ಪತ್ರ - ಮೊಮ್ಮಗಳಿಗೆ - ಅಧ್ಯಾಯ 4- ವರದಾಂಜನೇಯ ಸ್ವಾಮಿ ಗೋ..ವಿಂದಾ
ಅಧ್ಯಾಯ
#4
ಶ್ರೀ
ವರದಾಂಜನೇಯ ಸ್ವಾಮಿ ಗೋವಿಂದಾ!! ಗೋ...ವಿಂದಾ!!
ವರದಾಂಜನೇಯ
ದೇವಸ್ಥಾನದ ನಮ್ಮ ಕ್ಷಣಗಳು
ನಿನಗೆ ಸುಮಾರು 8 ತಿಂಗಳು
ತುಂಬಿದಾಗಿನಿಂದಾ, ಹೆಚ್ಚೂ ಕಡಿಮೆ ಪ್ರತಿದಿನ
, ಹತ್ತಿರದ ಆಂಜನೇಯ ದೇವಸ್ಥಾನದಲ್ಲಿ. ಸಂಜೆ 7 ರ ನಂತರ, ನಮ್ಮ ವಿಹಾರ, ಸಮೀಪದ ವರದಾಂಜನೇಯ
ದೇವಸ್ಥಾನಕ್ಕೆ. ಎರಡು ವರ್ಷಗಳಲ್ಲಿ, ಸುಮಾರು 400 ಕ್ಕೂ ಹೆಚ್ಚು ಸಂಜೆಗಳನ್ನು ಅಲ್ಲಿ ಕಳೆದಿದ್ದೇವೆ, ಆ ಸುಂದರ ಕ್ಷಣಗಳ ನೆನಪನ್ನು ಮೆಲುಕು ಹಾಕಲೇಬೇಕು
· ವಿಶಾಲವಾದ ಪ್ರಾಂಗಣ ಇರುವ, ಸುಂದರ ವಿನ್ಯಾಸದ ಆ
ದೇವಸ್ಥಾನ, ‘ನಮ್ಮನೆ’ ಯ ವಿಸ್ತಾರದ ಭಾಗವೇ
ಆಗಿಬಿಟ್ಟಿತ್ತು
·
ನೀ ಆಗಿನ್ನೂ ಹೆಜ್ಜೆಯಿಡಲು
ಪ್ರಾರಂಭಿಸಿದ್ದೆ. ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ, ಪ್ರದಕ್ಷಿಣೆ ಮಾಡುವಾಗ, ಅಲ್ಲಿಯ ಗೋಡೆಯ ಮೇಲಿದ್ದ
ಸುಂದರ ಕೆತ್ತನೆಗಳಲ್ಲಿ ಚಿತ್ರಿತವಾದ ದಶಾವತಾರ, ಆನೆ, ನವಿಲು ಇವುಗಳನ್ನು ನೀ
ಬೆರಗಿನಿಂದ ನೋಡುತ್ತಿದ್ದೆ. ಒಮ್ಮೊಮ್ಮೆ ಆನಂದದ ಕೇಕೆ ಹಾಗ್ತಿದ್ದೆ. ನಂತರ ಮಾತಾಡಲು
ಪ್ರಾರಂಭಿಸಿದಾಗ, ಒಂದೇ ಸಮನೆ ನಿನ್ನ ಪ್ರಶ್ನೆಗಳು.
ಅವರೆಲ್ಲಾ ಯಾರು, ಅದು ಏನು, ಇದು ಏನು, …..ಇತ್ಯಾದಿ.
