ಪತ್ರ -ಮೊಮ್ಮಗಳಿಗೆ - ಅಧ್ಯಾಯ 1 -ಏನು-ಯಾಕೆ ಈ ಪತ್ರ? (ಉದ್ದೇಶಗಳು )

 ಇನ್ನೂ ಓದಲು ಬಾರದ (3 ವರ್ಷದ) ಮೊಮ್ಮ ಗಳಿಗೊಂದು ಪತ್ರ

ಅಧ್ಯಾಯ #1

ಏನು -ಯಾಕೆ ಈ ಪತ್ರ ?

ಪ್ರೀತಿಯ ಆರೋಹಿ ಪುಟ್ಟಿ

ಯಾಕೋ ಹೀಗೆ ಪ್ರಾರಂಭಿಸಿದರೆ,   ಸಾಕಾಗ್ತಾ ಇಲ್ಲ ಅನಿಸ್ತಿದೆ.

ಅಂದರೆ ...?

ನಿನ್ನನ್ನು ಪ್ರತಿದಿನ , ನಮ್ಮನೆಯ ನಾಲ್ಕೂ ಸದಸ್ಯರೂ (ನಿನ್ನಮ್ಮ ರಶ್ಮಿ, ಅಪ್ಪ ಶಶಾಂಕ್, ವಿಜೂ ಅಜ್ಜಿ , ನಾನು ಚಿದು ಅಜ್ಜ ) ,  ಜೊತೆಗೆ ಸಾಗರದ ನಿನ್ನ ದತ್ತಜ್ಜ, ಶಾಂತಜ್ಜಿ, ಬೇರೆ ಬೇರೆ ಸಂದರ್ಭಗಳಲ್ಲಿ, ಇನ್ನೂ ಯಾವ ಯಾವ ರೀತಿಯಲ್ಲಿ ಕರೀತೀವಿ ? …  ಪಟ್ಟಿಮಾಡಿಬಿಡ್ತೀನಿ. 

ಆರೂ/ ಪುಟ್ಟಿ/ ಚಿನ್ನ/ ಚಿನ್ನಿ / ಬಂಗಾರೀ / ನಮ್ಮನೆ ಮುದ್ದು ಪುಟಾಣಿ/ನಮ್ಮನೆ ಮುದ್ದು ಗೊಂಬೆ / ನಮ್ಮನೆ ಮುದ್ದು ದೇವತೇ/ ಕಿಲಾಡಿ/ ಕಿತಾಪತಿ ರಾಣೀ/ ನೌಟಂಕೀ / ತುಂಟಿ /ತರ್ಲೆ /  ರೌಡಿ/ ಪುಟ್ ಕುಂಡೇ/ ಆರೂ../ ಸುಬ್ಬಿ/ ಗುಬ್ಬಿ/ ಪಾಪಚ್ಚಿ/ ಗುಂಡಾ/ ಅಳುಬುರುಕಿ/ ಕಿರಿಚಮ್ಮ/ಖತರ್ನಾಕ್ ಕಿಲಾಡೀ   .....ಇತ್ಯಾದಿ, ಇತ್ಯಾದಿ.

 

ಸ್ವಾರಸ್ಯ ಅಂದ್ರೆ, ನಿನ್ನೆದುರಿಗೇ ಕುಳಿತು, ನೀನು TV ಪರದೆ ಮೇಲೆ,  ಪಂಡರಾಪುರವೆಂಬ ದೊಡ್ಡ ನಗರ, ಅದು ವಿಠೋಬನೆಂಬ ಸಾಹುಕಾರಭಜನಾ-ನೃತ್ಯವನ್ನು ನೋಡ್ತಾ , ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಿನಗರಿವಿಲ್ಲದಂತೆಯೇ ನೃತ್ಯಮಾಡ್ತಾ ಇರೋದನ್ನು ಆನಂದಿಸ್ತಾ ಈ ಪತ್ರ ಬರೆಯುತ್ತಾ ಇದ್ದೇನೆ.

 

ಏನಿದೆ ಈ ಪತ್ರದಲ್ಲಿ?

ನೀ ಹುಟ್ಟಿದ ದಿನದಿಂದ ( 15 ಡಿಸೆಂಬರ್ 2022),  ಸುಮಾರು ಎರಡು ವರ್ಷಗಳ ಅವಧಿಯಲ್ಲಿ, ನಿನ್ನೊಂದಿಗೆ,  ನಾನು ಮತ್ತು  ನಮ್ಮ ಕುಟುಂಬದವರು, ಆನಂದಿಸಿದ ಕ್ಷಣಗಳನ್ನು ಚಿತ್ರಿಸುವ ( ದಾಖಲಿಸುವ) ಪ್ರಯತ್ನ ಮಾಡಿದ್ದೇನೆ.  ಹಾಗೆಯೇ,  ಈ ಪ್ರಕ್ರಿಯೆಯಲ್ಲಿ ನನ್ನ ಮನೋಪಟಲದಲ್ಲಿ ಪುಟಿದ  ಹಳೆಯ ನೆನಪುಗಳು , ನನ್ನ ಅನುಭವಗಳು, ನಾ ಕಂಡುಕೊಂಡ ಸತ್ಯ-ಮಿಥ್ಯಗಳು, ನನ್ನ ಮುಂದಿನ ಕನಸುಗಳು, ಆಶಯಗಳು..ಎಲ್ಲವೂ ಮಧ್ಯೆ ಮಧ್ಯೆ  ನುಸುಳಿವೆ.  

