ಪತ್ರ - ಮೊಮ್ಮಗಳಿಗೆ - ಅಧ್ಯಾಯ7- ಕೊಡು-ಪಡೆ-ಕೊಡು-ಪಡೆ ಆಟ

 

ಅಧ್ಯಾಯ #7

ಪಡೆದದ್ದು -ಕೊಟ್ಟದ್ದು

ಈ ಎರಡು ವರ್ಷಗಳ ಅವಧಿಯಲ್ಲಿ ನಿನ್ನ ನಗು, ಅಳು, ಕೋಪ, ಹಟ, ಆಟ, ಊಟ, ಓಟ,  ಕಾಟ, ಕಿರಿಚಾಟ ಎಲ್ಲವನ್ನೂ ಆನಂದಿಸಿದ್ದೇವೆ , ಅನುಭವಿಸಿದ್ದೇವೆ. ಈ ಪ್ರಕ್ರಿಯೆ ಪ್ರಪಂಚದ  ಯಾವುದೇ ಪಾಲಕ, ಪೋಷಕರಿಗೂ ಸ್ವಾಭಾವಿಕ, ಅನಿವಾರ್ಯ. ಈ ಪ್ರಕ್ರಿಯೆಯಲ್ಲಿ,

ನಾವು ನಿನಗೆ ಒಂದಿಷ್ಟನ್ನು ಕೊಟ್ಟಿದ್ದೇವೆ.

ನಿನ್ನಿಂದ ನಾವು ಒಂದಿಷ್ಟನ್ನು ಪಡೆದಿದ್ದೇವೆ.

ಹೀಗೇ, ನಮ್ಮೊಳಗೇ ಒಂದು ಚಿಂತನೆ

ಪ್ರತಿ ದಿನ ಪಾರ್ಕ್,  ದೇವಸ್ತಾನ, ಅಂಗಡಿ ಭೇಟಿ  ಕೇವಲ ಸಮಯ ಕಳೆಯುವುದಕ್ಕಾಗಿಯೋ? ಮನೆಯೊಳಗೇ ಇದ್ದರೆ, ನಿನಗೆ ಬೋರ್ ಆಗಬಹುದು ಎಂದೋ?

ಇಲ್ಲ, ಇಲ್ಲ

ಅದು ಕೇವಲ ಸಮಯ ಕಳೆಯಿವುದಕ್ಕಾಗಿ ಅಲ್ಲ. ಇಂದಿನ ಅನೇಕ ಪಾಲಕರು ಅನುಸರಿಸುವ  ಅತ್ಯಂತ ಸುಲಭ ಮಾರ್ಗವನ್ನು ನಾವೂ ಅನುಸರಿಸಬಹುದಿತ್ತು. ಮೊಬೈಲ್ ಎಂಬ ಪುಟ್ಟ  ಮಾಯಾಪೆಟ್ಟಿಗೆಯನ್ನು ನಿನ್ನ ಕೈಯೊಳಗೆ ಇರಿಸಿ, ನೀ ಮೈಮರೆತು ಅದರೊಳಗಿನ ಕಾರ್ಟೂನ್ ಅಥವಾ ಆಟದಲ್ಲಿ ಮುಳುಗುವಂತೆ ಮಾಡಿ, ನಾವೂ ಮೊಬೈಲ್ ನಲ್ಲಿಯೋ – ಟಿ.ವಿ.ಯಲ್ಲಿಯೋ ಕಳೆದು ಹೋಗಬಹುದಿತ್ತು. ಆದರೆ ನಾವು ಅದನ್ನು ಮಾಡಲಿಲ್ಲ . ದಿನದಲ್ಲಿ ಸುಮಾರು 4 ಗಂಟೆ , ಮನೆಯಿಂದ ಆಚೆ, ಹೊರ ಜಗತ್ತಿನಲ್ಲಿ, ನಿನ್ನನ್ನು ಓಡಾಡಿಸಿದೆವು.

 

ಅದೃಷ್ಟವಶಾತ್ , ಅದಕ್ಕೆ ಅನುಕೂಲವಾದ ಪರಿಸ್ಥಿತಿ ನಮ್ಮನೆಯಲ್ಲಿತ್ತು. ಕುಟುಂಬದ  ನಾಲ್ಕೂ ಪಾಲಕ-ಪೋಷಕರು ಸದಾ ಮನೆಯಲ್ಲಿಯೇ ಇರ್ತಾ ಇದ್ದೆವು. ನಿನ್ನ ಪಾಲನೆ-ಪೋಷಣೆಯ ಜವಾಬ್ದಾರಿಯ ಹದವಾದ  ಹಂಚಿಕೆಯಾಗಿತ್ತು, ನಮ್ಮ ನಾಲ್ಕೂ ಸದಸ್ಯರ ನಡುವೆ.

