'ಊ ಮ ಹೇ (ಮಾ)' ಎಂದು ಹೀಯಾಳಿಸದಿರಿ ಹುಚ್ಚಪ್ಪಗಳಿರಾ

 



'ಊ ಮ ಹೇ (ಮಾ)' 

ಎಂದು ಹೀಯಾಳಿಸದಿರಿ ಹುಚ್ಚಪ್ಪಗಳಿರಾ

'ಊ ಮ ಹೇ'

ಬಾಲ್ಯದಿಂದಲೂ ನಾವು ಕೇಳಿಕೊಂಡು ಬಂದಿರೋ ಸಂಕ್ಷೇಪಣ ( ಸಂಕೇತಾಕ್ಷರಗಳು) ಇದು.

 " ಏನ್ ಸ್ವಾಮೀ, ಏನ್ಸಮಾಚಾರ? ಹೇಗಿದೆ ಜೀವನ ? "

ಅಂತ ಔಪಚಾರಿಕವಾಗಿ ಕೇಳಿದ್ರೆಯಾವಾಗಲೂ ಚಿಂತಿಸುತ್ತಲೇ / ಕೊರಗುತ್ತಲೇ ಇರುವ ಕೆಲವು ನಿರುತ್ಸಾಹೀ ವ್ಯಕ್ತಿಗಳು , ವಾಡಿಕೆಯಲ್ಲಿ ಕೊಡುವ ಉತ್ತರ

" ಅಯ್ಯೋ, ಏನು ವಿಶೇಷಾನೂ ಇಲ್ಲಾ ಸ್ವಾಮಿ. ಬರೀ 'ಊ ಮ ಹೇ', ಇಷ್ಟೇ ಆಗಿಹೋಗಿದೆ ಜೀವನ" ಅಂತ ಕೀಳರಿಮೆಯ ಧ್ವನಿಯಲ್ಲಿ ಗೊಣಗುತ್ತಾರೆ

-------------

ಹಾಗೆಯೇ, ಯಾವುದಾದರೂ ಸೋಮಾರಿ ವ್ಯಕ್ತಿ, ಬೇಜವಾಬ್ದಾರಿಯಿಂದ  ವೃಥಾ ಕಾಲಹರಣ ಮಾಡ್ತಾ ಇದ್ರೆ

“ ಈ ಮನುಷ್ಯನ  ಜೀವನ ಕೇವಲ ಊ ಮ ಹೇ’ , ಅಷ್ಟೇ” ಅಂತ ಹೀಯಾಳಿಸುವುದುಂಟು.  

ಅಂದರೆ,  ಕೇವಲ ಮೂರೇ ಕೆಲ್ಸ ಮಾಡ್ತಾ ಇರೋದು ಅಂತ ಅರ್ಥ:

1. ಉಣ್ಣು

2. ಮಲಗು

3.ಹೇಲು

{ಕ್ಷಮೆ ಇರಲಿ , ಈ ಪದವನ್ನು ನೇರವಾಗಿ  ಬಳಸಿರೋದಕ್ಕೆ,..(ಅನಿವಾರ್ಯ)

----------

ಆದರೆ, ಲಘುವಾಗಿ ಬಳಸುವ ಈ ಸಂಕೇತಾಕ್ಷರಗಳ ಕುರಿತು   ಗಂಭೀರವಾಗಿ ಆಲೋಚಿಸಿದ್ರೆಇವುಗಳ ಮಹತ್ವ ತಿಳಿಯುತ್ತೆ ಮತ್ತು ಗೌರವ ಜಾಸ್ತಿಯಾಗುತ್ತೆ.

--------

 'ಊ ಮ ಹೇ'

ಒಬ್ಬ ಮನುಷ್ಯನ ಉತ್ತಮ 

ಸ್ಥಿತಿವಂತಿಕೆ

ಆರೋಗ್ಯ 

ಮತ್ತು 

ನೆಮ್ಮದಿಯನ್ನು

ವ್ಯಕ್ತಪಡಿಸುತ್ತದೆ

------

ಹೇಗೆ ?

