ಪತ್ರ - ಮೊಮ್ಮಗಳಿಗೆ -ಅಧ್ಯಾಯ 6 - 'ನಮ್ಮನೆ' ಯೊಳಗಿನ ನಿನ್ನ ಪ್ರಪಂಚ

 



ಅಧ್ಯಾಯ #6

ನಮ್ಮನೆಯೊಳಗೆ ನಿನ್ನ ಪ್ರಪಂಚ

ಬೆಳಿಗ್ಗೆ ಮಹಡಿಯಿಂದ ಮೆಟ್ಟಿಲಿಳಿದು ನೀ ಬರುವುದನ್ನು(ನಡೆಯುವುದಕ್ಕೂ ಮುನ್ನ ಅಮ್ಮ ಎತ್ತಿಕೊಂಡು ಬರ್ತಾ ಇದ್ಲು – ಈಗ ನೀನೇ ಮೆಲ್ಲಗೆ ಇಳಿದು ಬರ್ತಾ ಇದ್ದೀಯ ) ನೋಡುವುದೇ ನಮಗೆ ಚಂದ – ನಿನ್ನನ್ನು ಸ್ವಾಗತಿಸುವುದೇ ನಮಗೆ ಖುಷಿ.

Good Mo…rning ನಮ್ಮನೆ ಮುದ್ದು ಮುದ್ದು ದೇವತೆ – ಮುದ್ದು ಪುಟಾಣೀ”

ಅಜ್ಜನ ನುಡಿಗಳು

“ ಏಯ್..ಯಾರ  ಅವ .. ಕೋತಿ-ಮಂಗಣ್ಣನನ್ನು ಹಿಡ್ಕಂಡು ಬರ್ತಾಇರೋರು”

ಅಜ್ಜಿಯ ನುಡಿಗಳು{ ಪ್ರತಿದಿನ ಯಾವುದಾದರೂ ವಸ್ತುವನ್ನೋ/ ಗೊಂಬೆಯನ್ನೋ ಹಿಡಿದುಕೊಂಡು ಬರುವುದು ನಿನ್ನ ಅಭ್ಯಾಸ }

 ಈಗ ನೀನು ಮೆಟ್ಟಿಲಿನ ಅರ್ಧ ದಾರಿಯಲ್ಲಿಯೇ  ಕೂತ್ಕೊಂಡುಬಿಡ್ತೀಯ ,  ನಿನ್ನದೇ ಆದ ಭಾಷೆ-ಶೈಲಿಯಲ್ಲಿ ತೆಲೆ-ಬುಡವಿಲ್ಲದ ಕಥೆಯನ್ನು ಹೇಳ್ತಾ. 

“ ಅದೂ....ಅದೂ.... ಅದೂ....ಎಂತಾತು ಅಂದ್ರೆ ಗುಮ್ಮ ಬಂದು ಬಾಗ್ಲ್ ತಟ್ಟಿದ, ಆಲೋಹಿ ಬೆಣ್ಣೆ ತಿಂತಾ ಇದ್ದಿದ್ದ – ಇಂಡಿಗೋ ವಿಮಾನ ಹತ್ತಿಬಿಟ್ಟ ಆಲೋಹಿ, ಗುಮ್ಮ ಬಾ ..ಅಂದ ಆಲೋಹಿ”

...ಹೀಗೆ ಎಲ್ಲಿಂದೆಲ್ಲಿಗೋ ನಿನ್ನ ಕಥೆಯ ಹರವು

 