 

ಪುಟ್ಟಿ, ಇನ್ನೂ ಅಕ್ಷರವೇ ಗೊತ್ತಿಲ್ಲದ ಅರ್ಥಾತ್ ಓದಲು ಬಾರದ ನಿನಗೆ ಯಾಕೆ  ಈ ಪತ್ರ ?

ಈ ಪತ್ರ , ನಿನಗೆ ಒಂದು  ಉಡುಗೊರೆ.

ಇಂದು, ನಿನ್ನ  3 ನೇ ವರ್ಷದ ಜನ್ಮದಿನದಂದು ಈ ಉಡುಗೊರೆಯನ್ನು ಅಧಿಕೃತವಾಗಿ ನೀಡುತ್ತಿದ್ದೇನಾದರೂ  , ನೀನು ಇದನ್ನು ಉಡುಗೊರೆಎಂದು ಸ್ವೀಕರಿಸುವುದು ನಿನ್ನ ಎಷ್ಟನೇ ವರ್ಷದ ಜನ್ಮದಿನಕ್ಕೋ ? ಅದನ್ನು ಕಾಲ ನಿರ್ಧರಿಸಬೇಕಷ್ಟೆ. ಅದು ಅಸ್ಪಷ್ಟ.

 

ಯಾಕೇಂದ್ರೆ,

ಎಂದು ನೀನು  ಈ ಪತ್ರವನ್ನು

ಸ್ಪಷ್ಟವಾಗಿ ಓದಿ ಅರ್ಥಮಾಡಿಕೊಳ್ಳುತ್ತೀಯೋ,

ಆಸ್ವಾದಿಸುತ್ತೀಯೋ,

ಈ ಪತ್ರದ (Spirit)ನ್ನು ಗ್ರಹಿಸುತ್ತೀಯೋ ,  

ಅಂದು ಇದು ನಿನಗೆ   ಉಡುಗೊರೆ.  

ನಿನ್ನ ಯಾವ ವಯಸ್ಸಿನಲ್ಲಿ ಇದು ಸಾಧ್ಯವಾಗುತ್ತೋ ನನಗೆ ಗೊತ್ತಿಲ್ಲ .

ಈ ಪತ್ರ ಬರೆಯುವ ಉದ್ದೇಶ  ?

ಅಂದ ಹಾಗೆ, ನಮ್ಮ ಎಲ್ಲಾ ಕ್ರಿಯೆಗಳಿಗೂ ಒಂದು ಉದ್ದೇಶ ಇರಲೇಬೇಕು ಅಂತೇನೂ ಇಲ್ವಲ್ಲ?

ಎಲ್ಲವೂ ತಾರ್ಕಿಕ (Logical ) ವಾಗಿರಬೇಕಿಲ್ಲವಲ್ಲಾ? ಇದು ನನ್ನಂತಹಾ ಹುಚ್ಚರ ಅಂದರೆ  ಭಾವಜೀವಿಗಳ /ಕಲಾವಿದ/ ಕವಿ ಹೃದಯ ಇರುವವರ  ವಾದ.

 

ಹೌದು, ನನಗೆ ಚೆನ್ನಾಗಿ ಗೊತ್ತಿದೆ. ಮೊದಲೇ ತಿಳಿಸಿದ ಹಾಗೆ,  ನೀನು ಈ ಪತ್ರನ ಈಗಂತೂ ನೀನು ಖಂಡಿತಾ ಓದೋಲ್ಲ ; ಯಾಕೇಂದ್ರೆ ನಿನಗಿನ್ನೂ ಮೂರೇ ವರ್ಷ . ಸ್ವಲ್ಪ  ಅಕ್ಷರಜ್ಞಾನ ಮಾತ್ರ ಇದೆ.  ನೀ ಹೇಗೆ ಓದೋಕೆ ಸಾಧ್ಯ?. ಅಕಸ್ಮಾತ್ ಪೂರ್ತಿ  ಅಕ್ಷರಜ್ಞಾನ ಇದ್ದರೂ ಈ ಪತ್ರ ಅರ್ಥ ಆಗಲಿಕ್ಕೆ ಸಾಧ್ಯವೇ ಇಲ್ಲ.