ಇದೇ ಈ ಬರಹದ ಹೂರಣ

**********

1.  ಮೊದಲ ಅಕ್ಷರ- 

 ಉಣ್ಣು

ಪ್ರತಿ ಮನುಷ್ಯನ ಮೂಲ  ಅವಶ್ಯಕತೆಗಳಲ್ಲಿ ಇದು ಪ್ರಮುಖ. "ಎಲ್ಲಾರೂ ಮಾಡುವುದು ಹೊಟ್ಟೆಗಾಗಿ...." .

 ಊಟ ಅಂದೊಡನೆಯೇ, ಮೂರು ಹಂತಗಳಾಗಿ ವಿಭಾಗಿಸಬಹುದು.

1.ಊಟವನ್ನು ಗಳಿಸೋದು

2.ಊಟವನ್ನು ಸೇವಿಸುವುದು/ಸವಿಯುವುದು

3.ಊಟವನ್ನು ಜೀರ್ಣಿಸಿಕೊಳ್ಳೋದು

 ಊಟವನ್ನು‌ ಮಾಡಬೇಕಾದ್ರೆ, ಮೊದಲು ಊಟವನ್ನು ಗಳಿಸಬೇಕು. ಊಟವನ್ನು ಗಳಿಸಬೇಕು ಅಂದರೆ  ಸೂಕ್ತ ವೃತ್ತಿಜೀವನ ನಡೆಸಲೇಬೇಕು. ವೃತ್ತಿಜೀವನ ನಡೆಸಬೇಕು ಅಂದರೆ ಅದಕ್ಕೆ ಬೇಕಾದ ಅರ್ಹತೆ,  ಜ್ನಾನ, ಕೌಶಲ್ಯ ಇರಲೇಬೇಕು.

####################

ಈ ಸಂದರ್ಭದಲ್ಲಿ, ಹಾಸ್ಯ ಸಾಹಿತಿ ಬೀಚಿಯವರ,  ತಿಮ್ಮನ ಪ್ರಸಂಗವೊಂದು ನೆನಪಾಗ್ತಾ ಇದೆ.

ಕಡು ಬಡವ ತಿಮ್ಮ,  ಹುಷಾರಿಲ್ಲ ಅಂತ ವೈದ್ಯರ ಬಳಿ ಹೋಗ್ತಾನೆ.

 ಅವರು ಪರೀಕ್ಷಿಸಿ, ಮಾತ್ರೆಗಳನ್ನು ಕೊಟ್ಟು ಹೀಗೆ ಹೇಳ್ತಾರೆ,

 ನೋಡೋ ತಿಮ್ಮ, 5 ದಿನದವರೆಗೆ,  ಪ್ರತಿದಿನ ಬೆಳಿಗ್ಗೆ ತಿಂಡಿಯಾದ ನಂತರ , ಮದ್ಯಾಹ್ನ , ರಾತ್ರಿ ,  ಊಟ ಆದ ಮೇಲೆ ಒಂದೊಂದು ಮಾತ್ರೆ ಸೇವಿಸಬೇಕು.

ನೆನಪಿಟ್ಕೋ, ಯಾವುದೇ ಕಾರಣಕ್ಕೂ ಊಟ, ತಿಂಡಿಗಿಂತಾ ಮುಂಚೆ ತಗೋಬಾರ್ದು. ಗೊತ್ತಾಯ್ತಾ? “  

ತಿಮ್ಮ ತಲೆ ಅಲ್ಲಾಡಿಸ್ತಾನೆ .

ಒಂದು ವಾರದ ನಂತರ ,  ಆ ವೈದ್ಯರು ಮಾರ್ಕೇಟಿನಲ್ಲಿ ಓಡಾಡುವಾಗ , ಅಕಸ್ಮಾತ್ ತಿಮ್ಮ ಕಾಣಿಸ್ತಾನೆ. ಕೈಯಲ್ಲಿ ಅದೇನೋ ಮುಚ್ಚಿಟ್ಟುಕೊಂಡಿರ್ತಾನೆ.

