ಗಿಡದ ಜೊತೆ ನನ್ನ ಸಲ್ಲಾಪ - ಸಂಚಿಕೆ #4 (ನಿನಗೆ ಇಲ್ಲವೇ ಇಲ್ಲ ಪುಣ್ಯ)-ಬರಹ
ಪದಪ್ರಣತಿ #4
---------
ಗಿಡದ ಜೊತೆ ಸಲ್ಲಾಪ
{ ಸರಣಿ ಬರಹ}
ಸಂಚಿಕೆ #4
--------
---------
ನಿನಗೆ ಇಲ್ಲವೇ ಇಲ್ಲ ಪುಣ್ಯ,
ನನಗಿಲ್ಲ ಪುಣ್ಯದ ಚಿಂತೆ
***********
ಓದುಗರಲ್ಲಿ ವಿಜ್ಞಾಪನೆಗಳು
*******
ಗಿಡದೊಂದಿಗೆ ಮಾತು ಸರಣಿಯ 4 ನೇ ಸಂಚಿಕೆ ಇದಾಗಿರೋದ್ರಿಂದ , ಹಿಂದಿನ
ಸಂಚಿಕೆಗಳನ್ನು ನೀವು ಓದಿದ್ದರೆ , ಇಂದಿನ ಬರಹದ ಆಳ – ಸೂಕ್ಷ್ಮ, ಅರಿವಾಗಬಹುದು
*********
“ನಿನ್ನೆ ಸರಿಯಾಗಿ ಪೂಜೆ ಮಾಡಿದ್ಯಾ?”
ಗಿಡ ಕೇಳಿತು
“ಹೌದು – ಎರಡು ತಾಸು ವಿಶೇಷ ಅರ್ಚನೆ
ಶ್ರಾವಣ ಶುಕ್ರವಾರ”
“ಅಧಿಕ ಪುಣ್ಯಪ್ತಾಪ್ತಿಯೇ ನಿನ್ನೆ , ಹಾಗಾದರೆ?”
ವ್ಯಂಗ್ಯದ
ಧ್ವನಿಯಾಗಿತ್ತು ಅದು.
ನಾನೂ ಲೇವಡಿ ಮಾಡಿದೆ.
“ದೊರೆಯಲೇ ಇಲ್ಲ ಕಿಂಚಿತ್ತೂ ಪುಣ್ಯ ನಿನಗೆ”
ಧೃಡವಾಗಿ ಹೇಳಿತು ಗಿಡ
ಕೋಪ ಒತ್ತರಿಸಿತು
ನನ್ನಲ್ಲಿ
“ ಅದು ಹೇಗೆ ಹೇಳ್ತೀಯ ? ಏನೇನೋ ಬಡಬಡಿಸ ಬೇಡ”
ಕಿರುಚಿದೆ
ಗಿಡ ತಾಳ್ಮೆಯಿಂದ
ಅರುಹಿತು
“ ಸಾವಧಾನ! ಕಿರುಚಬೇಡ
ಯಾಕೆಂದರೆ ನಿನ್ನ
ಪೂಜೆ ಅಪೂರ್ಣ”
------
“ಅದು ಹೇಗೆ ?”
-----
“ನಿನ್ನ ಕೈಗಳು ನಿರತ
ಗಂಧ –ಚಂದನ ತೇಯುವಲ್ಲಿ
ಆ ದೇವಮೂರ್ತಿಯ
ಅಭಿಷೇಕ,
ಅಲಂಕಾರ, ಮಂಗಳಾರತಿ
ಪ್ರಕ್ರಿಯೆಯಲಿ
ನಾಲಿಗೆ ನಿರತ
ನಿರರ್ಗಳ ಮಂತ್ರ – ಶ್ಲೋಕ ಪಠಣದಿ
------
ಆಹಾ – ಸಂಭ್ರಮ – ಚಂದ – ಝಗಮಗ ದೇವಮೂರ್ತಿ”
ಇದೇನು ಈ ಪರಿ ವರ್ಣನೆ
ಗಿಡದಿಂದ !!”
ಉಬ್ಬಿಹೋದೆ ನಾನು
ಮುಂದುವರೆಸಿತು ಗಿಡ
ಆದರೆ ... ಆದರೆ
“ಏನು ಆದರೆ ? !”
“ ನಿನ್ನ ಮನದಲ್ಲಿ,
ಕೊತ ಕೊತ
ಕುದಿಯುತ್ತಿತ್ತು
ಕಚೇರಿಯ ಬಾಸ್ ನ
ಕಿರಿಕಿರಿ
Product delivery deadline
ಈ ತಿಂಗಳ ಸಾಲಗಳ ಕಂತುಗಳು
ಮಗನಿಗೆ ಯಾವ ಕಾಲೇಜು
ಪತ್ನಿಯ ಸಲಹೆಗಳ
ಸರಮಾಲೆ
ಇತ್ಯಾದಿ, ಇತ್ಯಾದಿ
-------
ಅಂದರೆ,
ದೇಹ, ದೇವ ಮೂರ್ತಿಯತ್ತ
ಮನಸು, ಜಂಜಾಟದತ್ತ ( ಏಕಾಗ್ರತೆಯ ದೂಡಿ)
ಇತ್ತಾ? ?
ಭಕ್ತಿ-ಭಾವ-ಶ್ರದ್ಧೆ??
ಬಹಿರಂಗವೋ? ರಂಗು ರಂಗಿನಾ ರಂಗ
ಅಂತರಂಗ ? ಭಾವೋದ್ವೇಗ ತಲ್ಲಣ ತರಂಗ!!
____
ಅರ್ಥವಾಯಿತೇ
“ಯಾಕೆ ನಿನ್ನ ಪೂಜೆ ಅಪೂರ್ಣ?
ಯಾಕೆ ನಿನಗೆ ಪುಣ್ಯ
ಶೂನ್ಯ ?”
----
“ಅದೆಲ್ಲಾ ಓಕೆ
ನನ್ನ
ಹೂವುಗಳಿಗೆ ಸಿಕ್ಕಿತೇ ಪುಣ್ಯ?”
ನಗು ನಗುತಾ ಹೇಳಿತು
ಗಿಡ
“ ನನಗೆ ಇಲ್ಲವೇ ಇಲ್ಲ , ಅದರೆ ಚಿಂತೆ”
----
ದೇವಪೂಜೆ ನೀ
ಒಪ್ಪಿರೋ ದರ್ಮ
ನನ್ನದು, ನಿನ್ನ ಪೂಜೆಗೆ ಪರಿಕರ ಹೆರುವ ಧರ್ಮ
ನಾ ಅರಳಿಸಿದ ಸುಮಗಳಿಗೆ
ನಿನ್ನ ಭಕ್ತಿ-ಭಾವ
ಬೆರೆಸದೆ ಆ ದೇವಗೆ ಒಪ್ಪಿಸಿದರೆ
ಅದು
ನಿನ್ನಗಂಟಿಕೊಳುವ ಕರ್ಮ
***********
ಮೂಕನಾದೆ, ಸ್ಥಬ್ದನಾದೆ,
ಗಿಡದ ಉಪನ್ಯಾಸ ಆಲಿಸಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