ಮುಂದೊಂದು ದಿನ , ನಿನಗೆ ಇಷ್ಟಬಂದ ವಯಸ್ಸಿನಲ್ಲಿ( 5ನೇ ವಯಸ್ಸಿನಿಂದ 20 ನೇ ವಯಸ್ಸಿನೊಳಗೆ ಯಾವಾಗಲೂ ಆಗಬಹುದು) , ನೀನು ಓದಬಹುದೇನೋ!?.

ಆದರೆ,  

ಈ ಪತ್ರವನ್ನು  ನಮ್ಮ ಕುಟುಂಬವನ್ನು  ಹತ್ತಿರದಿಂದ ಬಲ್ಲವರು ಈಗಲೇ ಓದುವುದಕ್ಕೆ ಅಭ್ಯಂತರವಿಲ್ಲ. ಸ್ವಲ್ಪ connect ಆಗಬಹುದು. ಅಕಸ್ಮಾತ್ ಸಾಮಾಜಿಕ  ಜಾಲತಾಣದಲ್ಲಿ ಇದನ್ನು  ಪ್ರಕಟಿಸಿದರೆ , ಶೀರ್ಷಿಕೆಯನ್ನು ನೋಡಿದೊಡನೆಯೇ ಈ ಕೆಳಗಿನ ಯಾವುದಾದರೂ ಒಂದು ಭಾವನೆ ಥಟ್ ಅಂತ ಮೂಡಬಹುದೇನೋ ಅಂತ ನನ್ನ ಊಹೆ.

ಧನಾತ್ಮಕ ಭಾವನೆ  : 

ಮೊಮ್ಮಗನೋ /ಮೊಮ್ಮಗಳೋ  ಕುಟುಂಬದಲ್ಲಿ ಪ್ರವೇಶವಾದದಾಗ  ಸಂಭ್ರಮ ಪಡುವ ಸಾವಿರ ಸಾವಿರ ಅಮ್ಮ,ಅಪ್ಪ, ಅಜ್ಜ,ಅಜ್ಜಿ ಯರಿದ್ದಾರೆ. ಆದರೆ ಅ ಸಂಭ್ರಮವನ್ನು, ಅನುಭವವನ್ನು ದಾಖಲಿಸಿದವರು   ಕೆಲವೇ ಕೆಲವರು. ಏನೋ ನಮ್ಮವನು ಬರೆದಿದ್ದಾನೆ.  ಓದೋಣ , ಏನಾದ್ರೂ ವಿಶೇಷ ಇದೆಯಾ ಅಂತ ಎಂಬ ಧನಾತ್ಮಕ ಅನಿಸಿಕೆ. 

    ಅಥವಾ

ನೇತ್ಯಾತ್ಮಕ ಭಾವನೆ 

“ಪ್ರಪಂಚದಲ್ಲಿ ಇವನೊಬ್ಬನೇ ಏನು  ಮೊಮ್ಮಕ್ಕಳನ್ನು ನೋಡಿದ್ದು? ಈ ಕಾಲದ ಎಲ್ಲಾ ಮಕ್ಕಳೂ ಹೀಗೇ ಇರೋದು.  ಹೆತ್ತವರಿಗೆ ಹೆಗ್ಗಣ ಮುದ್ದು  ಅಂತ ಇವನಿಗೆ ಗೊತ್ತಿಲ್ವಾ?, ಸುಮ್ನೇ ಬಡಾಯಿ; ಇತಿಹಾಸದಲ್ಲಿ ಅದೆಷ್ಟೋ ದೊಡ್ಡ ದೊಡ್ಡ ವ್ಯಕ್ತಿಗಳು ಬರೆದಿರುವ  ಪತ್ರಗಳು ಪುಸ್ತಕಗಳ ರೂಪದಲ್ಲಿವೆ . ಇವನದ್ದೇನು ಮಹಾ? “  ಎಂಬ ವಿಡಂಬನೆಯ ಭಾವನೆ

 

ಅದೇನಾದರೂ ಅನಿಸಲಿ. ನನಗನಿಸಿದ್ದನ್ನು ಪದಗಳಲ್ಲಿ ಹಿಡಿದಿಡುವ ಪುಟ್ಟ ಸಾಹಸ ಮಾಡಿಯೇಬಿಡ್ತೀನಿ.

 

ಒಂದಂತೂ ಸ್ಪಷ್ಟ . ನೀನೊಂದು  ನೆಪಮಾತ್ರ.  

ಏನೋ ಖುಷಿಗೆ,  time pass ಗೆ ಅಂತ  ಬರೆಯುತ್ತಾ ಹೋದೆ. ಆದರೆ,  ಬರೆಯುತ್ತಾ ಬರೆಯುತ್ತಾ  ಹೋದಂತೆಯೇ ಒಂದಿಷ್ಟು ಉದ್ದೇಶಗಳು ಸ್ಪಷ್ಟವಾಗ್ತಾಹೋದವು.