“ ಏನೋ ತಿಮ್ಮ , ಈಗ ಹೇಗಿದೆಯೋ ನಿನ್ನ ಆರೋಗ್ಯ?” ವೈದ್ಯರು ಕೇಳ್ತಾರೆ.

ತಿಮ್ಮ ಸಪ್ಪೆ ಧ್ವನಿಯಲ್ಲಿ ಹೇಳ್ತಾನೆ

“ಸ್ವಲ್ಪಾನೂ ಗುಣ ಆಗಿಲ್ಲಾ ಸಾರ್. ಗುಣ ಆಗೋದಿರ್ಲಿ. ಇನ್ನೂ ಜಾಸ್ತಿಯಾಗಿದೆ”

------

ವೈದ್ಯರಿಗೆ ಆಶ್ಚರ್ಯ, ಬೇಸರ .

ಎಂಥೆಂಥಾ ರೋಗಗಳನ್ನು ಗುಣಪಡಿಸಿದ್ದೀನಿ ತಾನು. ಈ ಜುಜುಮಿ ಕಾಯಿಲೆ ಇನ್ನೂ ಗುಣ ಆಗಿಲ್ಲ ಅಂದ್ರೆ, ತನ್ನ ವೃತ್ತಿಗೇ ಅವಮಾನ

“ ತಿಮ್ಮಾ, ಅದೇನೋ ಕೈಯಲ್ಲಿ?”

“ ಅದೇ ಡಾಕ್ಟ್ರೇ, ನೀವು ಕೊಟ್ಟಿರೋ ಮಾತ್ರೆಗಳು”

“ ಓಹೋ! ಇದೋ ಸಮಾಚಾರ? ಮಾತ್ರೆನೇ ನುಂಗದೆ ನಿನಗೆ ಕಾಯಿಲೆ ಗುಣ ಆಗೋದಾದ್ರೂ ಹ್ಯಾಗೋ ತಲೆಹರಟೆ? ಯಾಕೋ ಮಾತ್ರೆ ಸೇವಿಸ್ಲಿಲ್ಲ? ” ಗದರಿಸ್ತಾರೆ.

ತಿಮ್ಮ ಏನೋ ಅಸಹಾಯಕನಂತೆ, , ತಡವರಿಸ್ತಾ  ಹೇಳ್ತಾನೆ

“”ಅದೂ...ಅದೂ.....ನೀವು ಖಡಕ್ಕಾಗಿ ಹೇಳಿದ್ರಿ – ಊಟ , ತಿಂಡಿ ಆದ ಮೇಲೆಯೇ ಮಾತ್ರೆ ತಗೋಬೇಕು ಅಂತ

“ಹೌದು”

“ ಮಾತ್ರೆಯೇನೋ ಕೈಲಿದೆ , ಆದ್ರೆ, ಆದ್ರೆ ...ಊಟ ತಿಂಡಿ!!?? ಇಲ್ವಲ್ಲ ಸಾರ್, ಯಾರಾದ್ರೂ ಊಟ ಹಾಕ್ತಾರೇನೋ ಅಂತ ಹುಡುಕ್ತಾ ಇದೀನಿ....ಊಟ ಮಾಡದೆಯೇ ಮಾತ್ರೆ ತಿನ್ನೋ ಹಾಗಿಲ್ವಲ್ಲಾಸಾರ್ ?”

ವೈದ್ಯರು ದಂಗಾದರು!

ನಗುವುದೋ ? ಅಳುವುದೋ ? ಗೊತ್ತಾಗಲಿಲ್ಲ ವೈದ್ಯರಿಗೆ.

ಆಮೇಲೆ ತಿಮ್ಮನನ್ನು ಅವರ ಮನೆಗೇ ಊಟಕ್ಕೆ ಕರೆದುಕೊಂಡು ಹೋದ್ರೋ ಏನೋ, ಗೊತ್ತಿಲ್ಲ  

-----

ಈ ಪ್ರಸಂಗದಲ್ಲಿ, ಸ್ವಲ್ಪ ಉತ್ಪ್ರೇಕ್ಷೆ  ಇದ್ದರೂ, ಅನೇಕರ ಬದುಕಿನ ವಾಸ್ತವತೆ ಅಡಗಿದೆ. 