·
ಕುಂಕುಮ ಪ್ರಸಾದವನ್ನು ( ನಿನ್ನ ಭಾಷೆಯಲ್ಲಿ ‘ಕುಂಕಿ’ ) ನಿನ್ನ ಹಣೆಗೆ ನೀನೇ
ಇಟ್ಟುಕೊಂಡು, ಜೊತೆಯಲ್ಲಿದ್ದ ಅಜ್ಜಿ/
ನಿನ್ನಮ್ಮನ , ಹಣೆಗೂ ಇಡುವ ಸಂಭ್ರಮ
·
ಅಮ್ಮನನ್ನೋ / ಅಜ್ಜಿಯನ್ನೋ ಅನುಕರಿಸಿ, ಸಾಷ್ಟಾಂಗ ನಮಸ್ಕಾರ ಮಾಡಿ, ನಂತರ ವಿಶೇಷ ಭಂಗಿಯಲ್ಲಿ ಕುಳಿತು , ತೊದಲುನುಡಿಯಲ್ಲಿ, “ಆಯಸ್ಸು, ಆರೋಗ್ಯ , ವಿದ್ಯೆ , ಬುದ್ಧಿ ಕೊಟ್ಟು ಒಳ್ಳೇದು
ಮಾಡಪ್ಪಾ” ಅಂತ ಪ್ರಾರ್ಥಿಸುವ ಪರಿ. ಆ ಆಂಜನೇಯನಿಗೆ ಪ್ರಿಯವಾಗ್ತಾ ಇತ್ತೋ ಇಲ್ಲವೋ ಗೊತ್ತಿಲ್ಲ, ಪ್ರದಕ್ಷಿಣೆ ಹಾಕ್ತಾ
ಇದ್ದ ಭಕ್ತರನ್ನಂತೂ ಆಕರ್ಷಿಸ್ತಾ ಇತ್ತು. ಅವರ ‘ಏಕಾಗ್ರತೆ’ ಯನ್ನು ಭಂಗಗೊಳಿಸ್ತಾ
ಇತ್ತು.
·
ನಂತರ ಆರತಿ ಹತ್ತಿರ ಪುಟ್ಟ ಕೈಗಳನ್ನು ಚಾಚಿ, ಕಣ್ಣಿಗೊಳ್ಳುವ ಸಂಭ್ರಮ
·
ಮಹಾ ಮಂಗಳಾತಿಯ ಸಂದರ್ಭದಲ್ಲಿ ಮೊಳಗುವ
ಗಂಟೆ, ಜಾಗಟೆ, ಶಂಖಗಳ ಸಮೂಹ ನಾದದ ಬೆರಗು
·
ನಂತರದ ‘ಮಂತ್ರಪುಷ್ಪ , “ಆಯತ ನವಾಂ ಭವತಿ...” ಯ
ಆಕರ್ಷಣೆ. ನೀನೂ ಅದನ್ನು ಗುನುಗುವುದನ್ನು ಕಲಿತೇ ಬಿಟ್ಟೆ.
·
“ ಶ್ರೀ ಶ್ರೀ ಶ್ರೀ ವರದಾಂಜನೇಯ ಸ್ವಾಮಿ
ಗೋವಿಂದಾ” ಎಂಬ ಅರ್ಚಕರ ಉದ್ಘೋಶಕ್ಕೆ, ನೀನು ಎತ್ತರದ ಮುದ್ದುಧ್ವನಿಯಲ್ಲಿ, “ ಗೋ..ವಿಂ..ದಾ” ಅಂತ ಪ್ರತಿಕ್ರಿಯಿಸ್ತಾ ಇದ್ದೆ. ಇದು ಒಂದು ಆಟವಾಗಿ
ಮನೆಯಲ್ಲೂ ಪುನರಾವರ್ತನೆಯಾಗ್ತಾ ಇತ್ತು.
·
ಮನೆಯಲ್ಲಿ ನಿನ್ನ ‘ದೇವಸ್ಥಾನದ ಪೂಜೆಯ
ಆಟ’ ; ಅಪ್ಪ , ಅಮ್ಮ , ಅಜ್ಜ. ಅಜ್ಜಿಯರಿಗೆ
ಪದೇ ಪದೇ ಆರತಿ-ತೀರ್ಥಪ್ರಸಾದದ ಕಾಟ.
·
ದೇವಸ್ಥಾನದ ‘ಹಾವು ಸ್ವಾಮಿ’ ( ನಾಗ ಪ್ರತಿಮೆ) , ‘ಒಂಭತ್ತು ಸ್ವಾಮಿ’ (ನವಗ್ರಹ ) ಮತ್ತು ಸುಂದರ , ವಿಶಾಲವಾದ ತುಳಸೀಕಟ್ಟೆಗೆ
ಪ್ರದಕ್ಷಿಣೆ.