ನೀನು ಬಳಸುತ್ತಿದ್ದ ಪದ ನೀನು

ನಿನ್ನ ಭಾಷಾ ವ್ಯಾಕರಣದಲ್ಲಿ ,

ನಾನು’  ಎಂಬುದಕ್ಕೂ ನೀನು

ನೀನುಎಂಬುದಕ್ಕೂ ನೀನು

ನೀನು ಹೊರಗೆ ಹೋಗ್ತಿಅಂದರೆ ನಾನು ಹೊರಗೆ ಹೋಗ್ತೀನಿಅಂತ ಅರ್ಥ

ನೀನು ಹೊರಗೆ ಹೋಗುಅಂದರೆ ಮಾಮೂಲೀ ನಮಗೆಲ್ಲಾ ಗೊತ್ತಿರೋ ಅರ್ಥ

--------------

ಅಲ್ಲಾ ಮಾರಾಯ್ತಿ, ಒಂದು ವರ್ಷದೊಳಗೇ ನೀನು, “ ತಾಯೇ.........”  ಎಂಬ ಪದವನ್ನು  ಅಂತ ಎತ್ತರದ ಧ್ವನಿಯಲ್ಲಿ ಹಾಡ್ತಾ ಇದ್ದೆ. ಅಮ್ಮ ಹಾಡ್ತಾ ಇದ್ದ, ಬಿ.ಜಯಶ್ರೀ ಯವರು ಹಾಡಿದ  ಕರಿಮಾಯಿನಾಟಕದ ತಾಯೇ...ಹಾ.....ಸಾವಿರದ ಶರಣವ್ವ ಕರಿಮಾಯಿ ತಾಯಿ’  ಗೀತೆಯ ಸಾಲಿನಿಂದ ಪ್ರೇರಿತಳಾಗಿ.

 ನಿನ್ನ ಮಸ್ತ್ ಮಸ್ತ್ ಸಂಭಾಷಣೆ ಅಂದರೆ

ಮೊಬೈಲ್ ಫೋನ ನ್ನು , ಕಿವಿ ಮತ್ತು ಕುತ್ತಿಗೆ ನಡುವೆ  style ಆಗಿ ಇಟ್ಟ್ಕೊಂಡು ಸಾಗರದ ದತ್ತಜ್ಜನ ಜೊತೆ ಮಾತಾಡ್ತಾ ಇದ್ದದ್ದು

“ ಹೆಲೋ.....ಅದಾಮಾ.....ಅದಾಮಾ........ಅದಾಮಾ....”  {ಆರಾಮಾ ಅಂತ ಬೇರೆ ಬೇರೆ ಶ್ರುತಿಯಲ್ಲಿ ಕೇಳ್ತಾ ಇದ್ದದ್ದು  }.

ಸ್ವಾರಸ್ಯ ಅಂದ್ರೆ  ದತ್ತಜ್ಜನಿಗೆ connect ಮಾಡದೆಯೇ ನೀ ಮಾತಾಡ್ತಾ ಇದ್ದದ್ದನ್ನು ಮೂರನೆಯವರು ಕೇಳಿಸಿಕೊಂಡರೆ , ಒಂದು ನಿಜವಾದ ಲೈವ್ ಸಂಭಾಷಣೆ ಥರ ಕೇಳಿಸ್ತಾ ಇತ್ತು.

 

ಟಿ.ವಿ.ಯಲ್ಲಿ ಭಜನೆ, ಚಂಡೆ,ಸಂಗೀತ, ಟ್ರೈನ್ , ವಿಮಾನ, ಪ್ರಾಣಿ, ಪಕ್ಷಿ ವೀಕ್ಷಣೆ

ನಿನಗೆ ಟಿ.ವಿ.ಯಲ್ಲಿ Internet (Youtube )ಮೂಲಕ, ನಿಯಮಿತ ಸಮಯದಲ್ಲಿ

 ತೋರಿಸಲು ಪ್ರಾರಂಭಿಸಿದ್ದು ಮೂರು  ಬಗೆಯ ಕಾರ್ಯಕ್ರಮಗಳು .

1.             ಕಲಾ ಪ್ರದರ್ಶನ

ಸ್ತೋತ್ರ ,  ಭಜನೆ, ಚಂಡೆ, ಸಂಗೀತ, ಭರತ ನಾಟ್ಯ, ಯಕ್ಷಗಾನ 

2.            ಪ್ರಕೃತಿ – ವಾಹನ

ನದಿ, ಜಲಪಾತ, ಪ್ರಾಣಿ, ಪಕ್ಷಿ

3.            ವಾಹನ

ಬಗೆ ಬಗೆಯ Trains, ವಿಮಾನ

ನಿನ್ನಪ್ಪನ ಕಟ್ಟುನಿಟ್ಟಿನ ಆಜ್ನೆ / ಶಿಸ್ತು

·               ಯಾವುದೇ ಕಾರಣಕ್ಕೂ, ಈಗಲೇ ಕಾರ್ಟೂನ್ ವಿಡಿಯೋಗಳನ್ನು ತೋರಿಸಬಾರದು

·               ಮೊಬೈಲ್ ನಲ್ಲಿ ಏನನ್ನೂ ತೋರಿಸಬಾರದು. ನಾವು ಮೊಬೈಲ್ ನಲ್ಲಿ ಕ್ಲಿಕ್ಕಿಸಿದ ಫೋಟೋ – ವಿಡಿಯೋಗಳನ್ನೂ TV ಗೇ chromcast ಮಾಡಿಸಿ ತೋರಿಸುವುದು.

