತಿಗಳ ಮಾರ್ಗದರ್ಶನಕ್ಕೋ ?

----------

13.ಬೋಧನೆಯ ತುಡಿತ ಇರುವ ನನಗೆ, PESIT Engineering ಕಾಲೇಜಿನಲ್ಲಿ ದೊರೆತ ಪ್ರೋತ್ಸಾಹಕಾರೀ ಪರಿಸರಕ್ಕೋ ?

----------

14. ನನ್ನ ಬೋಧನೆಯನ್ನು ಆನಂದಿಸುತ್ತಾ, ನನ್ನಿಂದ ಪ್ರೇರೇಪಣೆ ಪಡೆಯುತ್ತಾ, ನಾನೂ ಜೊತೆ ಜೊತೆಗೇ ಕಲಿಯುವಂತೆ ಮಾಡಿದ , ಸಾವಿರಾರು ವಿದ್ಯಾರ್ಥಿಗಳ ಮನಸುಗಳಿಗೋ?

---------

15. ನನ್ನೊಳಗಿನ ಸುಗಮ ಸಂಗೀತ ಸಂಯೋಜಕನ ಬೆನ್ನು ತಟ್ಟಿದ ಸುಗಮ ಸಂಗೀತ ಮೇರು ಅಶ್ವತ್ಥ್, ಕವಿ ಎಚ್.ಎಸ್. ವೆಂಕಟೇಶಮೂರ್ತಿರಂತಹ ಅನೇಕರ ಪ್ರೋತ್ಸಾಹಕ್ಕೋ?

----------

16. ನಾ ಕಟ್ಟಿ ಬೆಳೆಸುತ್ತಿರುವ ಸುಗಮ ಸಂಗೀತ ಬಳಗ ನಮ್ಮನೆ ಸಂಗೀತ ಪ್ರಣತಿಯ ಎಲ್ಲ ಕಲಾವಿದರ ಪ್ರತಿಭೆ ಮತ್ತು ಸಹಕಾರಕ್ಕೋ?

-----------

17. ನಮ್ಮ ಸಂಗೀತವನ್ನು ಆಸ್ವಾದಿಸಿ, ಪ್ರತಿಕ್ರಿಯಿಸಿ, ಹಂಚಿ, ಪ್ರೋತ್ಸಾಹಿಸುತ್ತಿರುವ ಸಂಗೀತ ರಸಿಕರ ಅಭಿರುಚಿ, ಅಭಿಮಾನಕ್ಕೋ ?

----------

18. ಸಂಸಾರ ಬಂಡಿಯನ್ನು ಸುಗಮವಾಗಿ ಸಾಗಿಸಲು ಮೃದುವಾಗಿ ತಿರುಗುತ್ತಿದ್ದ ಗಾಲಿ ಪತ್ನಿ ವಿಜೂಳ ಪ್ರೀತಿ, ಕಳಕಳಿ, ಸರಳ, ಸಾತ್ವಿಕ ಗುಣಕ್ಕೋ?

-----------

19.ಕೊಟ್ಟ ಸ್ವಾತಂತ್ರ್ಯವನ್ನು ಸ್ವೇಚ್ಚೆಯನ್ನಾಗಿ ಪರಿವರ್ತಿಸದೆ, ಹಂತ ಹಂತವಾಗಿ ಬೆಳೆದು, ಉತ್ತಮ ಇಂಜಿನಿಯರ್ ಆಗಿ, ಪತ್ನಿ ರಶ್ಮಿ ಜೊತೆಗೆ ಒಲವಿನ , ಸುಖೀ ಸಂಸಾರ ಸಾಗಿಸುತ್ತಿರುವ ಮಗ ಶಶಾಂಕ್ ನ ಹೊಣೆಗಾರಿಕೆಯ ಜೀವನ ಕ್ರಮಕ್ಕೋ? ಜತನದಿಂದ ಆಪ್ಪ , ಅಮ್ಮನನ್ನು ಜತನದಿಂದ ನೋಡಿಕೊಳ್ಳುತ್ತಿರುವ ಮಗ, ಸೊಸೆಯ ಪ್ರೀತಿ, ಕಳಕಳಿಗೋ?

---------

20. 19 ತಿಂಗಳ ಹಿಂದೆಯಷ್ಟೇ, ಮೇಲಿನಿಂದ ಇಳಿದು ಬಂದು, ನಮ್ಮನೆ ಪರಿವಾರಕ್ಕೆ ಸೇರ್ಪಡೆಯಾಗಿರುವ,ಮುದ್ದು ದೇವತೆ, ಮೊಮ್ಮಗಳು ಆರೋಹಿಯ ಮುಗ್ಧ, ಲವಲವಿಕೆಯ , ಕೇಕೆ, ನಗೆಪತಾಕೆ, ತೊದಲು ನುಡಿ,ಆಟ , ಓಟ, ನಲಿದಾಟಕ್ಕೋ?

---------

21.ನನಗೆ ಬೇಕಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಳ್ಳಲು ಪೂರಕವಾಗಿರುವ ,ಮಾಂತ್ರಿಕ ಅಂತರ್ಜಾಲ ತಂತ್ರಜ್ನಾನದ ಸೌಕರ್ಯಕ್ಕೋ?

Facebook , YouTube ಮುಂತಾದ ಸಾಮಾಜಿಕ ಜಾಲತಾಣಗಳಿಗೋ? ಅದರಿಂದ ನಾ ಸಂಪಾದಿಸಿದ ಸ್ನೇಹ ಸಂಪತ್ತಿಗೋ ?

