ಗಿಡದ ಜೊತೆ ನನ್ನ ಸಲ್ಲಾಪ - ಸಂಚಿಕೆ #2 (ಗಿಡ ಅರಳಿಸಿದ ‘ವೇದ-ಉಪನಿಷತ್-ಭಗವದ್ಗೀತೆ ’ )
ಗಿಡದ ಜೊತೆ ನನ್ನ ಸಲ್ಲಾಪ -
ಬರಹ ಸರಣಿ
ಸಂಚಿಕೆ #2
*******************************
ಗಿಡ ಅರಳಿಸಿದ ‘ವೇದ-ಉಪನಿಷತ್-ಭಗವದ್ಗೀತೆ ’
*******************************
ನಿನ್ನೆ, ತಾಯಿ ಮಕ್ಕಳನ್ನು ಅಗಲಿಸದೆಯೇ
ಮಾನಸ ಪೂಜೆಮಾಡಿ,
ಮಹೋಪಕಾರ ಗೈದ ಅಹಂಕಾರದಲ್ಲಿ
ಇಂದು ಬೀಗುತ್ತ
ಗಿಡವ ಮಾತಾಡಿಸಲು ಹೋದೆ
-----
ಓಹ್...
ಇದೇನಿದು!?
ಗಿಡ ತನ್ನ ಮಾಮೂಲೀ ಲವಲವಿಕೆಯ ಸ್ಥಿತಿಯಲ್ಲಿ ಇಲ್ಲ
ಬಾಡಿಹೋಗಿದೆ
ನೋವೋ, ಹತಾಶೆಯೋ, ಕೋಪವೋ ತಿಳಿಯದು
-------
“ಯಾಕೆ?
ಏನಾಯ್ತು?”
ಕೇಳಿದೆ
ಒಮ್ಮೆಲೇ ಅಳಲು ಆರಂಭಿಸಿತು ಗಿಡ
ಗುಡುಗಿತು ನನ್ನ ಮೇಲೆ
"ಯಾಕೆ ಅದೆಷ್ಟೋ ವರ್ಷಗಳಿಂದ
ನಾ ಆನಂದಿಸುತ್ತಿದ್ದ
ಭಾಗ್ಯವನ್ನು ಕಿತ್ತುಕೊಂಡೆ?
ನಾ ಗಳಿಸುವ ಪುಣ್ಯದ ಮೇಲೆ
ಈರ್ಷ್ಯೆಯೇ ನಿನಗೆ?
"
ಇನ್ನೂ ಏನೇನೋ ಬಡಬಡಿಸಿತ್ತಲೇ ಇತ್ತು
----------
ಆಘಾತ ನನಗೆ
"ಅದೇನು ಸರಿಯಾಗಿ ಹೇಳು"
ಎಂದು ಗದರಿಸಿದೆ
----
ನಾ ಅರಳಿಸಿದ ಸುಂದರ,
ಪರಿಮಳದ ಹೂವುಗಳು,
ನನ್ನ ( ಮತ್ತು ನಿನ್ನ)
ಸೃಷ್ಟಿ, ಸ್ಥಿತಿಗೆ
ಕಾರಣನಾದ
ಆ ಭಗವಂತನ
ಮುಡಿಯೇರಿ ಪಾವನವಾಗುವ,
ಪುಣ್ಯ ಗಳಿಸುವ
ಭಾಗ್ಯವನ್ನು ಕಿತ್ತುಕೊಳ್ಳಲಿಲ್ಲವೇ ನೀನು?
ಸಂಜೆಯೊಳಗೆ
ಬಾಡಿ,
ಮುದುರಿ,
ಮಣ್ಣಾಗುವ ನನ್ನ ಕಂದಮ್ಮಗಳು,
ಆ ದೇವನಲಂಕರಿಸಿದರೆ
ಪುಣ್ಯತಮವಲ್ಲವೇ?
"
-----
ಮತ್ತೆ ಗೊಂದಲದ
ಅಲೆ ನನ್ನೊಳಗೆ
-----
ಒಂದು ವ್ಯಂಗ್ಯ/ವಿನೋದ ಮಾಡುವ
ಬಯಕೆ ಮೂಡಿತು
----
ನಿನ್ನನ್ನೇ ಆ ದೇವನಿಗೆ ಅರ್ಪಿಸಿಬಿಡಲೇ?