ಈ ಶಿಸ್ತು, ಸಧ್ಯಕ್ಕಂತೂ ಪರಿಣಾಮಕಾರಿ. ನಿನ್ನ ವಯಸ್ಸಿನ ಮಕ್ಕಳ ತಂದೆ, ತಾಯಿಯರು , ತಮ್ಮ  ಕೆಲಸವನ್ನು ಸುಲಭ ಮಾಡಿಕೊಳ್ಳುವುದಕ್ಕೆ , ಮಗುವನ್ನು ಈಗಲೇ ಮೊಬೈಲ್ ವ್ಯಸನಿ ಯನ್ನಾಗಿ ಮಾಡಿರುವುದನ್ನು ನಾವು ಗಮನಿಸಿದ್ದೇವೆ..

 ನಮಗೆ ತೃಪ್ತಿ- ಸಂತಸ ತಂದಿರೋ ವಿಚಾರ ಅಂದರೆ , ನಿನ್ನ ಆಸಕ್ತಿಯನ್ನು  ಸಂಗೀತದ ಕಡೆಗೆ ಸೆಳೆಯಲು ಪ್ರಾಥಮಿಕ ಹಂತದಲ್ಲಿ ನಾವು ಯಶಸ್ವಿಯಾದದ್ದು. 2 ವರ್ಷ ತುಂಬುವ ವೇಳೆಗಾಗಲೇ , ಇಡೀ ದಿನ , ಒಂದಲ್ಲಾ ಒಂದು ಶ್ಲೋಕವನ್ನೋ, ಭಜನೆಯನ್ನೋ, ಹಾಡನ್ನೋ ನೀ ಗುನುಗ್ತಾ ಇರೋದು.

 ಸಹಜವಾಗಿಯೇ , ಎಲ್ಲಾ ಮಕ್ಕಳಂತೆಯೇ , ನೀನೂ  dance ಕಾರ್ಯಕ್ರಮಗಳಿಗೆ ಆಕರ್ಷಿತಳಾಗಿ, ನಿನ್ನದೇ ಶೈಲಿಯಲ್ಲಿ ಯಾವಾಗಲೂ ಕುಣಿಯುತ್ತಾಇರೋದನ್ನು ನೋಡುವುದಕ್ಕೇ ಚಂದ.

 ಅಜ್ಜ-ಅಜ್ಜಿ ಮಂಚ – ನಿನ್ನ ಪ್ರದರ್ಶನ ವೇದಿಕೆ

ನಮ್ಮ ಮಂಚದ ಮೇಲೆ ಥರ ಥರದ ಭಂಗಿಯಲ್ಲಿ ಕುಣಿಯೋದು ಅದೆಷ್ಟು ಖುಷೀನೋ ನಿನಗೆ. ಕೀಬೋರ್ಡ್ ನಲ್ಲಿ ತಾಳವಾದ್ಯಗಳ ಜೊತೆ ನಾನು ಸಂಗೀತ ನುಡಿಸೋದು , ಅದಕ್ಕೆ ನೀನು ಡ್ಯಾನ್ಸ್ ಮಾಡೋದು. ನಾವು ನಾಲ್ವರೂ ವೀಕ್ಷಕರೂ ಇರಲೇಬೇಕು ನಿನ್ನ ಪ್ರತಿಭಾ ಪ್ರದರ್ಶನ ವೀಕ್ಷಣೆಗೆ. ಯಾವಾಗ ಮಂಚದಿಂದ ಬಿದ್ದುಬಿಡ್ತೀಯೋ ಎಂಬ ಆತಂಕದಿಂದಾಗಿ, ಇಡೀ ಮಂಚದ ಪರಿಧಿಯಲ್ಲಿ, ಅಲ್ಲಿರುವ ದಿಂಬು, ಚಾದರಗಳ ಭದ್ರ ಬೇಲಿ’.