·
ಅಂಬೆಗಾಲಿಟ್ಟು ಹರೆಯುವ ಹಂತದಿಂದ
ಪ್ರಾರಂಭಿಸಿ, ನಿಂತು, ನಡೆದು, ಎದ್ದು ಬಿದ್ದು, ಓಡುವ ಹಂತದ ವರೆಗೂ, ನಿನ್ನ ಬೆಳವಣಿಗೆಗೆ
ವೇದಿಕೆ ಮತ್ತು ಸಾಕ್ಷಿ, ಆ ದೇವಸ್ಥಾನದ ವಿಶಾಲವಾದ ಪ್ರಾಂಗಣ.
·
ಎಲ್ಲಕಿಂತಾ ಮುಖ್ಯವಾಗಿ, ಅಲ್ಲಿ ನೀ ಸಂಪಾದಿಸಿದ
ಕಿರಿಯ, ಹಿರಿಯ, ಅತಿ ಹಿರಿಯ ಸ್ನೇಹಿತರ ಬಗ್ಗೆ ನೆನಪಿಸಿಕೊಳ್ಳಲೇಬೇಕು.
·
ವರ್ಣಿಕಾ, ಅದ್ವೈತ್, ಅಥರ್ವ, ಶ್ರೀಯಾ, ……ಒಬ್ಬರೇ ಇಬ್ಬರೇ ...
ಉದ್ದನೆಯ ಪಟ್ಟಿ. ಇವರೆಲ್ಲಾ ನಿನ್ನ ‘ಸಮಕಾಲೀನ’ ರಾದರೆ,
·
ಚಿತ್ರಜ್ಜಿ, ಅಲ್ಲಿನ ಸೆಕ್ಯೂರಿಟಿ
ಮಾವಂದಿರು,.. ಇನ್ನೂ ಹಲವು ತಾತಂದಿರು …
·
ಅವರ್ ಜೊತೆ, ಮುದ್ದು ಮುದ್ದು
ಭಾಷೆಯಲ್ಲಿ, ನಿನ್ನ’ಸಾಹಸ ಕಥೆಗಳು’ , ಇನ್ನೂ ಪ್ರವೇಶಿಸಿದ capital school ಬಗ್ಗೆ ಕಲ್ಪಿತ
ಅನುಭವಗಳು.....ವಿನಿಮಯ
·
ಇದೆಲ್ಲದರ ಜೊತೆಗೆ, ಸರದಿಯಲ್ಲಿ ನಿಂತು, ‘ವಡೆ ,ಕೋಸುಂಬರಿ,ಪುಳಿಯೋಗರೆ
....ಬಾಳೆಹಣ್ಣು,
·
.. ಒಮ್ಮೊಮ್ಮೆ ಪಾನಕ ದ ‘ರುಚಿ’ ಯನ್ನೂ ಹಚ್ಚಿಸಿಕೊಂಡು ಬಿಟ್ಟಿದ್ದೆ
ನೀನು.
·
ಕೃಷ್ಣಾಷ್ತಮಿ ಪ್ರಯುಕ್ತ ‘ಕೃಷ್ಣನ ವೇಷ’ ದಲ್ಲಿ ನೀನು ಮಿಂಚಿದ
ಕ್ಷಣಗಳು ಕಣ್ಣಿಗೆ ಕಟ್ಟಿದ ಹಾಗಿದೆ.
