ಗಿಡದ ಜೊತೆ ನನ್ನ ಸಲ್ಲಾಪ - ಸಂಚಿಕೆ #5 (ವಂದನೆ-ಅಭಿನಂದನೆ ಮನುಜ ನಿನಗೆ )-ಬರಹ
ಗಿಡದೊಂದಿಗೆ ( ಮುಂದುವರೆದ) ಸಲ್ಲಾಪ
ಸರಣಿ ಬರಹ- ಸಂಚಿಕೆ #5
--------
ವಂದನೆ-ಅಭಿನಂದನೆ ಮನುಜ ನಿನಗೆ
***********
ಓದುಗರಲ್ಲಿ ವಿಜ್ಞಾಪನೆಗಳು
*******
ಗಿಡದೊಂದಿಗೆ ಮಾತು ಸರಣಿಯ 5 ನೇ ಸಂಚಿಕೆ ಇದಾಗಿರೋದ್ರಿಂದ , ಹಿಂದಿನ
ಸಂಚಿಕೆಗಳನ್ನು ನೀವು ಓದಿದ್ದರೆ , ಇಂದಿನ ಸಂಚಿಕೆ ಜಾಸ್ತಿ ರುಚಿಸಬಹುದೇನೋ!
*********
ಗಿಡದ ನಿನ್ನೆಯ ತೂಕದ ವಿಶ್ಲೇಷಣೆಯ
ಭಾರದಿಂದ ಎದ್ದಿರಲಿಲ್ಲ ನಾನಿನ್ನೂ
ಮುಂದುವರೆದಿತ್ತು ನನ್ನೊಳಗೇ ಆತ್ಮಾವಲೋಕನ
ಇಂದು ಗಿಡದ ಬಳಿ ಸುಳಿಯಲೇಬಾರದೆಂಬ ನಿರ್ಧಾರ
----
ಆದರೆ ಅನಿರೀಕ್ಷಿತ , ಆಶ್ಜರ್ಯದ ಸಂಗತಿಯೊಂದು ಘಟಿಸಿತು
ನನ್ನೊಳಗೆ ಸಂತಸದ ಹೊನಲನ್ನೇ
ಹರಿಸಿ , ಧನ್ಯತೆಯ ಭಾವದೀಪ್ತಿಯ ಬೆಳಗಿದ ಸಂಗತಿ
____
ನಾನಿರುವಲ್ಲಿಯೇ ಗಿಡ ಓಡೋಡಿ ಬಂದು, ಉದ್ಗರಿಸಿತು ಜೋರಾಗಿ
“ ವಂದನೆ – ಅಭಿನಂದನೆ
ನಿನಗೆ ಅಂದರೆ ಇಡೀ ಮನುಜ ಕುಲಕೆ “
----
ಏನೋ ವ್ಯಂಗ್ಯ ಇರಬಹುದೆಂದು ನನ್ನ ಊಹೆ
“ ಈ ಗಿಡವನ್ನು ನಂಬುವಂತಿಲ್ಲ “
----
ಆದರೆ,
ತಬ್ಬಿಕೊಂಡಿತು ನನ್ನಗಿಡ
ಕೃತಜ್ಞತೆ ಭಾವ ಸ್ಪುರಿಸಿ
******************
“ಏನಿದು?
ಪ್ರತಿದಿನ ನನ್ನ ಕಾಲೆಳೆಯುತ್ತಿದ್ದ ನಿನ್ನ ಈ ಹೊಸ ಅವತಾರ ? “
ಲೇವಡಿ ಮಾಡಿದೆ
ಭಾವುಕತೆಯಿಂದ ಗಿಡ ಉದುರಿಸಿತು
ಈ ನುಡಿಮುತ್ತುಗಳನು :
*********************
ಹೂವುಗಳಿಗೇನು ಗೊತ್ತು ತಮ್ಮ ಚೆಲುವು
ಅದೆಷ್ಟು ಬಗೆ ಬಗೆಯ ಬಣ್ಣ,
ಆಕಾರ, ವಿನ್ಯಾಸ, ಪರಿಮಳ
ನೀವಲ್ಲವೇ
ಹೂವ ಚೆಲುವ ಗುರುತಿಸಿ, ಆನಂದಿಸಿದವರು ?
ನೀವಲ್ಲವೇ ಹೂವಿನ ಅರಳುವಿಕೆಯ
ಸಹಜತೆಗೆ , ವಿಸ್ಮಯತೆ ಕೊಟ್ಟು , ದಿಟ್ಟಿಸಿ , ಮೂಕರಾದವರು ?
ನೀವಲ್ಲವೇ , ನಿಮ್ಮ ಮಕ್ಕಳ ಹಾಗೆ ,ನಮ್ಮನ್ನೂ ಪಾಲನೆ, ಪೋಷಣೆ ಮಾಡಿ, ಪ್ರೀತಿಯ ಧಾರೆಯೆರೆದವನು ?