----
ಗಹಗಹಿಸಿ ನಕ್ಕಿತು ಗಿಡ
"ಅಂದರೆ!?
ನನ್ನ ಸಾವು?
------
ಅಯ್ಯೋ ಬೆಪ್ಪೆ,
ನನ್ನನ್ನೇ ಕಿತ್ತರೆ,
ನಾಳೆ ಆ ದೇವನಿಗೆ
ಹೂವು ಎಲ್ಲಿಂದ?
ಅಲ್ಲದೆಯೇ,
ನಿನಗೆಲ್ಲಿದೆ ಹಕ್ಕು ?
ನನ್ನ ಸಾವನ್ನು
ನಿರ್ಧರಿಸುವವ
ಲಯಕರ್ತ ದೇವ ಮಾತ್ರ
----
ನನ್ನ ವಿನೋದ ನನಗೇ
ಚಾಟಿಯೇಟಾಯಿತು!!
---
ದ್ವಂದ್ವ ಉಲ್ಬಣಿಸಿತು
ಒಂದು ಕ್ಷಣ ಮೌನ, ಚಿಂತನೆ
!!??
ನನ್ನ ಭಾವ,
ಗಿಡದ ಭಾವದ
ಹೊಂದಾಣಿಕೆ ಹೇಗೆ?
------
ಥಟ್ಟನೇ ಹೊಳೆಯಿತು ಉಪಾಯ
------
ಆಹಾ!
ಒಗೆದೇಬಿಟ್ಟೆ
ಒಂದು ಅನುಮೋದನೆಯ
---
ಇನ್ನು ಮುಂದೆ
ಮದ್ಯಾಹ್ನದ ನಂತರ
ಹೂವ ಬಿಡಿಸಿ ದೇವರಿಗರ್ಪಿಸುವೆ
ನಿನ್ನ ಕಂದಮ್ಮಗಳು
ಅರ್ಧ ದಿನ
ನಿನ್ನ ಮಡಿಲಲ್ಲೇ ನಲಿಯಲಿ
ಇನ್ನರ್ಧ ದಿನ ,
ಆ ದೇವನ ಮಡಿಲಲ್ಲಿ ಮೆರೆದು, ಒರಗಲಿ
-----------
ನಿನ್ನ ಭಾವ, ನಂಬಿಕೆಗೂ ಬೆಲೆ
ನನ್ನದಕ್ಕೂ ಕೂಡ
----
"ತಥಾಸ್ತು"
ಎಂದೇಬಿಟ್ಟಿತು ನನ್ನ ಪ್ರೀತಿಯ ಗಿಡ
------
ಒಡಂಬಡಿಕೆಗೆ
ಇಬ್ಬರ ಮುಗುಳ್ನಗೆಯ ಸಹಿ
----------
ಈಗ ನನಗನಿಸಿದ್ದು
“ ಈ ಗಿಡ ಅರಳಿಸಿದ್ದು
ಸುಂದರ ಹೂಗಳನ್ನಷ್ಟೇ ಅಲ್ಲ
ವೇದ, ಉಪನಿಷತ್,
ಭಗವದ್ಗೀತೆಯ ಸಾರವನ್ನು
"
*************
ಸಾಷ್ಟಾಂಗ ನಮಿಸಿದೆ
ನನ್ನ ಹೂಗಿಡಕ್ಕೆ
*****************

ಅರ್ಥಪೂರ್ಣ, ಭಾವ ಪ್ರಪಂಚ... 👌🏼👌🏼🙏🏼🙏🏼
ಪ್ರತ್ಯುತ್ತರಅಳಿಸಿ😍 ತುಂಬಾ ಚೆನ್ನಾಗಿದೆ ನಿಮ್ಮ ಸಂಭಾಷಣೆ ಮತ್ತು ಅಲ್ಲಿರುವ ತತ್ವೋಪದೇಶ. ನಿಜ, ಹುಟ್ಟು ಅದರ ನಿಜಾರ್ಥದಲ್ಲಿ ಸಾರ್ಥಕವಾಗಬೇಕು...👏👌
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ ಸಂಭಾಷಣೆ
ಪ್ರತ್ಯುತ್ತರಅಳಿಸಿ