ಒಂದು ಪುಟ್ಟ ಹಾಸ್ಯ ಪ್ರಸಂಗ :
ದೇವಸ್ಥಾನದಲ್ಲಿ ಆಟ ಆಡ್ತಾ
ಇದ್ದ ನೀನು “ಅಮ್ಮಾ ಹೊಟ್ಟೆನೋವು” ಅಂದೆ. “ ಸರಿ ಹಾಗಾದ್ರೆ, ಮನೆಗೆ ಹೋಪನಾ?” ಅಂತ ನಿನ್ನಮ್ಮ
ಕೇಳಿದ. ತುಂಟಿ ನೀನು, ಅಲ್ಲಿಂದ ಮನೆಗೆ
ಹೋಗುವುದಕ್ಕೆ ಇಷ್ಟ ಇರಲಿಲ್ಲ. ನಿನ್ನ ಥಟ್ ಅಂತ ಕೊಟ್ಟ ಉತ್ತರ –“ ಅಮ್ಮಾ, ಇರು ಸ್ವಲ್ಪ ಹೊತ್ತು, ವಡೆ
ಪ್ರಸಾದ ಕೊಡ್ತ. ಅದ್ನ
ತಿಂದಲೆ ಹೊಟ್ಟೆನೋವು ಹೋಗ್ತು”
ಒಟ್ಟಿನಲ್ಲಿ, ನಮಗೆ, ಪ್ರತಿ ಸಂಜೆ ‘ಆಂಜನೇಯ’ ಸನ್ನಿಧಿಯಲ್ಲಿ ದೊರೆಯುವ ಪುಣ್ಯದ ಜೊತೆಗೆ ನಿನ್ನ ಈ ‘ಸಾಮಾಜಿಕ’ ಚಟುವಟಿಕೆ’ ಗಳನ್ನು ಕಣ್ಣಲ್ಲಿ ತುಂಬಿಕೊಳ್ಳುವ ಸುವರ್ಣಾವಕಾಶ
-----
ನಾವು, ( ನೀನು, ನಾನು, ನಿನ್ನ ಅಮ್ಮ, ನಿನ್ನ ಅಜ್ಜಿ, ಬಿಡುವಾದಾಗ ನಿನ್ನಪ್ಪ ) , ಈ ಹಿಂದೆಯೇ
ತಿಳಿಸಿದ ಹಾಗೆ, ಸುಮಾರು 400 ಸಂಜೆಗಳನ್ನು. ಆ ದೇವಸ್ಥಾನದಲ್ಲಿ ಸಮಯವನ್ನು
ಸದ್ವಿನಿಯೋಗಿಸಿದ್ದೇವೆ ಅಥವಾ ಒಂದು ಅರ್ಥದಲ್ಲಿ ಸಮಯವನ್ನು ಹೂಡಿದ್ದೇವೆ- ಅಂದರೆ invest ಮಾಡಿದ್ದೇವೆ. ಸಮಯ ಕಳೆದಿದ್ದೇವೆ ಅನ್ನೋ ಪದವನ್ನು ನಾನು ಸಾಮಾನ್ಯವಾಗಿ ಬಳಸೋದಿಲ್ಲ. ಯಾಕೆ ‘ಹೂಡಿಕೆ’ ಅನ್ನೋ ಪದ ? ವ್ಯಾವಹಾರಿಕ
ಪ್ರಪಂಚದಲ್ಲಿ, ಯಾವುದೇ ಹೂಡಿಕೆಯ (investment) ಉದ್ದೇಶ , ಒಂದಲ್ಲಾ ಒಂದು ದಿನ Return-On- Investment ದೊರೆಯುತ್ತೆ ಎಂಬ ಭರವಸೆ. ಹಾಗಂತಾ ಇಲ್ಲಿ ಯಾವ ವ್ಯಾವಹಾರಿಕ ಉದ್ದೇಶವೂ ಇರಲಿಲ್ಲ.
ಮಕ್ಕಳ ಬಾಲ್ಯದಲ್ಲಿ, ಮಕ್ಕಳೊಂದಿಗೆ
ಪಾಲಕರು ಪ್ರಜ್ನಾಪೂರ್ವಕವಾಗಿ , ಜವಾಬ್ದಾರಿಯುತವಾಗಿ
ಸಮಯ ವಿನಿಯೋಗಿಸಿದರೆ ಆಗುವ ಎರಡು ಪ್ರಯೋಜನಗಳು :
1.
ಪಾಲಕರಿಗೆ ಸಿಗುವ ಖುಷಿ/ಆನಂದ
2.
ಮಗುವಿನ ಭವಿಷ್ಯದ ಜೀವನಕ್ಕೊಂದು ಸುಂದರ ಬುನಾದಿ/ಸಂಸ್ಕಾರ
ಇದು ಒಂದು ರೀತಿಯಲ್ಲಿ
ಕೊಡುವ – ಪಡೆಯುವ ಆಟ. ಇದರ ಕುರಿತು ಮುಂದೆ ವಿವರವಾಗಿ
ಬರೆಯುತ್ತೇನೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