#####################

ಎಷ್ಟೋ ಮಂದಿಗೆ ಊಟ ಸೇರೋದೇ ಇಲ್ಲ . ಸರಿಯಾಗಿ ಹಸಿವಾಗೋದೇ ಇಲ್ಲ.  ಸ್ಥಿತಿವಂತರಾಗಿ, ಹೊಟ್ಟೆತುಂಬಾ ಊಟ ಮಾಡಲು ಅನುಕೂಲವಿದ್ದರೂ, ಊಟ ಮಾಡೋಕೆ ಆಗೋದಿಲ್ಲ. ಇದು ಒಂದು ಅಸ್ವಸ್ಥತೆ. 

ಅಲ್ಲದೆಯೇ ಅದು ಸೇರೋಲ್ಲ, ‘ಇದು ರುಚಿಸೋಲ್ಲ ಅನ್ನೋ ತಕರಾರು ಬೇರೆ. ಅದೇನೋ ಹೇಳ್ತಾರಲ್ಲ. “ ಆರತಿ ತಗೊಂಡರೆ ಉಷ್ಣ, ತೀರ್ಥ ತಗೊಂಡ್ರೆ ಶೀತ, ಪ್ರಸಾದ ತಗೊಂಡ್ರೆ ಅಜೀರ್ಣ”

 ಯಾವುದೋ ಅನಾರೋಗ್ಯದ ಕಾರಣದಿಂದಾಗಿ, ವೈದ್ಯರ ಸಲಹೆ ಮೇರೆಗೆ, ಅನಿವಾರ್ಯವಾಗಿ, ನಾಲಿಗೆ ಬಯಸಿದ್ದನ್ನೆಲ್ಲಾ ತಿನ್ನೋಕಾಗೋಲ್ಲ.

ಒಟ್ಟಿನಲ್ಲಿ, ಈ ವರ್ಗದವರು, ಊಟವನ್ನು  ಸವಿಯಲಾಗದ ವರ್ಗ.  

----

ಉಂಡ ನಂತರ , ಜೀರ್ಣಿಸಿಕೊಳ್ಳುವ ಸಾಮರ್ಥ್ಯದ ಕೊರತೆ ಇರುವವರು ಇನ್ನೊಂದಿಷ್ಟು ಮಂದಿ. ನಾಲಿಗೆ ಚಪ್ಪರಿಸುತ್ತೆ, ಆದರೆ ಹೊಟ್ಟೆ ತಿರಸ್ಕರಿಸುತ್ತೆ. 

------

ಈಗ ಹೇಳಿ 

ಅಯ್ಯೋ

ಬರೀ ಊಟ ಮಾಡ್ತೀನಿ ಅಂತ ಯಾರಾದ್ರೂ ಹೇಳಿದ್ರೆ ಆತ  ಸ್ಥಿತಿವಂತ ಮತ್ತು ಆರೋಗ್ಯವಂತ ತಾನೇ?

********

2.  ಎರಡನೇ ಅಕ್ಷರ- ‘ಮ’

ಮಲಗು

ಅಯ್ಯೋ..ಇದೇನ್ ಮಹಾ ? ಎಲ್ರೂ ಮಾಡುವ ಸಹಜಕ್ರಿಯೆ ಅಂತ ಮೇಲ್ನೋಟಕ್ಕೆ ಅನಿಸಬಹುದು.

ಆದರೆ ಇದರಲ್ಲಿಯೂ ಸಂಕೀರ್ಣತೆ ಇದೆ

----

ಎರಡು ಹಂತಗಳು

1.ಮಲಗುವುದು

2.ನಿದ್ರಿಸೋದು

-----

1. ಮಲಗೋದು

ಅನುಕೂಲಕರ ಸೌಕರ್ಯ ಇರಬೇಕು. 

ಯಾವ ಸೌಕರ್ಯ?

ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

---

ಸುಸ್ಥಿತಿಯಲ್ಲಿರುವ ಒಂದು ಕೋಣೆ. ಕೋಣೆ ಇರಬೇಕು ಅಂದರೆ  ಮೂಲಭೂತ ಅವಶ್ಯಕತೆಯಾದ ಮನೆ ( ಆಶ್ರಯ) ಇರಲೇಬೇಕು. ಪ್ರಪಂಚದಲ್ಲಿ,  ಅದೆಷ್ಟೋ ಮಂದಿ ನಿರಾಶ್ರಿತರಿದ್ದಾರೆ. ಬಾಡಿಗೆ ಮನೆಯೋ, ಸ್ವಂತ ಮನೆಯೋ, ಅಂತೂ ಒಂದು ಮನೆ ಇರಬೇಕು. ಅಷ್ಟರಮಟ್ಟಿಗೆ ಅವನ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು.

ಸ್ಥಿತಿವಂತರಲ್ಲಿ ಪ್ರತಿಯೊಬ್ಬನಿಗೂ ಪ್ರತ್ಯೇಕ ಖಾಸಗೀ ಕೋಣೆ ಇರಬಹುದು. ಆದರೆ  ಬಡವರಿಗೆ, ಮನೆಯ ಸದಸ್ಯರೆಲ್ಲರೂ ಒಟ್ಟಿಗೇ, ಒಂದು ಕಡೆ ಮಲಗಲೇಬೇಕಾದ ಅನಿವಾರ್ಯತೆ.

ಮಲಗಲು ಒಂದು ಹಾಸಿಗೆ ಬೇಕು.

ಸ್ಥಿತಿವಂತರು ಮಂಚದ ಮೇಲೆ,  ಮೆತ್ತನೆಯ ಹಾಸಿಗೆಯಲ್ಲಿ ಮಲಗ್ತಾರೆ. ಬಡವರು ಚಾಪೆ ಮೇಲೆ. ನಿರಾಶ್ರಿತರು ನೆಲದ ಮೇಲೆ.  

ಆದರೆ , ಇನ್ನೂ ಪ್ರಮುಖವಾದ ಅಂಶ ಅಂದರೆ,

ಸೌಕರ್ಯವೊಂದಿದ್ದರೆ ಸಾಕೇ?

ಮಲಗುವ ದೇಹ ಆರೋಗ್ಯವಾಗಿರಬೇಕಲ್ಲವೇ?

ಹೌದು,

ಎಷ್ಟೋ ಮಂದಿಗೆ ಬೆನ್ನುನೋವು, ಭುಜನೋವು...

ಹೇಗೆಂದರೆ ಹಾಗೆ ಮಲಗೋಕೂ ಆಗೋಲ್ಲ. { of course, ಇಂತಹ ಸಮಸ್ಯೆಗಳು, ವಯಸ್ಸಾದೋರಿಗೆ ಜಾಸ್ತಿ }

ಇನ್ನು ಕೆಲವರಿಗೆ, ಮಲಗೋದಕ್ಕೆ ಏನೂ ತೊಂದ್ರೆ ಇಲ್ಲ, ಆದರೆ ಏನ್ಮಾಡಿದ್ರೂ ನಿದ್ರೆ ಬರೋದೇ ಇಲ್ಲ..!! ಹತ್ತಾರು ಕಾರಣಗಳು, ದೈಹಿಕ , ಮಾನಸಿಕ, ಭಾವನಾತ್ಮಕ. ಅದಕ್ಕಾಗಿ ಹಲವಾರು ಚಿಕಿತ್ಸೆಗಳು.

ಹಳೇ ನಾಣ್ನುಡಿ ಇದೆಯಲ್ಲಾ?

You can buy the best bed , but not the best sleep.

 ಈಗ ಹೇಳಿ,   ‘ ಅಯ್ಯೋ ಬರೀ ಮಲಗ್ತೀನಿ‌ ಅಂತ ಹೇಳೋರು ಎಷ್ಟು ಸಂಪತ್ಭರಿತರು / ಅದೃಷ್ಟಶಾಲಿಗಳು ಅಲ್ಲವೇ ?