ಒಂದಷ್ಟು ದಿನ ನೀನು ಚಪ್ಪಾಳೆಗೆ ಹೆದರ್ತಾ ಇದ್ದೆ. ನಾವು ಚಪ್ಪಾಳೆ ಹಾಕುವಂತಿರ್ಲಿಲ್ಲ. ಆದರೆ,  ಅನಿರೀಕ್ಷಿತವಾಗಿ, ನಿನ್ನಿಂದ ಮಿಂಚುವ ನೃತ್ಯದ ಹೆಜ್ಜೆಯೋ, ಮರುಳು ಮಾತಿನಿಂದಾಗಿ, ನಮಗರಿವಿಲ್ಲದಂತೆಯೇ ನಮ್ಮ reflex - ಚಪ್ಪಾಳೆ, “ವಾ.ವ್..ಶಹಬ್ಬಾಸ್” ಗದ್ದಲ.ಅದು ಗುಡುಗು, ಸಿಡಿಲಿನಂತೆ ನಿನ್ನ ಮೇಲೆ ಎರಗಿ, ನಿನ್ನ ಅಳುವಿನ ಮಳೆಯೋ ಮಳೆ.

·      ದೇವರ ಪೀಠದಲ್ಲಿನ ಗಣಪತಿ, ದೇವಿ, …ಪುಟ್ಟ ಮೂರ್ತಿಗಳು ಒಂದೊಂದು ದಿನ ಮಾಯ. ಕದಿಯುವವಳು ಮತ್ಯಾರೂ ಅಲ್ಲ. ಖತರ್ನಾಕ್ ಕಿಲಾಡಿ ನೀನೇ. ಆ ಪುಟ್ಟ ವಿಗ್ರಹಗಳನ್ನು ನಿನಗೆ ಬೇಕಾದ ಹಾಗೆ ಚೆಲ್ಲಾಪಿಲ್ಲಿಯಾಗಿ ಹರಡಿ ಖುಷಿಪಡ್ತಿದ್ದೆ. ಒಮ್ಮೊಮ್ಮೆ ಅವುಗಳನ್ನು  ಬೇರೆ ಕೊಠಡಿಗಳಿಗೆ ಒಯ್ದು ನಿನ್ನ ಇತರೆ ಗೊಂಬೆಗಳ ನಡುವೆ ಸೇರಿಸಿಡ್ತಿದ್ದೆ.

·      ಇನ್ನೂ ಸ್ವಾರಸ್ಯ ಅಂದರೆ, ಆ ವಿಗ್ರಹಗಳನ್ನೆಲ್ಲಾ ಎಬ್ಬಿಸಿ, ಆ ಸ್ಥಾನದಲ್ಲಿ ನೀನು ಕುಳಿತಿರ್ತಿದ್ದೆ. ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಕ್ಕೆಆ  ದೇವರು ಗಳು ನಿನ್ನ ಮೇಲೆ ಮುನಿಸಿಕೊಂಡಿದ್ದಂತೂ ನಾ ಕಾಣೆ. ಬದಲಾಗಿ ನಿನ್ನ ಆಟವನ್ನು ಖುಷಿಪಡ್ತಾ ಇದ್ದರೇನೋ!!?. ನಮಗೆ ಹ್ಯಾಗೆ ಗೊತ್ತಾಗಬೇಕು? ದೇವರು  ಮಾತಾಡುವುದಿಲ್ಲವಲ್ಲ? ಎಲ್ಲವೂ ಭಕ್ತನ ಕಲ್ಪನೆ-ಪರಿಕಲ್ಪನೆ.  ಇಷ್ಟಕ್ಕೂ ಮಕ್ಕಳು ದೇವರ ಸಮಾನಅಂತ  ಭಕ್ತರೇ ಮಾಡಿರುವ ಶಾಸನ. ನಿನ್ನಲ್ಲಿಯೇ ಆ ಎಲ್ಲಾ ದೇವರನ್ನೂ ಕಂಡು ಕೈ ಮುಗೀತೇವೆ ಅಂತ ಅವರಿಗೆ ಗೊತ್ತು.