ನೀವಲ್ಲವೇ ನಮ್ಮ ಛಾಯಾಚಿತ್ರ
ತೆಗೆದು , ಆನಂದಿಸಿ , ಬಳಗಕ್ಕೆಲ್ಲಾ ಹಂಚಿ
ಸಂಭ್ರಮಿಸಿದವನು ?
ನೀವಲ್ಲವೇ ನಿಮ್ಮ ಭಕ್ತಿಭಾವದ
ಅಭಿವ್ಯಕ್ತಿಗಾಗಿ , ನಿಮ್ಮ ನಂಬಿಕೆಯ ದೇವರನ್ನು
ಅಲಂಕರಿಸಲು , ಪೂಜಿಸಲು, ಹೂವನ್ನು ಶ್ರೇಷ್ಠ
ಪರಿಕರವಾಗಿ ಬಳಸಿದವರು ?
ನಿಮ್ಮ ವನಿತೆಯರಲ್ಲವೇ , ಹೂವಿನ ಚಂದದ ದಂಡೆ ಮಾಡಿ, ಮುಡಿಗೇರಿಸಿ , ಪಾವಿತ್ರ್ಯತೆ ಜೊತೆಗೆ ಸೌಂದರ್ಯವರ್ಧಕ
ಪಟ್ಟ ಕೊಟ್ಟದ್ದು ?
ನಿಮ್ಮ ಯುವ ಪ್ರೇಮಿಗಳಲ್ಲವೇ , ಪ್ರೀತಿಯ
ಅಭಿವ್ಯಕ್ತಿಸುವ, ಸಂಕೇತವಾಗಿ ಹೂವಿಗೆ ವಿಶೇಷ ಸ್ಥಾನ ಒದಗಿಸಿದ್ದು ?
ನೀವಲ್ಲವೇ , ಹಬ್ಬ, ಹರಿದಿನ, ಜಾತ್ರೆ , ಉತ್ಸವದ
ಸಂಭ್ರಮವ ಹೆಚ್ಚಿಸಲು, ಹೂವಿನಲಂಕಾರದ
ಮೆರಗನ್ನು ಕೊಟ್ಟದ್ದು ?
ನೀವಿರದಿದ್ದರೆ, ಹೇಗೆ ಗೊತ್ತಾಗ್ತಿತ್ತು ನಮಗೇ ನಮ್ಮ ಮೌಲ್ಯ?
ನೀವಿರದಿದ್ದರೆ , ವಿಶ್ವದ ಕೋಟಿ ಕೋಟಿ ಜೀವಿಗಳಂತೆಯೇ, ನಮ್ಮದು ಸಾಮಾನ್ಯ ಬದುಕು
ನಿಮ್ಮ ಅನನ್ಯ ಬುದ್ಧಿ, ಭಾವ , ಸೌಂದರ್ಯ
ಪ್ರಜ್ಞೆ , ನಂಬಿಕೆ , ಆಚಾರ , ವಿಚಾರಗಳಿಂದ
, ನಮ್ಮ ಬದುಕಿಗೆ ವಿಶೇಷ ಅರ್ಥ
ನಿಮ್ಮ ಪ್ರಯೋಜನಕ್ಕೆ ನಾವೂ ಇದ್ದೇವೆ ಎಂಬ ಧನ್ಯತೆ.
ಅಂದ ಮೇಲೆ,
ನಾವು ನಿಮಗೆ
ಸಲ್ಲಿಸಲೇಬೇಕು
ನಿಮ್ಮಿಂದ ನಾವು
ಪಡೆದದ್ದಕ್ಕೆ ‘ವಂದನೆ’
ನಿಮ್ಮ ಅನನ್ಯ
ಸಾಮರ್ಥ್ಯಕ್ಕೆ ‘ಅಭಿನಂದನೆ’
*******
ನಾನು ಇನ್ನಷ್ಟು ಮೌನಿಯಾದೆ
ಅಪರಾಧಿ ಮನೋಭಾವಗಳ ಕಾರ್ಮೋಡ
ಕರಗಿ
ಧನ್ಯತೆಯಾವರಿಸಿದ
ನೀಲ , ಶುಭ್ರ , ಪ್ರಶಾಂತ ಆಗಸವಾಯಿತು ನನ್ನ ಮನ
ಕಣ್ಣಲ್ಲಿ ಒಂದು ಹನಿ
ತಬ್ಬಿಕೊಂಡೇ ಇದ್ದೆ ಕೆಲವು
ಕ್ಷಣ ನನ್ನ ಗಿಡವನ್ನು
ಬೆಳಕ ಹಚ್ಚಿದ ಗುರುವನ್ನು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