ಪ್ರಮುಖವಾಗಿ 8  ಉದ್ದೇಶಗಳು

1.  ಸ್ವ-ಸಂತೋಷ

ಖುಷಿ ಕೊಡುತ್ತೆ ಈ ಚಟುವಟಿಕೆ.

ನಾವು ಕಲಾವಿದರೇ ಹೀಗೆ ಅನ್ಸುತ್ತೆ. ಹೆಚ್ಚಿನವರು ಭಾವಜೀವಿಗಳು.  ನಮ್ಮದೇ ಆದ ಲೋಕದಲ್ಲಿ ವಿಹರಿಸ್ತಾ ಇರುತ್ತೇವೆ. ನಮ್ಮ ಹುಚ್ಚು ಹುಚ್ಚು ಚಟುವಟಿಕೆಗಳಿಗೆ ಯಾವುದೇ ತರ್ಕ (logic ) ಇರಬೇಕು ಅಂತ ಇಲ್ಲ. ಆಚೆಯಿಂದ ನಮ್ಮನ್ನು ನೋಡುವವರಿಗೆ , ಒಂದು ರೀತಿಯ ಹುಚ್ಚರಾಗಿ ಭಾಸವಾಗ್ತೇವೆ.

ಇದೇ ಭಾವನೆ ನನ್ನೊಳಗೆ ಉತ್ಪತ್ತಿಯಾಗೋದು, ನನ್ನ ತುಡಿತದ (Passion ) ಹವ್ಯಾಸವಾದ ಸಂಗೀತ/ ಸಂಯೋಜನೆಯಲ್ಲಿ ತೊಡಗಿಸಿಕೊಂಡಾಗ . ಇಷ್ಟವಾದ ಕವಿತೆಯೊಂದನ್ನು ಓದಿ, ಅರ್ಥಮಾಡಿಕೊಂಡು, ಕೀಬೋರ್ಡ್ ಮುಂದೆ ಕುಳಿತು , ಸ್ವರ ಸಂಯೋಜನೆ ಮಾಡುವಾಗ, ಅದೇನೋ ಅವ್ಯಕ್ತ ಆನಂದ.

ಆಗಲೂ ಇದೇ ಪ್ರಶ್ನೆ ಹುಟ್ಟಿಕೊಳ್ಳುತ್ತದೆ . ಯಾಕೆ ಸಂಗೀತ ಸಂಯೋಜನೆ ಮಾಡ್ತಾ ಇದೇನೆ ? ಯಾರಿಗೋಸ್ಕರ ?

ಸಂಯೋಜನೆ ಮಾಡುವಷ್ಟು ಹೊತ್ತು, ‘ಏಕಾಗ್ರತೆಯಿಂದ ಒಂದು ಬಗೆಯ  ಧ್ಯಾನಸ್ಥಿತಿತಲುಪಿ, ಆನಂದ ಪಡೆಯುತ್ತೇನೆ. ಮುಂದೆ ಎಲ್ಲೋ – ಯಾರೋ- ಎಂದೋ’ , ನಾ ಸಂಗೀತ ಸಂಯೋಜಿಸಿದ ಗೀತೆ ಕೇಳಿ ಆಹಾಎಂದರೆ, ಅದು ಬೋನಸ್ ನನ್ನ ಪರಿಶ್ರಮಕ್ಕೆ.  ಧನ್ಯತೆ ಸಿಗುತ್ತೆ ಎಂಬುದು ಸತ್ಯ. ಆದರೆ ಅದು ಪರಮೋದ್ದೇಶ ಅಲ್ಲ.

ಜೀವನದ ಸಾರ್ಥಕತೆ ಅನ್ನೋದು , ಇಂತಹ ನೂರಾರು , ಪುಟ್ಟ ಪುಟ್ಟ ಆನಂದದ ಕ್ಷಣಗಳ ಮೊತ್ತ ಅಲ್ಲವೇ?

ನನ್ನ ಹೃದಯಕ್ಕೆ ಹತ್ತಿರದ ಚಟುವಟಿಕೆ. ಖುಷಿ ಕೊಡುತ್ತೆ.

2.  ನನ್ನೊಳಗಿನ ಬರಹಗಾರನಿಗೆ ಒಂದು ರೀತಿಯ ತರಬೇತಿ

ಈಗ ಎರಡು ವರ್ಷಗಳಿಂದ, ಸಾಮಾಜಿಕ ಜಾಲತಾಣದಲ್ಲಿ ಆಗೊಮ್ಮೆ, ಈಗೊಮ್ಮೆ ಬರೆಯುತ್ತಿದ್ದೇನೆ. ಕವಿತೆ, ವೈಚಾರಿಕ ಬರಹಗಳು, ಅನುಭವ ಇತ್ಯಾದಿ.  ತೋಚಿದ್ದನ್ನೆಲ್ಲಾ ಗೀಚುವ ರೂಢಿ.  ಈ ಪತ್ರವೂ ಅದರಲ್ಲೊಂದು. ಇದೊಂದು ರೀತಿ ಸ್ವ-ತರಬೇತಿ ( self training )

