ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ#3 ( "ಹೋಗೆವು ನಾವು ಅಮ್ಮನ ತೊರೆದು" )-ಬರಹ
ಮುಂದುವರೆದ, ಗಿಡದ ಜೊತೆಗಿನ ನನ್ನ ಸಲ್ಲಾಪ
ಓದುಗರ ಗಮನಕ್ಕಾಗಿ ಲಘು ಟಿಪ್ಪಣಿ :
-----
ನನ್ನ ಮತ್ತು ಹೂವಿನ ಗಿಡದ ಜೊತೆಯ ಮಾತು-ಕತೆ , ಆಶ್ಚರ್ಯಕರ ರೀತಿಯಲ್ಲಿ ಮುಂದುವರೀತಾ ಇದೆ. ತನ್ಮೂಲಕ ಜೀವನದ ಮೌಲ್ಯ- ಆಧ್ಯಾತ್ಮಿಕ ವಿಚಾರಗಳ ಕುರಿತು ಒಂದಿಷ್ಟು ಚಿಂತನ-ಮಂಥನ.
ಇದಕ್ಕೆ ಪೂರಕವಾಗಿ, ಫೇಸ್ ಬುಕ್ ನ ಓದುಗರ ರಚನಾತ್ಮಕ ಪ್ರತಿಕ್ರಿಯೆ.
ಹಿಂದಿನ ಎರಡೂ ಸಂಚಿಕೆಗಳನ್ನು, ಓದಿ, ಆಸ್ವಾದಿಸಿ, ಪ್ರತಿಕ್ರಿಯಿಸಿದ, ಸಲಹೆ ನೀಡಿದ, ಎಲ್ಲ ಮಿತ್ರರಿಗೂ ಧನ್ಯವಾದಗಳು.
------
ಸಂಚಿಕೆ #1 - ನನ್ನೊಳಗೆ ಉದ್ಭವಿಸಿದ ಭಾವನೆ
ಸಂಚಿಕೆ #2 - ಗಿಡದ ಭಾವನೆ
---------------
ಇಂದಿನ ಸಂಚಿಕೆ#3
ಗಿಡದಲ್ಲಿ ಅರಳಿದ ಹೂವಿನ ಭಾವನೆಗಳು
---------------
ಅಂದಹಾಗೆ ಇನ್ನೊಂದು ವಿಷಯ
ಹೂವಿನ ಕುರಿತು, ಅದೆಷ್ಟೋ ಉತ್ತಮ ಕವಿತೆಗಳು, ಬರಹಗಳು ಪ್ರಕಟವಾಗಿವೆ.
ನನ್ನನ್ನು ಕಾಡಿದ ಹಲವು ಕವಿತೆಗಳಲ್ಲಿ , ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರ ಒಂದು ಮನೋಜ್ಞ ಕವಿತೆಯನ್ನು, ಸಧ್ಯದಲ್ಲಿಯೇ ಹಂಚಿಕೊಳ್ಳುತ್ತೇನೆ
******************************
ಈಗ ಇಂದಿನ ಬರಹ/ಕವಿತೆ
*******************************
ನಿನ್ನೆಯ ಒಡಂಬಡಿಕೆಯಂತೆ
ಇಂದು ಸರಿಯಾಗಿ 12 ಕ್ಕೆ
ಹೂವ ಬಿಡಿಸಲು ಹೋದೆ
ಹಿಡಿದೆ ಸುಂದರ ಹೂವಿನ ತೊಟ್ಟ
ಇನ್ನೇನು ಬಿಡಿಸಬೇಕು
ಅನ್ನುವಷ್ಟರಲ್ಲಿ
ಕಿಟಾರನೆ ಕಿರುಚಿ,
ಅಳಲಾರಂಭಿಸಿತು ಆ ಹೂವು
ಮುಂದೆ ನಡೆದದ್ದೆಲ್ಲಾ
ಆ ಹೂವು ಮತ್ತು ಗಿಡದ ನಡುವೆ
ಸಂಭಾಷಣೆ
ನಾ ಮೌನಿಯಾದೆ
******************
“ ಹೋಗೆವು ಅಮ್ಮ ನಾವು
ಆ ದೇವ ಮೂರ್ತಿಯ ಮುಡಿಗೆ
ನಿನ್ನ ತೊರೆದು
ಮುಗಿದರ್ಧ ಆಯಸ್ಸು
ಅದೆಷ್ಟು ಸುಂದರ !
ನಿನ್ನಮಮತೆಯ ಸಾಗರದಲಿ
ತೇಲಿದೆವು
ಮಿಂದೆವು,
ನಲಿದೆವು,
ಕ್ಷಣಗಳ ಅರಿವೇ ಇಲ್ಲದಂತೆ
ಈ ದೇವರ ಮಡಿಲಲ್ಲಿಯೇ
ಬದುಕಿದ ನಮಗೆ
ಇನ್ನೊಬ್ಬ ದೇವರ ಪಾದ, ಮುಡಿ
ಯಾಕೆ ಬೇಕಮ್ಮಾ ?
ಇನ್ನರ್ಧ ಆಯಸ್ಸಿನಲಿ
ನಿನ್ನ ಮಡಿಲಿನಲ್ಲಿಯೇ
ಒರಗುವೆವು
ಮುದುರುವೆವು
ಕೊನೆಗೊಮ್ಮೆ ಉದುರುವೆವು ಮಣ್ಣಿಗೆ
ಇಷ್ಟಕ್ಕೂ, ನಾವು ಸೇರುವ ಮಣ್ಣು ಏನಮ್ಮಾ?
ನೀನೇ ಹೇಳಿದ ಮಾತು
“ಭೂತಾಯಿ , ದೇವರು”
ಅಂದಮೇಲೆ
ದೇವರಿಂದ ದೇವರಿಗೆ
ಪಲ್ಲಟವಾಗುವ
ಪಾತ್ರಗಳು ಮಾತ್ರ ನಾವು
ಇನ್ನೇನು ಬೇಕು ನಮಗೆ ?
---------------------
ಇರುವಷ್ಟು ಗಳಿಗೆ
ನಿನ್ನ ಪ್ರೀತಿ ನಮಗೆ
ನಮ್ಮ ಪ್ರೀತಿ ನಿಮಗೆ
ಮಣ್ಣಿಗಿಳಿದ ಮೇಲೆ
ಏನೋ, ಎಂತೋ , ಯಾರಿಗೆ ಗೊತ್ತು?
"
********
ನನಗರಿವಿಲ್ಲದಂತೆಯೇ ,
ಬೆರಳುಗಳಿಂದ ದೂರವಾಯಿತು ತೊಟ್ಟು
ನನ್ನ ಕಣ್ಣಲ್ಲಿ ಇಳಿಯಿತು ಹನಿಯ ತೊಟ್ಟು
ನಿರ್ಗಮಿಸಿದೆ,
ಮತ್ತೆ ಜಿಜ್ಞಾಸೆ, ಗೊಂದಲಗಳ ತೊಟ್ಟು
********

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