ನಿವೃತ್ತ ಜೀವನದ ಸ್ವಾತಂತ್ರ್ಯವನ್ನು ಆನಂದಿಸುತ್ತಿದ್ದ ನಾನು,

40 ವರ್ಷಗಳ ಹಿಂದೆಯೇ,  ಮುಗದೂರಿನ ತನ್ನ ತವರು ಮನೆಯಲ್ಲಿ, ಮನೆ ತುಂಬಾ  ನಲಿದಾಡುತ್ತಿದ್ದ ಮಕ್ಕಳನ್ನು ಆಡಿಸುವ , ಆರೈಕೆ ಮಾಡುವ ಕೌಶಲ್ಯವನ್ನು ಗಳಿಸಿದ್ದ ನನ್ನ ಪತ್ನಿ ವಿಜಯ,

 Work From Home ಮಾಡ್ತಾ , ನಡು ನಡುವೆ ನಿನ್ನೊಂದಿಗೂ ಮಾತು-ಕತೆ-ಎತ್ತಿ ಆಡಿಸ್ತಾ, work& family balance ನ್ನು ಚೆನ್ನಾಗಿ ಮಾಡ್ತಾಇದ್ದ ನಿನ್ನಪ್ಪ ಶಶಾಂಕ್

 

software ವೃತ್ತಿಗೆ ವಿದಾಯ ಹೇಳಿ, ಸಂಗೀತಾಧ್ಯಯನದ ಸಲುವಾಗಿ,  ಪೂರ್ಣಪ್ರಮಾಣದ ಗೃಹಿಣಿಯಾಗಿ ಪಲ್ಲಟವಾದ ನಿನ್ನಮ್ಮ; ಆಕೆಯ  ಪೂರ್ಣ ಪ್ರಮಾಣದ ಮಾತೃವಾತ್ಸಲ್ಯ; ತನ್ನ ನಾದಮಯ , ವಿನೋದಮಯ ಮಾತಿನ ಮಳೆ ಸುರಿಸಿ,ನಿನ್ನ ವಾಕ್ ಶಕ್ತಿಯನ್ನೂ ವೃದ್ಧಿಸುತ್ತಿದ್ದ ನಿನ್ನಮ್ಮ ರಶ್ಮಿ,

ನಿನ್ನ ನೋಡುವ ತವಕ-ತುಡಿತದಿಂದ , ಆಗ್ಗಾಗ್ಯೆ ಸಾಗರದಿಂದ . ಸುಗಮ ಬಸ್(No 12) ನಲ್ಲಿ ಧಾವಿಸುತ್ತಿದ್ದ ನಿನ್ನಜ್ಜ ದತ್ತಜ್ಜ, ಶಾಂತಜ್ಜಿ.

ಮೊಮ್ಮಗಳನ್ನು ಹೇಗೆ ಆಕರ್ಷಿಸಬೇಕು ಎಂಬ  ವಿಶಿಷ್ಟ ವಾಕ್ ಚಾತುರ್ಯ, ಅಭಿನಯ ಚಾತುರ್ಯವನ್ನು ,

 ( ನಮ್ಮ ಹವ್ಯಕ ಆಡು ಮಾತಿನಲ್ಲಿ ಹೇಳಬೇಕೂ ಅಂದರೆ ಮಳ್ ಮಳ್ ಮಾತು, ಕಕ್ರತನ)  ಕರಗತ ಮಾಡಿಕೊಂಡಿದ್ದ ನಿನ್ನ ದತ್ತಜ್ಜನಂತೂ  ನಿನಗೆ ಒಂದು ಆಯಸ್ಕಾಂತ.  ದತ್ತಜ್ಜ ನಮ್ಮನೆಯಲ್ಲಿರಷ್ಟೂ ದಿನ, ನಿನ್ನ ವಾಸ್ತವ್ಯ ಅವನೊಟ್ಟಿಗೇ.