*******

 3. ಮೂರನೇ ಅಕ್ಷರ ಹೇ 

    ನಮಗೆಲ್ಲರಿಗೂ ಚೆನ್ನಾಗಿ ಗೊತ್ತಿರೋ ವಿಚಾರ, ನಮ್ಮ ದೇಹದ ವಿನ್ಯಾಸವೇ ಒಂದು ವಿಸ್ಮಯ.  ಸೂಕ್ತ ಸಮಯದಲ್ಲಿ ರುಚಿ ರುಚಿಯಾದ ಆಹಾರವನ್ನು   ಸೇವಿಸಿಜೀರ್ಣಿಸಿಕೊಂಡು, ಶಕ್ತಿಯನ್ನು ಪಡೆಯುವುದು ಎಷ್ಟು ಮುಖ್ಯವೋ, ಎಷ್ಟು ಅನಿವಾರ್ಯವೋ,  ವರ್ಜ್ಯವಾದದ್ದನ್ನು ಸೂಕ್ತಕಾಲದಲ್ಲಿ ವಿಸರ್ಜಿಸುವುದೂ ಅಷ್ಟೇ‌ ಮುಖ್ಯ ಮತ್ತು ಅನಿವಾರ್ಯ.

 ಈ ಕ್ರಿಯೆಯಲ್ಲಿ ಅಸ್ವಾಸ್ಥ್ಯತೆ ಇರುವ ಮಂದಿ ಅದೆಷ್ಟೋ..

*ಮಲಬದ್ಧತೆಯಿಂದ ಬಳಲುವವರು

* ಸೇವಿಸಿದ ಆಹಾರ ಆಜೀರ್ಣವಾಗಿ, ಬೇಧಿಯಿಂದ ಒದ್ದಾಡುವವರು

----

ಈ ವಿಚಾರದ ಕುರಿತು, ನನ್ನ ಬದುಕಿನ ಒಂದು ಗಂಭೀರ  ಅನುಭವವನ್ನು‌ ಹಂಚಿಕೊಳ್ಳಲೇಬೇಕು. 

ಕ್ಯಾನ್ಸರ್ ನಿಂದ ಬಳಲಿ, ಕಾಲವಶರಾದ  ನನ್ನಪ್ಪನ ಸಂಕಟದ ನೆನಪು ಕಾಡ್ತಾ ಇರುತ್ತೆ.

ಮಲವಿಸರ್ಜನೆ ಕ್ಷಣ ಬಂದಾಗಲೆಲ್ಲಾ, 'ಅಯ್ಯೋ ಯಾಕಾದರೂ ಈ ಕ್ರಿಯೆ ಮಾಡಬೇಕೋ ಅಂತ' ಸಂಕಟಪಡ್ತಾ ಇದ್ರು. ಕಾರಣಅವರಿಗೆ ಗುದದ್ವಾರ ನಾಳದಲ್ಲಿ  ಕ್ಯಾನ್ಸರ್ ಆಗಿತ್ತು. ಆಗ ಅವರು ಅನುಭವಿಸ್ತಾ ಇದ್ದ ತೀವ್ರ ನೋವನ್ನು ನೋಡುವಾಗ , ಸಾಮಾನ್ಯ ದಿನಗಳಲ್ಲಿ 'ಮಲವಿಸರ್ಜನೆ' ಕ್ರಿಯೆಯ ಬಗ್ಗೆ ಕೀಳಾಗಿ ನೋಡ್ತಾ , ಮಾತಾಡ್ತಾ ಇದ್ದ ನಮಗೆ, ಈ ಕ್ರಿಯೆಯನ್ನೂ 'ಎತ್ತರದ' ದೃಷ್ಟಿಯಿಂದ ನೋಡಬೇಕು ಎಂಬ ಮನೋಭಾವ ಗಟ್ಟಿಯಾಯಿತು.