3.  ನಿನಗೆ ಇದು ನನ್ನ ಉಡುಗೊರೆ

ಮೊದಲೇ ತಿಳಿಸಿದಂತೆ, ಇದು ನಮ್ಮ ಉಡುಗೊರೆ ನಿನಗೆ. ಅಂಗಡಿಯಿಂದ ಖರೀದಿಸಿದ, ಬಂಧು ಮಿತ್ರರು ನೀಡಿದ  ಗೊಂಬೆಗಳ , ವಸ್ತುಗಳ ರಾಶಿಯೇ ನಿನ್ನಲ್ಲಿವೆ. ಆದರೆ ಈ ಪತ್ರ ,  ನಿನ್ನ ಜೊತೆಯ ಒಡನಾಟದ  ಅನುಭವದ ಮಥನದಿಂದ ಉದ್ಭವಿಸಿದ ಬೆಣ್ಣೆ’.  ಹಾಗಾಗಿ ಇದು ಅನನ್ಯ (Unique) ಉಡುಗೊರೆ ಅಂತ ನಾ ಭಾವಿಸಿದ್ದೇನೆ. ಇದನ್ನು ನಾವು, ನಿನ್ನ ಜೊತೆ ಒಡನಾಡಿದ ಕುಟುಂಬಸ್ತರು ಮಾತ್ರ ಕೊಡಲು ಸಾಧ್ಯ.

4.  ನಿನಗೆ ಮಾತೃಭಾಷಾ ಸಂಸ್ಕಾರ

ಈ ಪತ್ರ ಬರೀತಾ ಬರೀತಾ ಇನ್ನೊಂದು ಉದ್ದೇಶ ಗೋಚರಿಸಿತು. ನೀನು ಹೊಚ್ಚ ಹೊಸ ಪೀಳಿಗೆಯವಳು.  ವಿದ್ಯಾವಂತ ವರ್ಗ ಅನ್ನಿಸಿಕೊಂಡವರು, ಮಾತೃಭಾಷೆಯನ್ನು ಬಲವಂತವಾಗಿ ಬದಿಗೊತ್ತಿ, ಅವಶ್ಯಕತೆ ಇಲ್ಲದ ಸಂದರ್ಭದಲ್ಲಿಯೂ  ಆಂಗ್ಲ ಭಾಷೆಯನ್ನೇ ಹಾಸಿ , ಹೊದೆಯುವ ಬೆಂಗಳೂರು ನಗರದ ಹುಚ್ಚು ಸಂಸ್ಕೃತಿಗೆ, ನೀನೂ ಬಲಿಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಅದು ಅನಿವಾರ್ಯವೂ ಆಗಬಹುದು. ಅದನ್ನು ಸಮರ್ಥಿಸಿಕೊಳ್ಳಲು ಸಾಕಷ್ಟು ಕಾರಣಗಳೂ ಹುಟ್ಟಿಕೊಳ್ಳಬಹುದು. ತನ್ಮೂಲಕ ಕನ್ನಡದ ಸಮೃದ್ಧ  ಸಾರಸ್ವತ ಲೋಕದಿಂದ ನೀ ಪಡೆಯಬೇಕಾಗಿರುವ  ಆನಂದ ಮತ್ತು  ಬೌದ್ಧಿಕ ಸಂಪತ್ತಿನಿಂದ ವಂಚಿತಳಾಗುವ ಸಾಧ್ಯತೆಯೂ ಇದೆ.

 

ಬಾಲ್ಯದಿಂದಲೇ ಕನ್ನಡ ಓದುವ, ಬರೆಯುವ ಅಭ್ಯಾಸ ನಿನ್ನದಾದರೆ ಚೆನ್ನ ಅಂತ ನನ್ನ ಹಂಬಲ, ಕನಸು.

ನಮ್ಮ ಮೇಲಿನ ಪ್ರೀತಿ-ಗೌರವದಿಂದಲಾದರೂ,   

ಮುಂದೊಂದು ದಿನ, ಈ ಪತ್ರವನ್ನು ಓದುವುದಕ್ಕಾದರೂ

ನೀನು ಕನ್ನಡ ಕಲಿಯಲಿ

ಎಂಬ ಹಂಬಲ ನಮಗೆ.

ಈ ಪತ್ರ  ಕನ್ನಡ ಪುಸ್ತಕಗಳನ್ನು ಓದುವ ಪ್ರವೃತ್ತಿಗೆ  ಪ್ರೇರಕವಾಗಲಿ ಎಂಬ ಆಶಯ. 