ಶಾಂತಜ್ಜಿ ಜೊತೆಗೆ ಮಾತ್ರ ನಿನ್ನದು ಸ್ವಲ್ಪ ದೂರದಿಂದಲೇ ಸ್ನೇಹ. ದತ್ತಜ್ಜನ ಜೊತೆಗಿದ್ದ ಸಲುಗೆ ಶಾಂತಜ್ಜಿ ಜೊತೆಗೆ ಇರಲಿಲ್ಲ. ಅದ್ದರಿಂದ ನಿನ್ನ ಆಟೋಟ , ಆಟಾಟೋಪ ವನ್ನು ವೀಕ್ಷಿಸುವ ಪ್ರೇಕ್ಷಕರ ಸ್ಥಾನ ಅವರದು.

 

ನಮ್ಮ ಮತ್ತು ನಿನ್ನ ನಡುವೆ, ನಮಗೆ ಅರಿವಿಲ್ಲದ ಹಾಗೆ , ಒಂದಿಷ್ಟು ಕೊಡುವ – ಪಡೆಯುವ  ಪ್ರತಿಕ್ರಿಯೆ ನಡೆದಿದೆ .

ಏನು ಹಾಗಂದರೆ ?

ಕೊಡು-ಪಡೆಆಟ  ವ್ಯವಹಾರ ಪ್ರಪಂಚದಲ್ಲಿ ಸರ್ವೇಸಾಮಾನ್ಯ. ಏನನ್ನಾದರೂ  ಪಡೆಯುವುದಕ್ಕಾಗಿ, ಇನ್ನೇನನ್ನಾದರೂ ಕೊಡಲೇಬೇಕು. ಇದು ಜಗತ್ತಿನ ವ್ಯಾವಹಾರಿಕ ಪ್ರಪಂಚದ ನಿಯಮ.

ಆದರೆ , ಇದು ವ್ಯಾವಹಾರಿಕವಲ್ಲದ , ಭಾವನಾತ್ಮಕ ಸಂಬಂಧದಲ್ಲಿಯೂ ನಡೆಯುವ ನಿರಂತರ ಪ್ರಕ್ರಿಯೆ.  ಕೆಲವು ಪ್ರತ್ಯಕ್ಷವಾಗಿ ( ಪ್ರಜ್ನಾಪೂರ್ವಕವಾಗಿ) , ಕೆಲವು ಪರೋಕ್ಷವಾಗಿ( ಅರಿವಿಗೆ ಬಾರದೆಯೇ).

ಇಲ್ಲಿ ಒಂದು ಗಂಭೀರ ವಿಚಾರವನ್ನು ಹೇಳಲೇಬೇಕು

ಸಮಾಜದಲ್ಲಿ ಕೆಲವು ಪಾಲಕರಿಂದ ತಮ್ಮ  ಬೆಳೆದ ಮಕ್ಕಳ ಬಗ್ಗೆ ಖಾರದ, ಆರೋಪದ ನುಡಿಗಳು ಬರುವುದುಂಟು, (ಅವರು ಸರಿಯಾದ ದಾರಿಯಲ್ಲಿಲ್ಲ ಅನಿಸಿದಾಗ)  “ ನಿನ್ನನ್ನು ಹೆತ್ತು, ಹೊತ್ತು, ಬೆಳೆಸಿದ್ದೇವೆ. ಅದಕ್ಕೆ ನೀನು ಕೊಟ್ಟ ಪ್ರತಿಫಲ ಇದೇನಾ?” ಅಂತ.

ಮಕ್ಕಳಿಂದ ಪ್ರತಿಫಲವನ್ನು ನಿರೀಕ್ಷಿಸುವ ವ್ಯಾವಾಹಾರಿಕ ಮನೋಭಾವವೇ ಸರಿಯಲ್ಲ. ಯಾಕೆ ಅಂದರೆ,  ಮಕ್ಕಳು ಬಾಲ್ಯದಲ್ಲಿಯೇ, ಬೇರೆ ಬೇರೆ ಹಂತದಲ್ಲಿ ನಮಗೆ ಅದೆಷ್ಟು ಆನಂದವನ್ನು ಕೊಟ್ಟಿರ್ತಾರೆ ಅಲ್ವಾ?.

