( ಚಿತ್ರಕವಿತೆ ) - ನಾನಲ್ಲ ‘ಅಯ್ಯೋ-ಪಾಪ’ದ ಮುದಿವನಿತೆ-ಕವಿತೆ


 ಶೀರ್ಷಿಕೆ

ನಾನಲ್ಲ ಅಯ್ಯೋ-ಪಾಪದ‌ ಮುದಿವನಿತೆ

**********************

ಈ ಕವಿತೆ / ಬರಹಕ್ಕೆ  ಒಂದು ಪುಟ್ಟ ಪ್ರಸ್ತಾವನೆ

**********

4 ವರ್ಷಗಳ ಹಿಂದೆ, ಶ್ರೀ ಕಿಲಾರ ರಾಜಾರಾಂ ಅವರ ನೇತ್ರತ್ವದಲ್ಲಿ,  ಸಾಗರ ಫೋಟೋಗ್ರಾಫಿಕ್ ಸೊಸೈಟಿ ಅವರ   “ಚಿಂತನಕ್ಕೆ ಸವಾಲ್” ಎಂಬ ಚಿತ್ರಕವಿತೆ ಸ್ಪರ್ದೆಯ  ಸರಣಿಗಾಗಿ, ಬರೆದ ಕವಿತೆ / ಬರಹ ಇದು. 

ಇದನ್ನು ಬರೆಯುವಾಗ , ನನ್ನ ಸ್ಮೃತಿಪಟಲದಲ್ಲಿ ಮೂಡಿದ್ದು, ಬಾಲ್ಯದಲ್ಲಿ , ನನ್ನ ಹಳ್ಳಿಗೆ ಸಮೀಪದ ಪುಟ್ಟ ಪಟ್ಟಣ ಕಾರ್ಗಲ್ ನಲ್ಲಿ , ಸಂಭ್ರಮಿಸುತ್ತಿದ್ದ ಭಾನುವಾರದ ಸಂತೆ. ಅಲ್ಲಿ ಇಂತಹ ವೃದ್ಧೆಯರು ಕಂಡುಬರುವುದು ಸಾಮಾನ್ಯ .

 ಸಾಮಾನ್ಯವಾಗಿ ಇಂಥ ದೃಶ್ಯಗಳನ್ನು ನೋಡಿದಾಗ, ನಮಗೆ ಗೊತ್ತಿಲ್ಲದಂತೆಯೇ ಬರುವ ಕನಿಕರದ ಉದ್ಗಾರ.

“ ಅಯ್ಯ್ಯೋ...ಪಾಪ..  ಈ ವಯಸ್ಸಿನಲ್ಲಿಯೂ ಇಷ್ಟೆಲ್ಲಾ ಕಷ್ಟಪಡಬೇಕೇ? ಇವಳನ್ನು ನೋಡ್ಕೋಳೋಕೆ  ಯಾರೂ ಇಲ್ಲವೇ “ ..ಇತ್ಯಾದಿ

ಆದರೆ , ಈ ಮುದುಕಿಯನ್ನು ನಾನು ಧನಾತ್ನಕ ದೃಷ್ಟಿಯಿಂದ ನೋಡಿ, ಈ ಕವಿತೆಯನ್ನು ಬರೆದಿದ್ದೇನೆ.

************************************

ಶೀರ್ಷಿಕೆ :  ನಾನಲ್ಲ  'ಅಯ್ಯೋ ಪಾಪ' ದ ಮುದಿ ವನಿತೆ

**************************************

ನಾನಲ್ಲ

 'ಅಯ್ಯೋ ಪಾಪ' ದ ಮುದಿ ವನಿತೆ

ನಾನು,

            ಸಂತೆಯೊಳಗಿನ  ಸಂತೃಪ್ತೆ  

             ಅನುಭವಗಳ   ಕಂತೆ

              ನನಗಿಲ್ಲ  ಕೊರತೆ, ಚಿಂತೆ

                      ಯಾಕೆಂದರೆ

                        ಇರದ  'ಪಾಯಸ' ಕ್ಕೆ ತಡಕದೆ

                        ಇರುವ 'ಗಂಜಿ'ಯ ಸವಿಯುವ  

                      ಬಾಳಕಲೆಯ  ಕಲಿತ ಕಲಾವಿದೆ ( ಕಲಾವಂತೆ)

            ಸಂತೆಯಿಂದ  ಸಂತೆಗೆ ಚಲಿಸುವ  ಜಂಗಮ ಸಂಸ್ಥೆ  

            ನನ್ನಾವರಣವ ಬೆಳಗುವ ಹೆಮ್ಮೆಯ   ಹಣತೆ

            ಉತ್ಸಾಹದ  ಅಕ್ಷಯದ  ಒರತೆ

******************************************************

ಈ ಜಗವೊಂದು ಸುಂದರ ಸಂತೆ

ಮೇಲಿನ ವಿನ್ಯಾಸಕ ಬರೆದಿಹನು  ಸಂಹಿತೆ

ಅದನು ಪಾಲಿಸಿ   

ಸುಖಿಸಿ , ಸಂಭ್ರಮಿಸೋ,

ಹೊಣೆ , ಕಲೆ ಮಾತ್ರ ನಮ್ಮದಂತೆ

ಇದ ಗ್ರಹಿಸುವ  ಗ್ರಾಹಕನ ಬದುಕೇ ಸಂದರ ಕವಿತೆ

ಇದು ನನ್ನ ಜೀವನ ಪಾಠ- ಭಗವದ್ಗೀತೆ

******************************************************

ಅಲ್ಲ ಇದು,  ಬರಿ ಕೈಗಾಡಿ

ಇದು ನನ್ನ  ದೇವರ ಗುಡಿ

ಅಲ್ಲ ಇದು,  ಬರಿ ಸರಕು ತೂಗುವ  ತಕ್ಕಡಿ

ಬದುಕ ತೂಗುವ, ತೂಗಿಸುವ , ಕೌಶಲ್ಯವ ತೋರಿಸಿದ ಕನ್ನಡಿ

*****************************************************

ಬನ್ನಿ, ಗ್ರಾಹಕರೆ

ಸಂತೆಯ ಸಾಗರ  ಮಹಾ ಪಾತ್ರ ನಮ್ಮದು

ಮೊಗೆಯುವ ಬೊಗಸೆಯ ಗಾತ್ರ ನಿಮ್ಮದು

ಸಂತೆಯ ಹಬ್ಬ ಮಾಡುವ ಪಾತ್ರ,  ನಮ್ಮೆಲ್ಲರದು

********************************************

??

ಈಗ ಹೇಳಿ

ನಾನು

 'ಅಯ್ಯೋ ಪಾಪ' ದ ಮುದಿ ವನಿತೆಯೇ  ??  

 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