ನಂತರ ಆ ನಾಳವನ್ನು ಕತ್ತರಿಸಿ, colostomy ಎಂಬ ವಿಧಾನದ ಚಿಕಿತ್ಸೆಯಿಂದಾಗಿ ಅವರ ನೋವು ಪರಿಹಾರವಾಗಿ, ಅಮೇಲೆ ಅನೇಕ ವರ್ಷ ನೆಮ್ಮದಿಯಿಂದ ಬದುಕಿದ್ದರು.

------

ಇದು ಮಲವಿಸರ್ಜನೆಯ ಅಸ್ವಸ್ಥತೆಯ  ಉದಾಹರಣೆಯಾದರೆ, ಆರೋಗ್ಯ ಪೂರ್ತಿ ಸರಿಯಾಗಿ ಇದ್ದವರಿಗೂ, ಮಲವಿಸರ್ಜನೆ ಮಾಡುವುದಕ್ಕೆ  ಸೌಕರ್ಯದ ಕೊರತೆ. ಇನ್ನೊಂದು ದೊಡ್ಡ ವಿಷಯವೇ ಸರಿ.

 ಪಾಯಖಾನೆ ( TOILET) ವ್ಯವಸ್ಥೆಯ ಕೊರತೆ

ಗ್ರಾಮೀಣ ಪ್ರದೇಶದಲ್ಲಿ, Toilet ವ್ಯವಸ್ಥೆ ಇಲ್ಲದೆಯೇ ಚೊಂಬು ಹಿಡಿದು ಬಯಲಿಗೋ ( ಬಯಲು ಸೀಮೆಯವರಾದರೆ), ಗುಡ್ಡಕ್ಕೋ, ಹೊಳೆಕಡೆಗೋ ( ಮಲೆನಾಡಿನವರಾದರೆ), ಸಮುದ್ರದ ಕಡೆಗೋ ( ಕರಾವಳಿಯವರಾದ್ರೆ) ಓಡಬೇಕಾದ ಅನಿವಾರ್ಯತೆ, ಅಸಹಾಯಕತೆ. ಅದರಲ್ಲಿಯೂ ಸ್ತ್ರೀಯರ ಬವಣೆಯಂತೂ ದುಃಸ್ಥಿತಿಯೇ ಸರಿ.

ಹಾಗಂತ, ನಾನೂ ಈ ಬಗೆಯ ಅಸೌಕರ್ಯದಲ್ಲಿಯೇ ಬಾಲ್ಯವನ್ನು ಕಳೆದವನು.

ಇನ್ನು ಕೆಲವು ಅನಿರೀಕ್ಷಿತ , ಬಿಕ್ಕಟ್ಟಿನ ಸಂದರ್ಭಗಳು.toilet ಇದ್ದರೂ ನೀರಿಲ್ಲದಿರುವುದು. ಪಾಶ್ಚಿಮಾತ್ಯ ಶೈಲಿಯಾದರೆ tissue paper ಇಲ್ಲದೆಯೇ ಇರುವುದು...toilet block ಆಗಿ , ಬಳಸಲಾಗದ ಸ್ಥಿತಿ.

ಈಗ ಹೇಳಿ, ಊ ಮ ಹೇ ಯಲ್ಲಿ ಮೂರನೇ ಪದಕ್ಕೆ ಅದೆಷ್ಟು ಮಹತ್ವ ಇದೆ ಅಲ್ವಾ?

******

ಈ ಲೇಖನ ಬರೆಯುತ್ತಿರುವಾಗಲೇ ನನಗೆ ಹೊಳೆದದ್ದು, ಈ ಸಂಕ್ಷೇಪಣಕ್ಕೆ  ಇನ್ನೊಂದು ಅಕ್ಷರಾನೂ ಸೇರಿಸಿ, ಹೀಗೆ ವಿಸ್ತರಿಸಿದ್ರೆ , ಸೂಕ್ತ ಆದೀತು ಅಂತ:

 ಊ ಮ ಹೇ ಮಾ

ಈ ನಾಲ್ಕನೇ ಅಕ್ಷರ ಮಾ ಅಂದರೆ ಮಾತಾಡು

ಊಟ ಬಲ್ಲವನಿಗೆ ರೋಗವಿಲ್ಲ , ಮಾತು ಬಲ್ಲವನಿಗೆ ಜಗಳವಿಲ್ಲ’; ‘ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು’ ; ಮಾತೇ ಮಾಣಿಕ್ಯ ; ಅನೇಕ ಗಾದೆ ಮಾತುಗಳಿವೆ.