ಅವರ ಬಾಲ್ಯದಲ್ಲಿ, ಪಾಲಕರಾಗಿ ನಮ್ಮ ಕರ್ತವ್ಯವನ್ನು ನಿಭಾಯಿಸುವ ಸಂದರ್ಭದಲ್ಲಿ,  ನಮ್ಮ ಸಾವಿರ ಸಾವಿರ ಸಣ್ಣ ಪುಟ್ಟ  ಕ್ಷಣಗಳು,  ಅವರಿಂದಾಗಿ ಚೈತನ್ಯಭರಿತ , ಆನಂದದಾಯಕವಾಗಿ ಪರಿವರ್ತನೆ ಹೊಂದಿರುತ್ತವೆ. ಇದರ ಅರ್ಥ, ಅವರಿಂದ ನಾವು ಆಗಲೇ ಸಾಕಷ್ಟು ಭಾವನಾತ್ಮಕ ಸಂಪತ್ತನ್ನು ಪಡೆದಿರುತ್ತೇವೆ. ಅದಕ್ಕೆ ಬೆಲೆ ಕಟ್ಟುವುದಕ್ಕೇ  ಆಗುತ್ಯೇ? ಅಂದಮೇಲೆ ಪ್ರತಿಫಲನಿರೀಕ್ಷಿಸುವುದಾದರೂ ಯಾಕೆ?

ಪ್ರಜ್ನಾವಂತ ಪಾಲಕರಾಗಿ,  ಉತ್ತಮ ಸಂಸ್ಕಾರ ಕೊಟ್ಟಿದ್ದೇ ಆದರೆ, ಪ್ರತ್ಯಕ್ಷ ಹಾಗು ಪರೋಕ್ಷವಾಗಿ ನಮಗೆ ಅವರಿಂದ ಬೇರೆ ಬೇರೆ ಕಾಲಘಟ್ಟದಲ್ಲಿ ಸಿಕ್ಕೇ ಸಿಗುತ್ತೆ.  ಇದು ನನ್ನ ಮತ್ತು ನನ್ನ ಪತ್ನಿಯ ವೈಯುಕ್ತಿಕ ಅನುಭವ. ನಮ್ಮ ಮಗ ಶಶಾಂಕನನ್ನು ಪಾಲನೆ, ಪೋಷಣೆ ಮಾಡುವ ಹಾದಿಯಲ್ಲಿ ಕಂಡುಕೊಂಡ ಸತ್ಯ.  

 

ನಾವೇನನ್ನು ಕೊಡಲು ಪ್ರಯತ್ನಿಸಿದ್ದೇವೆ?

ಇಲ್ಲಿ ಪ್ರಯತ್ನ ಮಾಡಿದೆವು  ಅಂತ ಮಾತ್ರ ಹೇಳಬಲ್ಲೆ . ನಿನಗೆ ಅದು ತಲುಪಿತೋ / ಇಲ್ಲವೋ ಅದು ನನಗೆ ಈಗಲೇ ಪೂರ್ತಿ   ಗೊತ್ತಾಗುವುದಿಲ್ಲ. ಮಕ್ಕಳ ಮನಸ್ಸು ಸಂಕೀರ್ಣ, ಸೂಕ್ಷ್ಮ.  ದೊಡ್ಡವರಿಗೆ ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳೋಕೆ ಆಗೋದಿಲ್ಲ. ಕ್ಷಣಕ್ಷಣಕ್ಕೂ ಬದಲಾಗುವ ಸಂತೋಷ, ದುಃಖ , ಕೋಪ,  ಕುತೂಹಲ,  ಆತಂಕ, …ಇದ್ದಕಿದ್ದಂತೆಯೇ ಪ್ರಶಾಂತತೆ....

ಒಂದು ಸುಂದರ ಬದುಕಿಗೆ ಬುನಾದಿಯನ್ನಂತೂ ಸ್ಥಾಪಿಸಿದ್ದೇವೆ.

ಉತ್ತಮ  ಪರಿಸರ ( ಅದರ ಮೂಲಕ ಸಂಸ್ಕಾರ)

ಅರ್ಥಪೂರ್ಣ ಬದುಕಿಗೆ ಬೇಕಾದದ್ದು ಉತ್ತಮ ಸಂಸ್ಕಾರ . ಅದರ ಪ್ರಬಲ ಬುನಾದಿಯಾಗಬೇಕಾದದ್ದೇ ಬಾಲ್ಯದಲ್ಲಿ. ಉದಾಹರಣೆಗೆ , ನನ್ನ ಈ 67 ರ ಇಳಿವಯಸ್ಸಿನಲ್ಲಿಯೂ , ಉತ್ಸಾಹ / ಜೀವನಪ್ರೀತಿಯನ್ನು ಉಳಿಸಿರೋದು ನನ್ನ ಹವ್ಯಾಸಗಳು  , ಸಂಗೀತ, ಓದುವುದು, ಬರೆಯುವುದು ,  ರಂಗಭೂಮಿ ಇತ್ಯಾದಿ. ಇದಕ್ಕೆ ಬುನಾದಿಯಾದದ್ದು 60 ವರ್ಷಗಳ ಹಿಂದೆ , ನನ್ನಪ್ಪ , ಅಮ್ಮ ಒದಗಿಸಿದ ಪ್ರೀತಿ-ಪ್ರೋತ್ಸಾಹಭರಿತ  ಪರಿಸರ ( ತನ್ಮೂಲಕ ಸಂಸ್ಕಾರ)

