ಪತ್ರ -ಮೊಮ್ಮಗಳಿಗೆ - ಅಧ್ಯಾಯ 2 - ನೀನೂ -ನಾನೂ Morning Walking
ಅಧ್ಯಾಯ
2
Morning Walk – ಬೆಳಗಿನ
ವಿಹಾರ
ಪ್ರತಿದಿನ ಬೆಳಿಗ್ಗೆ
ನಾವಿಬ್ಬರೂ ಮಾಡುತ್ತಿದ್ದ morning
walk ಅಂದರೆ , ನಿನ್ನನ್ನು ಪ್ರತಿ ಬೆಳಿಗ್ಗೆ ಎತ್ತಿಕೊಂಡು, ನಮ್ಮ
ಬಡಾವಣೆಯಲ್ಲಿಯೇ ನೂರಿನ್ನೂರು ಮೀಟರ್, ನಾ ನಡೆಯೋದು. ಅಂದರೆ walking
ನನ್ನದು
,
ಅಜ್ಜನ
ಮಡಿಲಿನಲ್ಲಿ ಕುಳಿತು, ಬೆರಗಿನಿಂದ,
ಪ್ರಪಂಚದ
watching
(
ಪರಿವೀಕ್ಷಣೆ ) ನಿನ್ನದು.
ಮಗುವಾಗಿದ್ದಾಗ ಪ್ರತಿ ವಸ್ತು, ಶಬ್ಧ, ಜೀವಿ ಎಲ್ಲವೂ ಬೆರಗು. ಮಗುವಿನ ಬೆರಗಿನ ಕಣ್ಣುಗಳು , ಹಾವ ಭಾವಗಳೇ, ನಮಗೆ (ದೊಡ್ಡವರಿಗೆ ) ಬೆರಗು, ಆನಂದ. ಇದನ್ನು ಆನಂದಿಸುವ ಮನೋಭಾವ ಇರುವವರಿಗೆ ಮಾತ್ರ( ಭಾವಜೀವಿಗಳಿಗೆ, ಕವಿ, ಕಲಾವಿದ ಹೃದಯ ಇರುವವರಿಗೆ) ಇದು ಸಾಧ್ಯ. ಕೇವಲ ವ್ಯಾವಾಹಾರಿಕ ಮನೋಭಾವವುಳ್ಳವರಿಗೆ ಇದೆಲ್ಲಾ ಹುಚ್ಚು ಅನಿಸುತ್ತೆ.
ಬಡಾವಣೆಯ
ಕೆಲವು ಮನೆಗಳ ದ್ವಾರದ ಬಳಿಯ, ನಾಮಫಲಕಗಳ ಜೊತೆಯ ಚಿತ್ರಗಳು ( ಓಂ, ಗಣಪತಿ, ವೆಂಕಟೇಶ..) .
ಅದಕ್ಕೆ ಪೂರಕವಾಗಿ ನಾನು ಮಾಡುತ್ತಿದ್ದ ಶಬ್ದಗಳು. ನಿನ್ನದೇ ಆದ
ಧ್ವನಿಯಲ್ಲಿ ಸ್ಪಂದನ.
ನಿನ್ನ
ಮೇಲೆ ‘ನಮ್ಮನೆ ಪರಿವಾರ’ ದ
ನಿರಂತರ ಧ್ವನಿಧಾರೆ
ಸಂಗೀತ ನನ್ನ ಹವ್ಯಾಸವಾದ್ದರಿಂದ , ಸದಾ ಏನನ್ನಾದರೂ ಸಂಗೀತಮಯವಾಗಿ ಶಬ್ದ ಮಾಡುವ ಚಪಲ ನನಗೆ. ಏನನ್ನಾದರೂ humming,
ಗುನುಗುಡ್ತಾ ಇರೋದು. ಹಾಡಿಕೊಳ್ಳೋದು ( ಉದಾಹರಣೆಗೆ, ರಂಗಗೀತೆ “ಸ್ವಾಮಿ ನಮ್ಮಯ ದ್ಯಾವಾರೋ , ಢಂಢಂ ಇದರಾ ಹೆಸರೋ ) ,
ಬಾಯಿಂದಾನೇ ‘ತಾಳವಾದ್ಯ’ ವಾದನ, ತಬಲಾ , ಮೃದಂಗ, ಢೋಲಕ್ ( ದುಂ ದುಂ ತಕ. ತಕ )
ಸಿಳ್ಳಿಯಲ್ಲಿ ಕೋಗಿಲೆ ಥರ ‘ಕುಹೂ ಕುಹೂ’
ಈ ‘ ಹುಚ್ಚು ಪ್ರತಿಭೆ ’ , ಜೊತೆಗಿರುವ
ದೊಡ್ಡೋರಿಗೆ ಕಿರಿ ಕಿರಿ ; ಅದರೆ ಕೇವಲ
ಶಬ್ಧವನ್ನು ಗ್ರಹಿಸುವ ಹಂತದಲ್ಲಿದ್ದ ನಿನ್ನನ್ನು ಆಕರ್ಷಿಸುತ್ತಾ ಇತ್ತು. ಹಾಗಾಗಿ ನಾನು ನಿನಗೆ
ಅಚ್ಚುಮೆಚ್ಚಿನ ‘ಸ್ನೇಹಿತ’ ನಾಗಿಬಿಟ್ಟೆ
ನಿನಗೆ 2 ವರ್ಷ ತುಂಬುವುದರೊಳಗೇ.
ಸಾಗರದ ನಿನ್ನ ದತ್ತಜ್ಜನಂತೂ ತನ್ನ ಹರಿಕೀರ್ತನದ ಮಟ್ಟುಗಳನ್ನೂ ಚಿತ್ರ, ವಿಚಿತ್ರ
ಶಬ್ದಗಳನ್ನೂ ಮಾಡಿ ನಿನ್ನನ್ನು ಒಮ್ಮೊಮ್ಮೆ ‘ಮಂತ್ರಮುಗ್ಧಳನ್ನಾಗಿ’ , ಒಮ್ಮೊಮ್ಮೆ ‘ಗಿಟಿ ಗಿಟಿ’ ನಗುವಂತೆ
ಮಾಡ್ತಾ ಇದ್ದ.
ನಿನ್ನಮ್ಮನಂತೂ ನುರಿತ ಗಾಯಕಿ. ತಾಯಿಸಹಜ ‘ಜೋಗುಳ’ ದ ಜೊತೆ , ಮಧುರವಾದ
ಗಾಯನ ವೃಷ್ಟಿ ನಿನ್ನ ಮೇಲೆ. ಜೊತೆಗೆ ಥರೇವಾರೀ ‘ಮಳ್ ಮಳ್’ ಸಂಭಾಷಣೆಗಳು.
ಅಪ್ಪನಿಂದಲೂ ನಿನಗೆ ಅಪ್ಯಾಯಮಾನವಾಗುವಂತಹ ನಾಟಕೀಯ ಸಂಭಾಷಣೆ, ಬಗೆ ಬಗೆಯ
ಬಾಲಿವುಡ್ , ಆಂಗ್ಲ
ಗಾಯನದ ಕಚಗುಳಿ ನಿನಗೆ.
ವಿಜೂ ಅಜ್ಜಿಯಂತೂ , ಮುದ್ದು ಮುದ್ದು ಭಾಷೆಯಲ್ಲಿ ಮಕ್ಕಳನ್ನು ಆಡಿಸುವುದರಲ್ಲಿ ಪ್ರವೀಣೆ.
“ಓನು ಪುಟ್ಟಾ..ಚಿನ್ನಾ..ಬಂಗಾರೀ .....” ಪದಗಳನ್ನು ವಿಶೇಷ
ಮಕ್ಕಳ accent ನಲ್ಲಿ
ಹೇಳುವುದೂ ಒಂದು ಪುಟ್ಟ ಕಲೆ. ನನಗಂತೂ ಬರೋದಿಲ್ಲ.
ಅದು ಅವಳು
ಬಾಲ್ಯದಲ್ಲಿಯೇ ಸ್ವಾಭಾವಿಕವಾಗಿ ಕಲಿತ ಕಲೆ. ಮುಗದೂರಿನ ಅವಳ ತವರುಮನೆಯಲ್ಲಿ , ತುಂಬಿದ
ಕುಟುಂಬದಲ್ಲಿ, ಅಣ್ಣನ
ಮಕ್ಕಳು, ಅಕ್ಕನ
ಮಕ್ಕಳನ್ನು ಎತ್ತಿ ಆಡಿಸುವ ಪ್ರಕ್ರಿಯೆಯಲ್ಲಿ ಕಲಿತ ವಿಶೇಷ ಭಾಷೆ ಅದು.
ಒಂದಂತೂ
ಸತ್ಯ;
ನಾವು
ಕನ್ನಡದಲ್ಲಿಯೋ , ಇಂಗ್ಲಿಷ್ ಭಾಷೆಯಲ್ಲಿಯೋ
ಪ್ರಖಾಂಡ ಪಂಡಿತರಾಗಿರಬಹುದು. ಅನುಭವಸ್ತರಾಗಿರಬಹುದು. ನಿರಕ್ಷರಸ್ತ ,
ಆದರೆ
ತನ್ನದೇ ಆದ ಭಾಷೆಯಲ್ಲಿ ಸಂವಹನ ಮಾಡುವ ಒಂದು ಮಗುವಿನೊಂದಿಗೆ ಸಂಭಾಷಿಸುವುದು ಖಂಡಿತಾ ಸುಲಭವಲ್ಲ.
ಒಬ್ಬ ‘ತಾಯಿ’
ಮಾತ್ರ
ಪೂರ್ಣ ಪರಿಣಾಮಕಾರಿಯಾಗಿ ಮಗುವಿನ ಭಾಷೆಯನ್ನು ಅರ್ಥ ಮಾಡಿಕೊಳ್ಳಬಲ್ಲಳು. ಆದರಿಂದಲೇ ತಾಯಿ ಅನನ್ಯ, ಅನುಪಮ,
ನಿರುಪಮ.
ಒಂದೂವರೆ
ವರ್ಷಕ್ಕೇನೇ ನೀನು ತೊದಲು ನುಡಿಯಲ್ಲಿ ಪೂರ್ತಿ ವಾಕ್ಯವನ್ನು ಮಾತಾಡ್ತಾ ಇದ್ಯಲ್ಲಾ? ಅದಕ್ಕೆ
ಕಾರಣ ಈ ನಮ್ಮ ನಿರಂತರ ಧ್ವನಿಧಾರೆ
ನಡೆಯಲು ಕಲಿತ
ಪ್ರಾರಂಭದಲ್ಲಿ- ಯಾವುದಾದರೂ ಮೆಟ್ಟಿಲು ಕಂಡರೆ – ‘ಹತ್ತು-ಹತ್ತು’ ಅಂತ ಹತ್ತಲು ಪ್ರಯತ್ನಿಸುವ ನಿನ್ನ ಧಾವಂತ – ನೀನೆಲ್ಲಿ ಬಿದ್ದು
ಪೆಟ್ಟುಮಾಡಿಕೊಂಡು ಬಿಡ್ತೀಯೋ ಎಂಬ ನನ್ನ ಆತಂಕ – ನಿನ್ನನ್ನು ಬೀಳದಂತೆ ನೋಡಿಕೊಳ್ಳುವ
ಒತ್ತಡ.
ನಮ್ಮನೆಯಿಂದ
500 ಮೀಟರ್ ವ್ಯಾಸದಲ್ಲಿ , ನೀ ಸ್ಥಾಪಿಸಿದ / ಗುರುತಿಸಿದ ‘ಆರೋಹಿ’ ಕಟ್ಟೆಗಳು
·
ಕಾಕಲ್ ಕೈ
ಕಟ್ಟೆ’ ( ಕಾಕಲ್ ಕೈ
ರುಚಿ ಹೋಟೆಲ್ ನ ಕಟ್ಟೆ )
·
BBMP ಆವರಣದ ಧ್ವಜಸ್ತಂಬದ ಕಟ್ಟೆ
·
ಒಂದು real estate ಅಂಗಡಿಯ
ಕಟ್ಟೆ
·
ಒಂದು
ಬಟ್ಟೆಅಂಗಡಿ ಕಟ್ಟೆ
ಇತ್ಯಾದಿ
ನಡೆದುಕೊಂಡೋ ಅಥವಾ
ತಳ್ಳುಸೈಕಲ್ ನಲ್ಲಿಯೋ ನಿನ್ನನ್ನು ಕರೆದುಕೊಂಡು ಹೋಗುವಾಗ, ಈ ‘ಆರೋಹಿ ಕಟ್ಟೆ’ ಕಂಡ ಕೂಡಲೇ, ಅಲ್ಲಿ ತಾತ್ಕಾಲಿಕ ವಿಶ್ರಾಂತಿ ತೆಗೆದುಕೊಳ್ಳುವ ತವಕ ನಿನಗೆ.
“ ಅಜ್ಜ , ಆಲೋಹಿ ಕಟ್ಟೆ
ಮೇಲೆ ಕೂತಂಬನಾ? ’ ಅಂತ ನಿನ್ನ
ಮುದ್ದು ಭಾಷೇಲಿ ಹೇಳ್ತಿದ್ದೆ. ಅಲ್ಲಿ ಕುಳಿತು, ಸಣ್ಣಪುಟ್ಟ ಆಟಗಳು ನಮ್ಮದು.
ನನ್ನ ಒಂದು
ಅಂಗೈಯನ್ನು ಇನ್ನೊಂದು ಅಂಗೈಯೊಳಗೆ
ಮುಚ್ಚಿಟ್ಟುಕೊಂಡು ಮಧ್ಯದ ಬೆರಳನ್ನು ಹುಡುಕುವ ಆಟ. ನೀನು ನಿನ್ನ ಪುಟ್ಟ ಮೃದು ಕೈಯಲ್ಲಿ
ಅದನ್ನುಪುನರಾವರ್ತಿಸುತ್ತಿದ್ದೆ.
ನನ್ನ ಕರವಸ್ತ್ರದಲ್ಲಿ ‘ಇಲಿ’ ಸೃಷ್ಟಿ
ಮಾಡಿ, ಅದಕ್ಕೆ ಜೀವ
ತರಿಸಿದ ಹಾಗೆ ನಾಟಕ ಮಾಡಿ, ಅದು ಚಂಗನೆ ಜಿಗಿಯುವ ಹಾಗೆ ಮಾಡಿದಾಗ, ನಿನ್ನ ಮುದ್ದು ಬಾಯಿಯಿಂದ ಕಿಲಕಿಲನೆ ಹರಿಯುವ ಲಹರಿಯನ್ನು
ಆನಂದಿಸುವುದೇ ನನಗೆ ಅಪೂರ್ವ ಅನುಭವ .
ನನ್ನ ಮೊಬೈಲ್ ನಲ್ಲಿ
‘ಚಪ್ಪಾಳೆ
ಚಪ್ಪಾಳೆ’
‘ಮುತ್ತ
ಮುತ್ತ ಮುತ್ತ ಚಿನ್ನಾರಿ ಮುತ್ತ’
‘ಅ ಆ ಇ ಈ
ಕನ್ನಡದಾ ಅಕ್ಷರ ಮಾಲೆ’
ಈ ಗೀತೆಗಳನ್ನು ಕೇಳಿಸ್ತಾ
ಇದ್ದೆ. ನೀನೂ ಚಪ್ಪಾಳೆ ಹಾಕ್ತಾ ಅದನ್ನು ಕೇಳ್ತಾ ಇದ್ದೆ.
ಬಟ್ಲು-
ಬಟ್ಲು– ಸುಬ್ಬಾ ಬಟ್ಲೂ...
ಇಲ್ಲಿನ ಪ್ರಸಿದ್ಧ
ರೆಸ್ಟೋರೆಂಟ್ ‘ದಕ್ಷಿಣ್
ಕೆಫೆ’ ಯ ಮುಂದೆ
ಗ್ರಾಹಕರನ್ನು ಆಕರ್ಷಿಸಲು ಸ್ಥಾಪಿತವಾದ ಒಂದು ಅಡುಗೆ ಬಟ್ಟರ , ಎತ್ತರದ ವಿಸ್ತಾರವಾದ
ಬಿತ್ತಿಚಿತ್ರವನ್ನು ನೋಡಿದ ಕೂಡಲೇ ನೀ ಜೋರಾಗಿ
ಕೂಗ್ತಿದ್ದೆ “ ಬಟ್ಲು ಬಟ್ಲೂ....ಸುಬ್ಬಾಬಟ್ಲು” ಅಂತ. (ಸುಬ್ಬಾಬಟ್ಟ ಅಂತ ನಾಮಕರಣ ಮಾಡಿದ್ದು, ಈ ನಿನ್ನ
ಮಳ್ ಅಜ್ಜ ) ಆ ಚಿತ್ರದಲ್ಲಿನ ‘ಸುಬ್ಬಾ
ಬಟ್ಟ’ ಇಡ್ಲಿ, ವಡೆ, ದೋಸೆ, ಉಪ್ಪಿಟ್ಟಿನ
ಮಧ್ಯೆ ನಿಂತು, ಎರಡೂ ಕೈ ಅಗಲಕ್ಕೆ ಚಾಚಿ, ಗ್ರಾಹಕರನ್ನು
ಸ್ವಾಗತಿಸುವ ಭಂಗಿ ಎಂಥವರನ್ನೂ ಆಕರ್ಷಿಸ್ತಾ ಇತ್ತು.
ನಮ್ಮ ಬೆಳಗಿನ ವಿಹಾರದಲ್ಲಿ, ಅಲ್ಲಿ ಐದು
ನಿಮಿಷ ನಿಂತು, ಸುಬ್ಬಾಭಟ್ಟರ
ಕೈಗೆ ಒಂದು ‘hifi’ ಕೊಟ್ಟು
ಬರುವುದು ಸಂಪ್ರದಾಯವಾಗಿತ್ತು.
‘ದಕ್ಷಿಣ್ ಕೆಫೆ’ ನಮ್ಮನೆ
ಪತ್ತೆ ಹಚ್ಚಲು LAND MARK ಅಂತ ನಿನ್ನೊಳಗೆ ಅಚ್ಚೊತ್ತಿಬಿಟ್ಟಿತ್ತು. ಹಾಗಾಗಿ.
ನಾವು ಎಲ್ಲೇ ತಿರುಗಾಡಿಕೊಂಡು ಬಂದರೂ, “ನಮ್ಮನೆ ಬಂತು” ಅಂತ ಕಿರುಚ್ತಾ ಇದ್ದೆ ನೀನು.
ಸ್ವಲ್ಪ ದೂರದಲ್ಲೇ ನೀ
ಮೂಗು ಮುಚ್ಕೋತಾ ಇದ್ದೆ. ‘ವಾಸ್ನೆ, ವಾಸ್ನೆ’ ಅಂತ. ಯಾಕೇ ಅಂದ್ರೆ, ಅಲ್ಲಿದ್ದದು
ಚಿಕನ್ – ಮಟ್ಟನ್ ಅಂಗಡಿ. ನಿನ್ನ ಮೂಗೋ , ಬಹಳ ಸೂಕ್ಷ್ಮ ಇತ್ತು.
ಅಂದಹಾಗೆ, ಈ ‘ಬಟ್ರೂ, ಆರೋಹಿ
ಕಟ್ಟೆ, ಕೋಳಿವಾಸನೆ….” ಈ ಪದಗಳ
ಪರಿಚಯ, ಅರಿವು
ನಿನಗೆ ಬಂದದ್ದು, ನಾವು ನಿನಗೆ
ಹೇಳಿಕೊಟ್ಟಿದ್ದರಿಂದ, ನಾವು ಮಾತಾಡಿಕೊಂಡದ್ದರಿಂದ.
ಇದು ನನ್ನ-ನಿನ್ನ ನೆಚ್ಚಿನ ಸ್ಥಳ. ಬೆಳಿಗ್ಗೆ ಸುಮಾರು 10 ರಿಂದ 11 ರ
ವೇಳೆಗೆ, ಸುಮಾರು 45
ನಿಮಿಷ , ನನ್ನ-ನಿನ್ನ
ವಿಹಾರ.
ಸೂರ್ಯನ ರಶ್ಮಿಯೇ ಬೀಳದ
ಉದ್ಯಾನವನ , ನಮ್ಮನೆ ಗೆ
ಹತ್ತಿರ ಇದ್ದದ್ದು ನಮ್ಮ ಅದೃಷ್ಟವೇ ಸರಿ. ಎಂತಹ ಬೇಸಿಗೆಯಲ್ಲಿಯೂ ನೆರಳು, ತಂಪಿನ ವಾತಾವರಣ. ತಂಪು ನೀಡುವ ಹೊಂಗೆಮರಗಳ ಜೊತೆಗೆ ವಿಧವಿಧದ ಮರ ಗಿಡಗಳು.
“ಸೂರ್ಯಮಾಮ
ಬೆಳಕನ್ನು ಕೊಡ್ತಾನೆ ಬಿಸಿ ಬಿಸಿ- ಸೆಖೆ
ಆಗುತ್ತೆ . ಆದರೆ ಈ ಮರದಿಂದ ನಮಗೆ ನೆರಳು ಸಿಗುತ್ತೆ , ಗಾಳಿಯಿಂದ ತಂಪಾಗುತ್ತೆ” ಅಂತ ಒಂದೆರಡು ದಿನ ಹೇಳಿದ್ದೆ. ಅದಕ್ಕೆ ನಾನು ಅವಳಿಗೆ ಕೇಳಿಸೋ ಹಾಗೆ ಜೋರಾಗಿ “Thank
you ಮರ” ಅಂತ ಹೇಳಿದ್ದೆ.
ಈ ನೆನಪಿನ
ನೆಪದಲ್ಲಿ ನನ್ನ ಬದುಕಿನ ಒಂದು ಕಿರು ಅವಲೋಕನ
ಈ ನನ್ನ ಕ್ರಿಯೆಗೆ ಮೂಲ ಕಾರಣ ಏನು ಎಂಬುದನ್ನು
ಅವಲೋಕಿಸಿಕೊಂಡೆ. ನನ್ನ ಬಾಲ್ಯ, ಮಲೆನಾಡಿನ, ಕಾಡುಕಣಿವವೆಯ, ಸುಂದರ ಪ್ರಕೃತಿ ಪರಿಸರದ ಹಳ್ಳಿ (ಜನ ಅದನ್ನು ಕರೀತಾ ಇದ್ದದ್ದು, ಕುಗ್ರಾಮ
ಅಂತ ). ಮರ, ಗಿಡ, ಗುಡ್ಡ , ಬೆಟ್ಟ, ಹಸಿರು, ತೋಟ, ಹೊಳೆ, ಝರಿ, ..ಇವೆಲ್ಲಾ
ನನ್ನೊಳಗಿನ ಸ್ಮೃತಿ ಪಟಲದಲ್ಲಿ, ಭಾವಕೋಶದಲ್ಲಿ ಎಂದೋ ಬೇರೂರಿವೆ.
ಹದಿನೆಂಟು
ವರ್ಷದವರೆಗೂ ಆ ಪರಿಸರದ ಸೌಂದರ್ಯ ನನಗೆ ಗೊತ್ತೇ ಇರಲಿಲ್ಲ. ಹತ್ತಿರದಲ್ಲಿಯೇ ಇದ್ದ
ಜಗತ್ಪ್ರಸಿದ್ದ ಜೋಗ ಜಲಪಾತ ನನಗೆ ಏನೂ ವಿಶೇಷವೇ
ಆಗಿರಲಿಲ್ಲ. ಯಾವಾಗ ನಾನು ಎಂಜಿನಿಯರಿಂಗ್ ಮಾಡಲು ಬಯಲುಸೀಮೆ ಕಡೆಗೆ (ದಾವಣಗೆರೆಗೆ) ದಾಟಿದೆನೋ (ನನ್ನ ಮುಗ್ಧತೆಯ ಗಡಿ ದಾಟಿದೆನೋ) ಆಗ ನಮ್ಮ so called ಕುಗ್ರಾಮದ ಪ್ರಾಕೃತಿಕ ಸೌಂದರ್ಯದ ಮಹತ್ವ ತಿಳಿದದ್ದು. ನಮ್ಮೂರಿನ ಕಲ್ಲು ಬಂಡೆ ಮೇಲಿನಿಂದ
ಬೀಳುವ ನೀರನ್ನೂ ವೀಕ್ಷಿಸಲು ಈ ಮೂರ್ಖ ಜನ ಪ್ರವಾಸಮಾಡ್ತಾರಲ್ಲಾ ಅಂತ ಅನಿಸಿದ್ದೂ ಉಂಟು.
ನೀನು ಹುಟ್ಟಿರೋದು
ಕಾಂಕ್ರೀಟ್ ಅರಣ್ಯದ ಮಹಾನಗರದಲ್ಲಿ. ಆದರೂ, thanks
to Bangalore south. ಹಸಿರು ಇನ್ನೂ
ಮಾಯವಾಗಿಲ್ಲ. ನಮ್ಮ ಪ್ರೀತಿಯ ಹಸಿರು BBMP ಉದ್ಯಾನವನದಂತಹಾ ಅನೇಕ ಉದ್ಯಾನಗಳು ಲಭ್ಯ . ಹಸಿರ
ಪರಿಸರದಲ್ಲಿ ನಿನ್ನ ಪುಟಿವ ಹೆಜ್ಜೆಗಳ ನರ್ತನ ನೋಡುವ ಭಾಗ್ಯ.
ನಿನ್ನ ಪುಟ್ಟ ಸೈಕಲ್ ನ್ನು
ಪಾರ್ಕ್ ನಲ್ಲಿ ಒಂದು ಮರದ ಕೆಳಗೆ ನಿಲ್ಲಿಸಿ ಪೂಜೆ ಮಾಡ್ತಿದ್ದೆ ನೀನು. ಅಲ್ಲಿರುವ ಎಲೆ-ಹೂವು, ಕಸ
ಕಡ್ಡಿಗಳೇ ನಿನ್ನ ಪೂಜಾ ಸಾಮಗ್ರಿಗಳು. ನಿನ್ನ
ತೊದಲು ನುಡಿಯಲ್ಲಿ, ‘ವಕ್ರತುಂಡ ಮಹಾಕಾಯ..’ , ದೇವಸ್ತಾನದಲ್ಲಿ ಗಮನಿಸಿ ಕಲಿತ ‘ಆಯತ ನವಾಂಭವತಿ. ಆಯತನಂವೇದಾ’ ಮಂತ್ರಪುಷ್ಪವನ್ನು
, ಕೇಳುವುದೇ ಒಂದು ಬಗೆಯ ರೋಮಾಂಚನ ನನಗೆ. ನಂತರ ಆರತಿ, ತೀರ್ಥಪ್ರಸಾದ
ಹಂಚಿಕೆಯ ನಾಟಕವನ್ನೂ ಆಡ್ತಾ ಇದ್ದೆ ನೀನು. ಇಂಥಾ ದೃಶ್ಯಗಳನ್ನು ನೋಡಿದಾಗಲೆಲ್ಲಾ ನನಗೆ ಅನಿಸ್ತಾ ಇದ್ದದ್ದು
‘ನೀವು ಮಕ್ಕಳು ನಿಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸಬಲ್ಲಿರಿ’
“ ಚಂದನದ ಗೊಂಬೆಗೂ ಜೀವ ತುಂಬುವ ನೀನು ಸೃಷ್ಟಿಮಾತೆ” .
‘
ನಮ್ಮ ಅಂದರೆ ದೊಡ್ಡೋರ ನಿತ್ಯ ಪೂಜೆಯ ಪ್ರಕ್ರಿಯೆಗೆ , ಚಂದದ
ದೇವರ ಮೂರ್ತಿ,
ಸಿಹಿ
ಸಿಹಿ ಹಣ್ಣು,
ಕಾಯಿ ,
ಸುಂದರ
ಪರಿಮಳದ ಹೂವುಗಳು,
ದೀಪ,
ಆರತಿ,
ನಿರ್ದಿಷ್ಟ ಮಂತ್ರ, ಕ್ರಮ ….ಎಲ್ಲಾ ಬೇಕು. ಆದರೆ ಮಕ್ಕಳು ಮಾಡುವ
ಪೂಜೆಗೆ !!?? ; ಯಾವ ವಸ್ತುವಾದರೂ ಆದೀತು , ಯಾವ
ಕ್ರಮವಾದರೂ ಆದೀತು- ಅವರ ಮುಗ್ಧ ಭಾವ ಕ್ಕೆ ಸಮನಾದ ಭಕ್ತಿಬಾವ ದೊಡ್ಡೋರಿಗೆ ಮೂಡಲು ಸಾಧ್ಯವೇ ’
“ ದೇವರು ಬೊಂಬೆ , ಭಕ್ತಿ
ವಿಸ್ಮಯ”
ರಸ್ತೆಯ ತುದಿಯ ಪಾರಿವಾಳಗಳ
ಹಿಂಡನ್ನು ನೋಡುವುದೇ ಒಂದು ಖಾಯಂ ಚಟುವಟಿಕೆ. ಅದಕ್ಕೆ ಅಕ್ಕಿ ಹಾಕುವ ಪರಿಪಾಠ. ಪಾರಿವಾಳಗಳನ್ನು
ಕಂಡಕೂಡಲೇ ನಿನ್ನ ಭಾಷೆಯಲ್ಲಿ ಜೋರಾಗಿ ‘ಪಾರಿ’ ‘ಪಾರಿ’ ಎಂದು
ಕೂಗ್ತಾ ಇದ್ದೆ. ಆ ಪಾರಿವಾಳಗಳು ಅಕ್ಕಿಯನ್ನು ಹೆಕ್ಕಿ ಹೆಕ್ಕಿ ತಿನ್ನುವ ಪರಿಯನ್ನು ತದೇಕ
ಚಿತ್ತದಿಂದ ನೀ ನೋಡ್ತಾ ಇದ್ದೆ. ನಿನ್ನನ್ನು ನಾನು ತದೇಕ ಚಿತ್ತದಿಂದ ನೋಡ್ತಾ ಇದ್ದೆ. ಆಗ ತಾನೇ ‘ಒಂದು ಎರಡು
ಮೂರು’ ಎಂಬ
ಸಂಖ್ಯೆಗಳ ಪರಿಚಯ ಆಗ್ತಾ ಇದ್ದ ನಿನಗೆ, ಅಲ್ಲಿದ್ದ ಎಲ್ಲಾ
ಪಾರಿವಾಳಗಳನ್ನೂ ಎಣಿಸುವ ಹುಚ್ಚು ಬೇರೆ . ನೀನು ಎಣಿಸುವಾಗ ಇದ್ದಕಿದ್ದಂತೆಯೇ ಕೆಲವು
ಪಾರಿವಾಳಗಳು ಪುರ್ ಅಂತ ಮೇಲೆ ಹಾರಿಬಿಡ್ತಾ ಇದ್ದವು. ನಿನಗೋ ಲೆಕ್ಕ ತಪ್ಪಿ ಹೋಗ್ತಾ ಇದ್ದ
ಕಸಿವಿಸಿ. ಒಮ್ಮೊಮ್ಮೆ ಕೋಪ , ಅಳು ಧಾವಿಸುತ್ತಿತ್ತು.
ಗೆಳೆಯರ
ಸಂಪಾದನೆ
ಪ್ರತಿದಿನದ ಈ ವಾಯುವಿಹಾರದ
ದಿನಚರಿ ಮೂಲಕ ನೀನು ಹಲವಾರು ಅಂಗಡಿಯವರ ಸ್ನೇಹಿತೆಯಾಗಿಬಿಟ್ಟಿದ್ದೆ. ಅವರನ್ನು ನೀ
ಮಾತಾಡಿಸುತ್ತಿದ್ದ ರೀತಿ ಚಂದ.
“ಆಲಾಮಾ” , “ ಏನ್ಸಮಾಚಾಲ’ ನಿನ್ನ
ಪ್ರಶ್ನೆಗಳಾದ್ರೆ
ಅವರು ನಿನ್ನನ್ನು
“ಏನ್ಸಮಾಚಾರ?” ಅಂತ
ಕೇಳಿದ್ರೆ ,
ನಿನ್ನ ಉತ್ತರ
“ ಎಲ್ಲಾ
ಒಳ್ಳೇದು”
ಒಂದೂವರೆ ವರ್ಷಕ್ಕೇ ನೀನು
“ ನನ್ನೂರು
ಬೆಂಗಳೂರು. ನನ್ನ ರಾಜ್ಯ ಕರ್ನಾಟಕ, ನನ್ನ ದೇಶ ಭಾರತ, ಪ್ರಧಾನ ಮಂತ್ರಿ ‘ಮೋದಿ’” ಅಂತ ಮಾತಾಡ್ತಾ ಇದ್ದದ್ದು ಅವರಿಗೆಲ್ಲಾ ಅಚ್ಚರಿ.
love love ಕೆ
ಜೊತೆ ಜೊತೆಗೇ
ನಿನಗೂ, ನನಗೂ ಕಲಿಕೆ
ಈ ಅಧ್ಯಾಯ
ಮುಗಿಸುವ ಮುನ್ನ :
ಸರ್ವೇ
ಸಾಮಾನ್ಯವಾಗಿರುವ ಅಭಿಪ್ರಾಯ
ವೃತ್ತಿಯಲ್ಲಿ
ನಿರತರಾಗಿರುವ , ಅದರಲ್ಲೂ ಬೆಳಿಗ್ಗೆ ಎದ್ದು ಓಡುವ
ಪಾಲಕರಿಗೆ, ತಮ್ಮ ಮಕ್ಕಳ ಆಟೋಟಗಳನ್ನು ಆನಂದಿಸುವ ಭಾಗ್ಯ ಸಿಗೋದೇ ಇಲ್ಲ
ಆದ್ದರಿಂದ ನಿವೃತ್ತಿ ಹೊಂದಿದ ನಂತರ ( ಅಜ್ಜ , ಅಜ್ಜಿ ಆದ ನಂತರ) , ಆ ಭಾಗ್ಯವನ್ನು ಮೊಮ್ಮಕ್ಕಳ ಮೂಲಕ
ಪಡೆದುಕೊಳ್ತಾರೆ .
ಆದರೆ ನಾನು
ಈ ವಿಚಾರದಲ್ಲಿ ನನ್ನ ಮತ್ತು ನನ್ನಾಕೆಯ ಅನುಭವ
ಮಾತ್ರ ಭಿನ್ನ.
ಇಂದು
ನಿನ್ನ ಒಡನಾಟದಿಂದ ಪಡೆಯುತ್ತಿರುವ ಆನಂದಾನುಭವವನ್ನು ,
ಅಂದು, ಅಂದರೆ
35 ವರ್ಷಗಳ ಹಿಂದೆ ,
ನನ್ನ 30+ ವಯಸ್ಸಿನಲ್ಲಿ,
ಮಗ ಶಶಾಂಕ್ ನಿಂದ
ಪಡೆದಿದ್ದೇನೆ. ಪ್ರತಿದಿನ
ಬೆಳಿಗ್ಗೆ ಅವನನ್ನು ಶಾಲೆಗೆ ಕರೆದುಕೊಂಡುವಾಗ ಕಥೆ ಹೇಳ್ತಾ, ಸ್ವಾರಸ್ಯಕರ ಸಂಭಾಷಣೆ
ಮಾಡ್ತಾ, ಆನಂದಿಸಿದ್ದೇನೆ. ಆಫೀಸಿನ
ಪಕ್ಕದಲ್ಲಿಯೇ ಮನೆಯಿದ್ದದ್ದರಿಂದ ಸಂಜೆ ಬೇಗ ಬಂದು ಅವನೊಂದಿಗೆ ಆಟ ಆಡಿದ್ದೇನೆ.
ಪುಟ್ಟಿ
ಒಂದು
ಗಂಭೀರ ವಿಚಾರವನ್ನು ಹಂಚಿಕೊಳ್ಳಬೇಕೆನಿಸುತ್ತಿದೆ. ಈ ವಿಚಾರದಲ್ಲಿ ಭಾವುಕತೆಯೂ ಅಂತರ್ಗತವಾಗಿದೆ.
ನನ್ನ ಬಲವಾದ ನಂಬಿಕೆ ಇದು.
ಇಂದು , ನಾವು 60+ ಇಳಿ ವಯಸ್ಸಿನಲ್ಲಿ , ಮಗ ಸೊಸೆ ಮೊಮ್ಮಗಳ ಜೊತೆಯಲ್ಲಿ , ನೆಮ್ಮದಿಯಿಂದ, ಸಮೃದ್ಧಿಯಿಂದ ಬಾಳುತ್ತಿದ್ದೇವೆ ಅಂತಾದರೆ , ನಿನ್ನಪ್ಪ , ಅಮ್ಮ ನಮ್ಮನ್ನು ಜತನದಿಂದ , ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಸುಸಂಸ್ಕೃತ ರೀತಿ.
( ಇದನ್ನು ಯಾಕೆ ಒತ್ತಿ
ಒತ್ತಿ ಹೇಳ್ತಾ ಇದ್ದೇನಂದರೆ, ಇಂದಿನ
ದಿನಗಳಲ್ಲಿ ಇಳಿವಯಸ್ಸಿನವರ ಮತ್ತು ಅವರ ಮಕ್ಕಳ ನಡುವಿನ ‘ಒಡೆದ’ ಸಂಬಂಧಗಳ ಕುರಿತು ಸಾಕಷ್ಟು ಸುದ್ದಿಗಳನ್ನು ಓದ್ತಾ ಇರ್ತೇವೆ. ಅದು
ಬಹು ಚರ್ಚಿತ ವಿಷಯಗಳಲ್ಲೊಂದು )
ನಮ್ಮ ಈ ‘ಇಂದು’ ಛಂದವಾಗಿರುವುದಕ್ಕೆ ಪ್ರಮುಖ ಕಾರಣ
ನಮ್ಮ ಆ ಅಂದು ‘ಛಂದ’ ವಾದ್ದದ್ದು.
ಅರಿತೋ, ಅರಿಯದೆಯೋ , ಸ್ವಾಭಾವಿಕವಾಗಿ ನಾವು
ಅಂದು ಮಗನಿಗೆ ಕೊಟ್ಟ ಸಂಸ್ಕಾರವೇ ಇಂದು ನಮ್ಮ ಬದುಕನ್ನು ಸಮೃದ್ಧಗೊಳಿಸ್ತಾ ಇದೆ.
ಹೀಗೆ ಹೇಳುವಾಗ ನನ್ನಪ್ಪ , ಅಮ್ಮನೂ ( ನಿನ್ನ ಮುತ್ತಜ್ಜ , ಮುತ್ತಜ್ಜಿ) ನೆನಪಾಗ್ತಾರೆ ನನಗೆ. ನನ್ನ ಬಾಲ್ಯವನ್ನು ಸುಂದರವಾಗಿರಿಸಿದವರು
ಅವರು . ಉತ್ತಮ ಸಂಸ್ಕಾರವನ್ನು ನೀಡಿದವರು ಅವರು.
“ ಅಯ್ಯೋ..ಕಾಲ ಕೆಟ್ಟು
ಹೋಯ್ತು, ಈಗಿನ ಮಕ್ಕಳು ಮೌಲ್ಯರಹಿತವಾಗಿದ್ದಾರೆ, ಸಂಬಂಧಗಳಿಗೆ ಬೆಲೆ ಕೊಡೋದಿಲ್ಲ” ಎಂಬ
ಅಪಸ್ವರ ಕೇಳಿಬರುತ್ತಿದ್ದರೂ , ನಮ್ಮ ಕುಟುಂಬದ ಮಟ್ಟಿಗಂತೂ ಅದು ಅನ್ವಯವಾಗಿಲ್ಲ.
ಕಾಲವಾಹಿನಿಯಲ್ಲಿ ಈ ಸಂಸ್ಕಾರದ ಪರಂಪರೆ ಮುಂದುವರೆದಿದೆ
ನಮ್ಮ ಕುಟುಂಬದಲ್ಲಿ ಎಂಬುದು ಒಂದು ಸಾತ್ವಿಕ ಹೆಮ್ಮೆ.
ಬೆಳಗಿನ ವಾಯುವಿಹಾರದ
ನೆನಪಿನ ನೆಪದಲ್ಲಿ ಒಂದಿಷ್ಟು ಗೀಚಿದ್ದಾಯ್ತು. ಮುಂದಿನ ಅಧ್ಯಾಯ, ಸಂಜೆಯ ನಮ್ಮ ಚಟುವಟಿಕೆಗಳ ಕುರಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