ಸರಿಯಾಗಿ ಮಾತನಾಡುವುದು ನೆಮ್ಮದಿಯಿಂದ, ಆರೋಗ್ಯದಿಂದ ಬದುಕುವುದಕ್ಕೆ ಎಷ್ಟು ಅನಿವಾರ್ಯ, ಮಹತ್ವದ್ದು ಎಂಬುದು ಎಲ್ಲರಿಗೂ ಗೊತ್ತಿರೋ ವಿಷಯ . ಟನ್ ಗಟ್ಟಲೇ ಪುಸ್ತಕ/ ಉಪನ್ಯಾಸಗಳಿವೆ.  

**************************************************************

ಮುಗಿಸ್ಲಾ ನನ್ನ ಕೊರೆತಾನಾ ?

ಊ ಮ ಹೇ ಮಾ

ಎಂದು ಲಘುವಾಗಿ ಬಳಸುವ ಸಂಕ್ಷೇಪಣ ( ಸಂಕೇತಾಕ್ಷರ) ವನ್ನು ಗಂಭೀರವಾಗಿ ವಿಶ್ಲೇಷಿಸಿದಾಗ ಮೂಡುವ ಅರಿವು :

ಯಾರು ಊ ಮ ಹೇ ಮಾಕ್ರಿಯೆಯನ್ನು ಸರಿಯಾಗಿ ಮಾಡಬಲ್ಲರೋ, ಅವರು ( ಅದರಲ್ಲೂ ವಿಶೇಷವಾಗಿ ವಯೋವೃದ್ಧರು)

*ಸ್ಥಿತಿವಂತರು

*ಆರೋಗ್ಯವಂತರು

ಈ ನಾಲ್ಕೂ   'ಸಂಪತ್ತ' ನ್ನು ಅರಿತು, ಮೆಚ್ಚಿ, ಆನಂದಿಸೋ ಮನೋಭಾವ ಇರುವವರು  ಮಾತ್ರ, ಅಂತಿಮವಾಗಿ, ತೃಪ್ತರು ( ನೆಮ್ಮದಿವಂತರು)

ಪ್ರಪಂಚದಲ್ಲಿ ಪ್ರಾಯಶ್ಯಃ 90% ಜನರಲ್ಲಿ ಇದು ಪರಿಪೂರ್ಣವಾಗಿರೋಲ್ಲ


ಹಾಗೆ ನೋಡಿದ್ರೆ, ಈ ಕಾಲದಲ್ಲಿ, ಇಡೀ ಪ್ರಪಂಚದಲ್ಲಿ , healthcare ಶೀರ್ಷಿಕೆಯಲ್ಲಿ, 

 ಕೋಟಿ ಕೋಟಿ ರೂಪಾಯಿಗಳ ಉದ್ದಿಮೆ ನಡೀತಾ ಇರೋದೇ  ಊ ಮ ಹೇ ಮಾಸುತ್ತ.

************

ಕೊನೆ ಹನಿ :

ಈಗ ನಮ್ಮನ್ನೇ ನಾವು ಒಮ್ಮೆ ಅವಲೋಕಿಸಿಕೊಳ್ಳೋಣವೇ  ?

“ನಮ್ಮ ಊ ಮ ಹೇ ಮಾ ಚಟುವಟಿಕೆ ಸರಿಯಾಗಿದೆಯೇ?”

 

ಕಾಮೆಂಟ್‌ಗಳು

  1. ತುಂಬಾ ಚೆನ್ನಾಗಿ ವಿಶ್ಲೇಷಿಸಿ ಸಮತೋಲನವಾಗಿ ಬರೆದ ಲೇಖನ. ಹಾರ್ದಿಕ‌ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