ಮಾತನಾಡುವ  ಸಂಸ್ಕಾರ

ಮಾತನಾಡುವ ( ಅದರಲ್ಲಿಯೂ ಕನ್ನಡ ಮಾತಾಡುವ )  ಸಂಸ್ಕಾರ

ಹಿಂದೆಯೇ ತಿಳಿಸಿದಂತೆ,  ದಿನದಲ್ಲಿ 24 ಗಂಟೆಯೂ, ನಿನಗೆ ಅಮ್ಮ,ಅಪ್ಪ, ಅಜ್ಜಿ ಮತ್ತು ಅಜ್ಜ, ಈ ನಾಲ್ಕೂ ಜನರ ಒಡನಾಟ ನಿನಗೆ ಸಿಕ್ಕಿದ್ದು ನಿನ್ನ ಅದೃಷ್ಟವೇ ಸರಿ. ಎಲ್ಲರೂ ನಿನ್ನ ಜೊತೆ ಮಾತನಾಡುವ ಹುಚ್ಚುಬೆಳೆಸಿಕೊಂಡವರು. ಅದರಲ್ಲಿಯೂ ಕನ್ನಡದಲ್ಲಿಯೇ ಮಾತಾಡುವ ಪದ್ದತಿ ಯಿಂದಾಗಿ, ನೀನು ಒಂದೂವರೆ ವರ್ಷಕ್ಕೇ, ಚಂದ ಮಾತಾಡುವುದನ್ನು ಕಲಿತೆ.

ಲಲಿತ ಕಲೆಗಳ ಪರಿಚಯ

{ಗಾಯನ, ವಾದ್ಯಸಂಗೀತ }

ಇಡೀದಿನ ನೀನು ಯಾವುದೋ ಹಾಡನ್ನು ಗುನುಗ್ತಾ, ಡ್ಯಾನ್ಸ್ ಮಾಡ್ತಾ  ಇರ್ತೀಯ .

“ಪಂಡಲಾಪುಲವೆಂಬ ದೊಡ್ಡ ನಗಲ”

“ಬಾಳಾ ಒಳ್ಳೇರ್ ನಮ್ ಮಿಸ್ಸು”

“ಬಾಲಯ್ಯ ಬಾ ಬಾ”

“ ಐಗಿರಿ ನಂದಿನಿ ..”

ಇದಕ್ಕೆ ಮುಖ್ಯ ಕಾರಣ , ನಿನ್ನ ಮೇಲೆ ಸಂಗೀತ ಪ್ರಭಾವ ಮಾಡುವುದರಲ್ಲಿ ನಾವು ಯಶಸ್ಸನ್ನು ಪಡೆದಿದ್ದೇವೆ. ಟಿವಿಯಲ್ಲಿ ಭಜನೆ, ಸಂಗೀತದ ಕುರಿತಾದ ಕಾರ್ಯಕ್ರಮಗಳನ್ನು ಆಗ್ಗಾಗ್ಯೆ ತೋರಿಸ್ತಾ ಇದ್ದಿದ್ವಿ.

ಪ್ರತಿ ದಿನ ಹಲವಾರು ಬಾರಿ, ನಮ್ಮ ಮಂಚದ ಮೇಲೆ ನಿನ್ನ hyper active ನೃತ್ಯ. ನಾವು ನಾಲ್ವರೂ ಪ್ರೇಕ್ಷಕರು. ಈ ದೃಶ್ಯವನ್ನಂತೂ ನಾವು ಮರೆಯುವ ಹಾಗೇ ಇಲ್ಲ.