5.  ಪುಟ್ಟ ಮೌಲ್ಯ  ಸಂಕಲನ  ( value addition )

ಈ ಪತ್ರದಲ್ಲಿ  ನಾನು ಪ್ರಸ್ತಾಪಿಸಿರುವ ಮೌಲ್ಯಗಳು (values ), ನಿನ್ನ ಬದುಕನ್ನು ರೂಪಿಸಿಕೊಳ್ಳುವಲ್ಲಿ ಪ್ರತ್ಯಕ್ಷವಾಗಿಯೋ ಇಲ್ಲ ಪರೋಕ್ಷವಾಗಿಯೋ ಸಹಕಾರಿಯಾದರೆ  ಈ ಪತ್ರಕ್ಕೆ ಸಿಗುವ bonus, ಅಂತ ನನ್ನ ಭಾವನೆ. ಒಂದು  ಪೀಳಿಗೆಯವರು, ಮುಂದಿನ ಪೀಳಿಗೆಗೆ ತಮ್ಮ ಅನುಭವದ ಸಾರವನ್ನೆಲ್ಲಾ ಸುರಿದು, ಅವಶ್ಯಕತೆಯಿಲ್ಲದಿದ್ದರೂ  ಉಪದೇಶ ಕೊಟ್ಟು , ತಮ್ಮ ಅಭಿಪ್ರಾಯವನ್ನು ಬಲವಂತವಾಗಿ ಹೇರುವುದು ಸರಿಯಲ್ಲ ಎಂದು ನಂಬಿಕೊಂಡು ಬಂದವ ನಾನು. ಪ್ರತಿ ಪೀಳಿಗೆಗೂ ಅದರದೇ ಆದ ಅನನ್ಯ ಗುಣ ಲಕ್ಷಣಗಳಿರುತ್ತವೆ. ಆದರೂ ಎಲ್ಲಾಕಾಲಕ್ಕೂ ಅನ್ವಯಿಸಬಹುದಾದ ಕೆಲವು ವಿಚಾರಗಳೂ ಇರುತ್ತವೆ. ನಿನ್ನ ಕಾಲಘಟ್ಟದಲ್ಲಿ , ಒಂದಿಷ್ಟು ವಿಚಾರಗಳನ್ನು ಹೆಕ್ಕಿ ತೆಗೆಯಬಹುದೇನೋ!!

6.  ನನ್ನ ವಿಚಾರಗಳ ಅಭಿವ್ಯಕ್ತಿ.

ಈ ಪತ್ರದ ನೆಪದಲ್ಲಿ, ನನ್ನ ಬದುಕಿನಲ್ಲಿ, ನನ್ನ ಬೇರೆ ಬೇರೆ ಕಾಲಘಟ್ಟದಲ್ಲಿ , ನಾನು ಕಂಡುಕೊಂಡ ಹಲವು ವಿಚಾರಗಳ, ಚಿಂತನ-ಮಂಥನದ ಅಭಿವ್ಯಕ್ತಿ.

7.  ನನ್ನನ್ನು ಕಾಡಿದ / ಕಾಡುತ್ತಿರುವ ಅನೇಕ ಪ್ರಶ್ನೆಗಳ ನ್ನು ಪಟ್ಟಿ ಮಾಡುವುದು

    ಅದೆಷ್ಟೋ ಪ್ರಶ್ನೆಗಳಿವೆ. ಇನ್ನೂ ಉತ್ತರ ಸಿಕ್ಕಿಲ್ಲ. ಅದನ್ನು ಪಟ್ಟಿ ಮಾಡೋದು.

8.  ಪಾಲಕರಿಗೆ ಪ್ರಯೋಜನ ಆದರೂ ಆಗಲಿ

ಈ ಪತ್ರ ಕುಟುಂಬದ ಖಾಸಗೀ ಪತ್ರವಾದರೂ, ಅಕಸ್ಮಾತ್ ಮುಂದೊಂದು ದಿನ , ನಾನೇನಾದರೂ ಸಾಮಾಜಿಕ ಜಾಲತಾಣದಲ್ಲಿಯೋ  ಅಥವಾ ಪುಸ್ತಕ ರೂಪದಲ್ಲಿಯೋ ಪ್ರಕಟಿಸಿ ,  ಬೇರೆ ಯಾವುದೇ  ಮಕ್ಕಳ ಪಾಲಕ/ಪೋಷಕರು  ಓದುವ ಸಂದರ್ಭ ಬಂದರೆ, ಅವರಿಗೆ ಇದರಿಂದ  ಪುಟ್ಟ ಬೆಳಕುದೊರೆಯಲಿ.