----------

22. ಇದೆಲ್ಲದರ ಜೊತೆ, ಸುಗಮ ಸುಂದರ ಜೀವನದಲ್ಲಿ ಆಗೊಮ್ಮೆ , ಈಗೊಮ್ಮೆ ನುಸುಳಿರುವ ಕಹಿ ಅನುಭವಗಳು ಕಲಿಸಿದ ಪಾಠಗಳಿಗೋ ?

----------

??

??

*******

ಓಹ್... ಪಟ್ಟಿ ನಿಲ್ಲುವುದೇ ಇಲ್ಲ!!!!!

ಆಲೋಚಿಸಿದಂತೆಲ್ಲಾ..ಅನಂತವಾಗುವ ಸಾಧ್ಯತೆ.

ಇಷ್ಟು ಸಾಕು ಇಂದಿಗೆ

*********

**********

ಇಷ್ಟೆಲ್ಲಾ ಸರಿ...ಆದರೆ?

---

ಈ ಬರಹದಲ್ಲಿ ಒಂದು ಮಹಾ ಪ್ರಮಾದವಾಗಿದೆಯೇ!!!!???

ಇಡೀ ಜಗತ್ತಿನ ಮಹಾಗುರು ಆ ಭಗವಂತನಿಗೇ ವಂದನೆ ಅರ್ಪಿಸೋಕೆ ಮರೆತಿದ್ದೇನೆಯೇ?

!!??!!!?!

----

ಖಂಡಿತಾ ಇಲ್ಲ

---

ನಾ ಪಟ್ಟಿ ಮಾಡಿರುವ ಎಲ್ಲದರಲ್ಲಿಯೂ ದೇವರನ್ನು ಕಂಡಿದ್ದೇನೆ.

ಯಾಕೆ ಅಂದರೆ

ಆ ಕಾಣದ ದೇವರು,

ಅಥವಾ

ಜಗನ್ನಿಯಾಮಕ

ಅಥವಾ ಒಂದು ಮಹಾ ಚೈತನ್ಯ

ನನಗೆ ಯಾವಾಗಲೂ ವಿಸ್ಮಯ ..

ಅರ್ಥ ಆಗಿಲ್ಲ

ಇನ್ನೂ....

*********

ಆದ್ದರಿಂದ 'ಕಾಣುವ ದೇವರುಗಳಿಗೆ' ನನ್ನ ಕೃತಜ್ಞತೆಯನ್ನು ಸಲ್ಲಿಸುವಷ್ಟು ಮಾತ್ರ , ಕಿರಿಯ, ನಮ್ರ, ಮುಗ್ಧ ನಾನು

********

ಇಷ್ಟು ದೀರ್ಘ ಬರಹದ ಮೂಲಕ 'ಬೋರ್ ' ಗರೆತ ಮಾಡಿದರೂ, ಓದುವ ನಿಮಗೆ , ಧನ್ಯವಾದಗಳು


ಕಾಮೆಂಟ್‌ಗಳು

  1. ಒಳ್ಳೆಯ ಬರಹ
    ಸಾರ್ಥಕ ಗೊಳಿಸಿಕೊಳ್ಳುತ್ತಿರುವ ಬದುಕು
    All the best

    ಪ್ರತ್ಯುತ್ತರಅಳಿಸಿ
  2. ಒಳ್ಳೆಯ ಮಳೆಯೂ ನಿಮ್ಮೂರಿನಲ್ಲಿ ನಿಮ್ಮನ್ನು ನೆನೆಯತಿಹುದು.
    ಭಗವಂತನ ಕೃಪೆ ಸದಾ ನಿಮ್ಮ ಮೇಲಿರಲಿ.

    ಪ್ರತ್ಯುತ್ತರಅಳಿಸಿ
  3. ವಿದ್ಯಾ ಭರತನಹಳ್ಳಿಜುಲೈ 23, 2024 ರಂದು 04:35 AM ಸಮಯಕ್ಕೆ

    ನಿಮ್ಮ ವಿನಯ, ಶ್ರದ್ಧೆ , ಎಲ್ಲರನ್ನೂ ಪ್ರೀತಿಯಿಂದ ಕಾಣುವ ಗುಣದಿಂದಾಗಿ ನೀವು ಈ ಮಟ್ಟಕ್ಕೆ ಏರಿದ್ದೀರಿ. ಶುಭಾಶಯಗಳು

    ಪ್ರತ್ಯುತ್ತರಅಳಿಸಿ
  4. ಬದುಕಿನ ಅವಲೋಕನ ಒಂದು ಒಳ್ಳೆಯ ಅಭ್ಯಾಸ ಇದು ಮುಂದಿನ ಜೀವನಕ್ಕೆ ಮಾರ್ಗಸೂಚಿಯು ಹೌದು ನೀವು ಜೀವನದ ಎಲ್ಲಾ ಮಜಲುಗಳನ್ನು ತುಂಬಾ ಅರ್ಥವತ್ತಾಗಿ ಅವಲೋಕಿಸಿದ್ದೀರಿ 👌👌

    ಪ್ರತ್ಯುತ್ತರಅಳಿಸಿ
  5. ಪ್ರೀತಿಯ ಚಿದಂಬರ ನಿಮಗೆ 66ನೆ ಹುಟ್ಟುಹಬ್ಬದ ಶುಭಾಶಯಗಳು. ರಾಜರಾವ್ ಹೆಚ್ ಆರ್

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