 

ಹಾಗೆಯೇ, ನಿನ್ನಪ್ಪ ಅಥವಾ ನಾನು LAPTOP COMPUTER ನಲ್ಲಿ ಕೆಲಸ ಮಾಡ್ತಾ ಇರುವಾಗ, ನಿನಗೆ ಕುತೂಹಲ, ಆಸೆ, ಅದರಲ್ಲಿ ನೀನೂ ಆಡಬೇಕು ಅಂತ. ಆಗಲೂ ನಾವು ನಿನ್ನ ಕುತೂಹಲಕ್ಕೆ ಗೌರವ ಕೊಟ್ಟು, ಕೈಯಾಡಿಸಲು ಬಿಡ್ತಿದ್ವಿ. ಅಷ್ತೇ ಅಲ್ಲ ಅದರಲ್ಲಿ PAINT application  ತೆರೆದು, ಅದರಲ್ಲಿ ನಿನ್ನ ಪುಟ್ಟ ಬೆರಳುಗಳಿಂದ ಚಿತ್ರ ಬಿಡಿಸಿಸ್ತಾ ಇದ್ವಿ.

 

 

ನಾನು ಕೀ ಬೋರ್ಡ್ ಮುಂದೆ ಕುಳಿತು ಸಂಗೀತ ಸಂಯೋಜನೆ ಮಾಡುವಾಗ, ನೀ ಕುತೂಹಲದಿಂದ ಅದನ್ನು ಮುಟ್ಟೋಕೆ ಬರ್ತಿದ್ದೆ. ನಾ ಗದರಿಸದೇ, ನಿನಗೆ ಅದರಲ್ಲಿ ಆಟ ಆಡೋಕೆ ಬಿಡ್ತಾ ಇದ್ದೆ.

 

ನಾವೇನನ್ನು ಪಡೆದೆವು ?

ಸಾವಿರ ಸಾವಿರ  ಸಂತೋಷದ ಕ್ಷಣಗಳು. ನಿನ್ನ ಆಟ, ಮಾತು, ನಗು, ತುಂಟತನದ ಕ್ಷಣಗಳು.

ನನಗೆ  ಯಾವಾಗಲೂ ಅನಿಸೋದು . ಪ್ರಬುದ್ಧರು ಅನಿಸಿಕೊಂಡಿರುವ ನಮಗೆ , ನಿನ್ನ ( ಅಥವಾ ಯಾವುದೇ ಮಗುವಿನ)  ಈ ಕೆಳಗಿನ  ಗುಣಗಳು ಆದರ್ಶಪ್ರಾಯ

·               ಮುಗ್ಧತೆ

·               ನಿಷ್ಕಲ್ಮಷ ಮನಸ್ಸು ಯಾವುದೇ ಪೂರ್ವಾಗ್ರಹ ಇಲ್ಲದಿರುವುದು.

·               ಯಾವುದೇ ಅಹಂ’ ( ego) ಇಲ್ಲದಿರುವುದು

·               ಯಾರ ಮೇಲಾದ್ರೂ ಕೋಪ ಬಂದರೆ ಅದು ಕ್ಷಣಿಕ ಅಷ್ಟೆ. ಮರು ಕ್ಷಣಕ್ಕೇ ಮರೆತು ಮಾಮೂಲೀ ಸ್ಥಿತಿಗೆ ಬರೋದು.

·               ವರ್ತಮಾನದಲ್ಲಿಯಷ್ತೇ ಬದುಕುವ ಕಲೆ. ( ಮಕ್ಕಳಿಗೆ ಭೂತಕಾಲದ ಕೊರಗಾಗಲೀ, ಭವಿಷ್ಯದ ಹೆದರಿಕೆಯಾಗಲೀ, ವರ್ತಮಾನದ ಆನಂದವನ್ನು ಕಿತ್ತುಕೊಳ್ಳುವುದಿಲ್ಲ)  ಈ ಕ್ಷಣ ಅಷ್ಟೇ ಕಾಣಿಸೋದು.

·               ಸಣ್ಣ ಸಣ್ಣ ವಿಷಯಗಳನ್ನೂ ತಿಳಿದುಕೊಳ್ಳುವ ಕುತೂಹಲ

·               ನಿರ್ಜೀವ ವಸ್ತು-ಗೊಂಬೆಗಳಿಗೂ ಜೀವ ತುಂಬಿಖುಷಿಪಡುವ ನಿನ್ನ ಕಲ್ಪನಾಶಕ್ತಿ.

 

ಒಟ್ಟಿನಲ್ಲಿ ,

ಪಡೆಯುವಲ್ಲಿ ಸಂತೋಷ ಇದೆ

ಕೊಡುವಲ್ಲಿ ಅರ್ಥ ಇದೆ

ಎಂಬುದು  ನಿನ್ನೊಡನಾಟದಿಂದ ಮತ್ತೊಮ್ಮೆ  ಸಾಬೀತಾಗಿದೆ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