·      ಅಜ್ಜಿ ತೊಡೆಯ ಮೆಲೆ ಕುಳಿತು ಆನೆ ಬಂತಾನೆ, ಯಾವೂರಾನೆ..” ತೂಗಾಟ

·      ಅಜ್ಜಿ ತನ್ನ ಕಾಲಮೇಲೆ ನಿನ್ನನ್ನು ಅಂಗಾತ ಮಲಗಿಸಿ ಕೊಬ್ಬರಿ ಎಣ್ಣೆ massage ,, ಕಡೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಸವಿಯುವ ನಿನ್ನ ಪರಿಪಾಠ

·      ಅಮ್ಮನ ಜೊತೆಗೆಂತೂ , ಸಹಜವಾಗಿ ಎಲ್ಲಾ ಮಕ್ಕಳೂ ಮಾಡುವ ಹಾಗೆ, ಥರೇವಾರೀ ಭಾವನೆಗಳು – ಕ್ರಿಯೆಗಳು : ಮುದ್ದು , ಸಿಟ್ಟು , ಅಳು, ಗಿಟಿಗಿಟಿ ನಗು

·       ನಿನ್ನ ವಿಶೇಷ ಪುಟ್ಟ ಸಿಂಹಾಸನದಲ್ಲಿ ಕುಳಿತು ನೀ ಮಮ್ ಮಮ್ಮ್ಮಾಡ್ತಾ ಇದ್ದ ರೀತಿ,   ಇಡೀ ಮುಖಕ್ಕೆಲ್ಲಾ ಮೊಸರು ಮೆತ್ತಿಕೊಳ್ಳುತ್ತಿದ್ದ ನಿನ್ನ ಅವತಾರ

·      ಅಪ್ಪನ ಮಡಿಲಲ್ಲಿ ಕುಳಿತು ಆತ ಕಾಫಿಕುಡಿಯುವುದನ್ನು ಪಾಪದವಳಂತೆ ಬಿಟ್ಟ ಕಣ್ಣುಗಳಿಂದ ನೋಡ್ತಾ ಇದ್ದ ರೀತಿ.

·      ಅಪ್ಪನ ತಲೆಗೆ ನಿನ್ನ ಪುಟ್ಟ ಕೈಗಳಿಂದ ಬಡಿದು ಮಾಡ್ತಾ ಇದ್ದ  massage ,,

 

.... ಒಂದೇ ..ಎರಡೇ....

ಹೀಗೇ ಹತ್ತಾರು ಹಲವಾರು ಚಟುವಟಿಕೆಗಳಿಗೆ ನಾವು ನಾಲ್ವರೂ ಪ್ರೇಕ್ಷಕರು, ವೀಕ್ಷಕರು.

ಒಟ್ಟಿನಲ್ಲಿ , ಸದಾ ನಿನ್ನ ತೊದಲು ನುಡಿ, ಕೇಕೆ, ನಗು, ಅಳು, ನೃತ್ಯ, ನಮ್ಮನೆಯೊಳಗೆ ಎಷ್ಟು ಬೆರೆತು ಹೋಗಿದೆ  ಅಂದರೆ, ಕೇವಲ 2 ವರ್ಷಗಳ ಹಿಂದೆ ಪ್ರವೇಶಿಸಿದ ನೀನು ಅದೆಷ್ಟೋ ವರ್ಷಗಳಿಂದ ಈ ಮನೆಯ ಸದಸ್ಯೆಯೇನೋ ಎಂಬ ಭಾವ.

ನಿನ್ನ ಚಟುವಟಿಕೆಗಳಿಂದ ಪ್ರೇರಿತನಾಗಿ, ಒಂದು ಸರಳ ಕವಿತೆ ರಚಿಸಿದೆ. ನೀನು ಹಾಡಿದಂತೆ ಕಲ್ಪಿಸಿ.  

Artificial Intelligence(AI) ಅಲೆ, ತ್ಸುನಾಮಿಯಬ್ಬರದ ಈ ಹೊಸ ಯುಗದಲ್ಲಿ, AI Music generation ತಂತ್ರಜ್ನಾನವನ್ನು ಕಲಿಯುವ  ಕುತೂಹಲದಿಂದ ಒಂದಷ್ಟು ದಿನಗಳ ಅಧ್ಯಯನ ಪ್ರಯೋಗ ಮಾಡಿ, ಈ ಕವಿತೆಯನ್ನು AI ಗಾಯಕಿಯ ಮೂಲಕ ಹಾಡಿಸಿ, ನಿನಗೇ ಉಡುಗೊರೆಯಾಗಿ ಕೊಡ್ತಾ ಇದ್ದೀನಿ. 

“ನಮ್ಮನೆ ನಮ್ಮನೆ ನಮ್ಮನೆ ...ಚಂದ ಛಂದ ಚಂದ ಛಂದ ನಮ್ಮನೆ ”

https://youtu.be/zL-XlUyVGD4?si=2ag0pVvpweeDU5GG


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