(ಎಲ್ಲೋ, ಯಾರೋ, ಎಂದೋ ಓದಿ ಆಹಾಅಂದರೆ  ಧನ್ಯತೆ’ ’ ನನಗೆ )

 

ಪ್ರತಿಯೊಬ್ಬ ಬರಹಗಾರನಿಗೂ ಒಂದಲ್ಲಾ ಒಂದು ಹಂತದಲ್ಲಿ ನಾನೇಕೆ ಬರೆಯುತ್ತೇನೆಎಂಬ ಪ್ರಶ್ನೆ ಕಾಡಿಸಿರುತ್ತೆ. ನಾನೊಬ್ಬ ಕನ್ನಡ ಕವಿತಾ ಪ್ರಿಯ ಅದದ್ದರಿಂದ , ನನ್ನ ನೆಚ್ಚಿನ ಕವಿ ರಾಷ್ತ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಈ ಕಿರು ಕವಿತೆ ಉತ್ತರವನ್ನು ಕೊಟ್ಟಿದೆ.

ನಾನೇಕೆ ಬರೆಯುತ್ತೇನೆ

ಸುಮ್ಮನಿರಲಾರದ್ದಕ್ಕೆ,

ನನ್ನ ವೇದನೆ ಸಂವೇದನೆಗಳನ್ನು

ಕ್ರಿಯೆ ಪ್ರತಿಕ್ರಿಯೆಯಗಳನ್ನು

ದಾಖಲು ಮಾಡುವುದಕ್ಕೆ,

ನಿಂತ ನೀರಾಗದೆ ಮುಂದಕ್ಕೆ

ಹರಿಯುವುದಕ್ಕೆ

ಎಲ್ಲದರ ಜತೆ ಬೆರೆಯುವುದಕ್ಕೆ.

 

ನಾನು ಬರೆಯುತ್ತೇನೆ

ನನ್ನನ್ನು ನಾನು ಕಂಡುಕೊಳ್ಳುವುದಕ್ಕೆ

ಮತ್ತೆ ಕಾಣಿಸಿಕೊಳ್ಳುವುದಕ್ಕೆ;

ನಿಮ್ಮೊಂದಿಗೆ ಸಂವಾದಿಸುವುದಕ್ಕೆ.

 

ನಾನು ಬರೆಯುತ್ತೇನೆ

ಖುಷಿಗೆ, ನೋವಿಗೆ

ರೊಚ್ಚಿಗೆ  ಮತ್ತು ಹುಚ್ಚಿಗೆ

ಅಥವಾ ನಂದಿಸಲಾರದ ಕಿಚ್ಚಿಗೆ

 

ಅದೆಲ್ಲಾ ಸರಿ, ಪತ್ರ ಪ್ರಕಾರವೇ ಯಾಕೆ?

ನನಗೆ ನನ್ನ ಕಾಲೇಜು ದಿನಗಳಿಂದಲೂ  ಪತ್ರ ಬರೆಯುವ ಹವ್ಯಾಸ ಇತ್ತು. ದೂರವಾಣಿ , ಅಂತರ್ಜಾಲ ಇಲ್ಲದ ಜಮಾನದಲ್ಲಿ. ಅದೆಷ್ಟು ಪತ್ರಗಳನ್ನು ಬರೆದಿದ್ದೇನೋ! ಎಲ್ಲೆಲ್ಲಿ ಕುಳಿತು ಬರೆದಿದ್ದೇನೋ ಅಂತ ತಿಳಿಸಿದ್ರೆ ನಿನಗೆ ( ನನಗೂ ಈಗ ) ತಮಾಷೆ ಅನಿಸುತ್ತೆ,  ನಗು ಬರುತ್ತೆ,

ನಾ ಓದುತ್ತಿದ್ದ ಕಾಲೆಜಿನಲ್ಲಿ

ನಾ ವಾಸಿಸುತ್ತಿದ್ದ ಹಾಸ್ಟೆಲ್ ನಲ್ಲಿ, 

ಬಸ್ ನಿಲ್ದಾಣದಲ್ಲಿ,

ರೈಲು ನಿಲ್ದಾಣದಲ್ಲಿ,

ವಿಮಾನ ನಿಲ್ದಾಣದಲ್ಲಿ

ಅಂದರೆ ಯಾವುದಕ್ಕಾದರೂ ಕಾಯುವ ಸಂದರ್ಭಗಳನ್ನೆಲ್ಲಾ ಪತ್ರ ಬರೆಯುವುದಕ್ಕೆ ವಿನಿಯೋಗಿಸುತ್ತಿದ್ದೆ.

ಸಾಮಾನ್ಯವಾಗಿ ಕಾಯುವುದು ಹೆಚ್ಚಿನ ಜನಕ್ಕೆ ಅಸಹನೀಯವಾದರೂ, ನನಗೆ ಈ ಹವ್ಯಾಸದಿಂದಾಗಿ, ಕಾಯುವುದು ಅವಕಾಶವಾಗಿರ್ತಿತ್ತು.

“ ಅಜ್ಜಾ, ಅಷ್ಟೆಲ್ಲಾ ಪತ್ರಗಳನ್ನು ಯಾರಿಗೆ ಬರೀತಾ ಇದ್ದೆ?” ಅಂತ ನೀ ಕೇಳಿದ್ಯಾ?

 

 ಹೌದು , ನನ್ನ ಸ್ನೇಹವಲಯ ವಿಸ್ತಾರವಾದದ್ದು. ಸ್ನೇಹಿತರನ್ನು ಸಂಪಾದಿಸುವುದೂ ನನ್ನ ಒಂದು ಹವ್ಯಾಸವಾಗಿತ್ತು. ಯಾರು ಯಾರಿಗೆ ಪತ್ರ ಬರೆಯುತ್ತಿದ್ದೆ?

·      ಅಪ್ಪ, ಅಮ್ಮ, ತಂಗಿ, ತಮ್ಮನಿಗೆ

·      ಬಾಲ್ಯದ ಸ್ನೇಹಿತ- ಸ್ನೇಹಿತರಿಗೆ

·      ನನ್ನನ್ನು ಆಕರ್ಷಿಸಿದ, ನಂತರ ನನ್ನ ಬಾಳ ಸಂಗಾತಿಯಾದ ,  ನಿನ್ನ ವಿಜೂ ಅಜ್ಜಿಗೆ

ಆದರೆ , ಕ್ರಮೇಣ  ಪತ್ರ ಬರೆಯುವುದು ಕಡಿಮೆಯಾಯಿತು. ಅದಕ್ಕೆ ಹಲವಾರು ಕಾರಣಗಳು. ಹಿಂದೆ ದೂರದಲ್ಲಿರುವವರಿಗೆ ಸಂಪರ್ಕಿಸಲು ಅಂಚೆ ವ್ಯವಸ್ಥೆ ಮಾತ್ರ ಇತ್ತು. ಅದು ಅನಿವಾರ್ಯವಾಗಿತ್ತು.

ಇಂದಿರುವ luxury , Digital ಪ್ರಪಂಚ ಅಂದಿರಲಿಲ್ಲ.  ಫೋನ್ ಇಲ್ಲ, ಅಂತರ್ ಜಾಲ ಇಲ್ಲ, E-mail ಇಲ್ಲ . ಬೇಕಾದ ರೀತಿ ಪತ್ರ ಬರೆದುಕೊಡಬಲ್ಲ AI ಇಲ್ಲ .

ನನ್ನ ಬದುಕಿನ ಯೋಗ ಕ್ಷೇಮ ಕುಶಲ  ಸಮಾಚಾರ ತಿಳಿಸುವುದಕ್ಕೆ ಪ್ರಾರಂಭವಾದ ಪತ್ರ ಬರೆಯುವ ಹವ್ಯಾಸ, ನನಗೆ ಅರಿವಿಲ್ಲದೆಯೇ ಒಂದು ರೀತಿಯಲ್ಲಿ  ದಿನಚರಿ (diary ) ಬರೆಯುವ ಅಭ್ಯಾಸವಾಗಿತ್ತು, ಈ ಹವ್ಯಾಸ , ನನ್ನ ಸಂವಹನಾ ಕೌಶಲ್ಯವನ್ನೂ   (Communication skill) ಮತ್ತು ಬರವಣಿಗೆಯ ಕೌಶಲ್ಯವನ್ನೂ  ಬೆಳಿಸಿತ್ತು, ಎಂಬುದು ನಂತರದ ದಿನಗಳಲ್ಲಿ ಅರಿವಿಗೆ ಬಂತು.

ಪುಟ್ಟಿ,  

ಈಗ ಇಳಿವಯಸ್ಸಿನಲ್ಲಿ, ಮತ್ತೆ ಬಾಲ್ಯಕ್ಕೆ- ಯೌವನಕ್ಕೆ ಮರಳುತ್ತಿದ್ದೇನೆ, ಈ ಪತ್ರಬರೆಯುವ ಹವ್ಯಾಸವನ್ನು ಪುನಃ ಪ್ರಾರಂಭಿಸಿ.

********************************

All Right

ಇಷ್ಟು ದೀರ್ಘ ಪೀಠಿಕೆಯ ನಂತರ ಪ್ರಾರಂಬಿಸಲೇ,  ನಮ್ಮ-ನಿನ್ನ 2 ವರ್ಷಗಳ ಒಡನಾಟದ ನೆನಪಿನ ಪಯಣವನ್ನು ?

,{ಹ್ವಾಯ್ , ಎಂತ ಮಾರಾಯ್ರೆ, ಪ್ರಸಂಗಕ್ಕಿಂತ ಪೀಠಿಕೆ ಉದ್ದ ಆಯ್ತಲ್ಲ!!?? ,ಶುರು ಮಾಡ್ತ್ರ್ಯಾ ಇಲ್ಯಾ  ಪ್ರಸಂಗನ ??  ಇದು ಯಕ್ಷಗಾನ ಪ್ರೇಕ್ಷಕರು  ಸಾಮಾನ್ಯವಾಗಿ ವಿನೋದದಿಂದ  ಬಳಸುವ ಆರೋಪ }

ಕಾಮೆಂಟ್‌ಗಳು