ಪತ್ರ -ಮೊಮ್ಮಗಳಿಗೆ - ಅಧ್ಯಾಯ 8 - ಸಧ್ಯಕ್ಕೆ ಇಷ್ಟು ಸಾಕು - ಮುಕ್ತಾಯಗೊಳಿಸಲೇ ?

 

ಮುಕ್ತಾಯ

ಆರೋಹಿ ಪುಟ್ಟಿ,

ಮುಗಿಸಲಾ ಈ  ಪತ್ರವನ್ನು ?

ಸಾಕು ಅಜ್ಜ ಈ ಭೋರ್ಕೊರೆತಅಂತ ನೀ ಮಧ್ಯೆ ಮಧ್ಯೆ ಹೇಳಿರಲೂಬಹುದು.

ಅದನ್ನು ನನ್ನ ಜಾಣಕಿವಿ  ಕೇಳಿಸಿಕೊಳ್ಳಲೇ ಇಲ್ಲ. ಹೇಗಿದ್ದರೂ ಈ ಪತ್ರದ ನೆಪದಲ್ಲಿ,  ತೋಚಿದ್ನೆಲ್ಲಾ ಗೀಚಲೇಬೇಕುಅಂತ ಗಟ್ಟಿ ಸಂಕಲ್ಪ ಮಾಡಿಕೊಂಡುಬಿಟ್ಟಿದ್ದ್ನಲ್ಲಾ?  

 

ಓದು-ಬರಹ ಪ್ರಪಂಚಕ್ಕೆ ಇನ್ನೂ ಕಾಲಿಡಬೇಕಾದ ನಿನಗೆ,  ಈ   ಈ ಪತ್ರವನ್ನು,  ಅಲ್ಲ  ಅಲ್ಲ, ಪತ್ರರೂಪದ ಕಿರು ಪುಸ್ತಕವನ್ನು ಬರೆದು ಮುಗಿಸಿದ್ದೇನೆ.   ಪ್ರಾರಂಭಿಸಿದಾಗ ಏನೋ ಮೂರ್ನಾಲ್ಕು ಪುಟದ ಪತ್ರಆಗಬಹುದು  ಅಂದ್ಕೊಂಡಿದ್ದೆ, ಆದ್ರೆ ಬರೆಯುತ್ತಾ ಹೋದಂತೆಲ್ಲಾ, ನನ್ನ ಮನಸಿನ ಪುಟಗಳಲ್ಲಿ , ನೀನು ಮತ್ತೆ ಮರುಕಳಿಸಲಾರದ ಬೇರೆ ಬೇರೆ ರೂಪಗಳಲ್ಲಿ ಹರೆದು, ಹೆಜ್ಜೆಯಿಟ್ಟು , ಬಿದ್ದು, ಎದ್ದು, ಜಿಗಿಯಲು,  ಓಡಲು  ಪ್ರಾರಂಭಿಸಿದೆ 

ನನ್ನ ತಿಳುವಳಿಕೆಯ ಪ್ರಕಾರ,  ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ  5 ವರ್ಷಗಳಿಗಿಂತ ಮುಂಚೆಯ ಚಟುವಟಿಕೆಗಳು  ನೆನಪಿನಲ್ಲಿ ಉಳಿಯುವುದಿಲ್ಲ.

ಮೊದಲ 5  ವರ್ಷಗಳಲ್ಲಿ 

ಮಕ್ಕಳ ನಡೆ-ನುಡಿ  ಅದೆಷ್ಟು ವಿಧ ವಿಧದ ರೂಪ ಪಡೆಯುತ್ತದೆಂದರೆ ,

ಆಗಸದಲ್ಲಿ  ಕ್ಷಣಕ್ಷಣಕ್ಕೆ ಬದಲಾಗುವ ಬಗೆ ಬಗೆ ಚಿತ್ತಾರದ ಮೋಡಗಳ ಹಾಗೆ,

ಸೂರ್ಯೋದಯಕ್ಕೆ ಮೊದಲು  ಅಥವಾ ಸೂರ್ಯಾಸ್ತದ ನಂತರದ  ಕ್ಷಿಪ್ರವಾಗಿ ಬದಲಾಗುವ ರಂಗು ರಂಗಿನ ದಿಗಂತದ ಹಾಗೆ.

ನಂತರದ ವರ್ಷಗಳಲ್ಲಿ

ಈ ಮುಗ್ಧತೆ ಕರಗಿ ಪ್ರಬುದ್ಧತೆ ಆಕ್ರಮಿಸಿದಾಗ, ಇಂತಹ ಅನನ್ಯ ಕ್ಷಣಗಳು ಮತ್ತೆ ಸಿಗುವುದಕ್ಕೆ ಸಾಧ್ಯವೇ ಇಲ್ಲ.

ಹಾಗಾಗಿ ಈ ನಾಲ್ಕು ವರ್ಷಗಳ  ಮಕ್ಕಳ ಚಟುವಟಿಕೆಗಳ ಸಾಗರದಿಂದ  ನಮ್ಮ ಬೊಗಸೆಗೆ ಹಿಡಿಯುವಷ್ಟು ಆನಂದವನ್ನು ಮೊಗೆದುಕೊಂಡುಬಿಡಬೇಕು. ಪ್ರಸ್ತುತ,  ಕೇವಲ ಎರಡು ವರ್ಷಗಳ ಹಚ್ಚ ಹಸಿರಿನ ಕ್ಷಣಗಳನ್ನು ಮಾತ್ರ  ಈ ಮೂಲಕ ಹಿಡಿದಿಟ್ಟಿದ್ದೇನೆ.

ನಾವು ಅದೃಷ್ಟಶಾಲಿಗಳು , ಯಾಕೆ ಅಂದರೆ :

ಈ ಮೊದಲೇ ತಿಳಿಸಿದಂತೆ, ಸಾಮಾನ್ಯವಾಗಿ ಇಂದಿನ ಕಾಲದಲ್ಲಿ, ಹಲವಾರು ಕಾರಣಗಳಿಂದಾಗಿ, ಅಜ್ಜ ಅಜ್ಜಿಗೆ ಮೊಮ್ಮಕ್ಕಳ ಪೂರ್ಣ ಸಾಮೀಪ್ಯ ಸಿಗೋದು ಅಪರೂಪ. ಆದರೆ ನಮ್ಮನೆಯ ಪರಿಸರದಲ್ಲಿ  ನಮಗೆ, ಸತತ,  ಪ್ರತಿ ದಿನ  ಸುಮಾರು 14 ಗಂಟೆಗಳ ಕಾಲ ನಿನ್ನೊಟ್ಟಿಗೇ ಕಳೆಯುವ ಸದವಕಾಶ ದೊರೆತಿದೆ. ಇನ್ನೇನು ಬೇಕು ನಮಗೆ ?

  

ಇದೋ ಸ್ವೀಕರಿಸು ಈ ಉಡುಗೊರೆಯನ್ನು

ಬೆಳೆ,

ಬೆಳಗು ,

ಬೆಳೆಸು,

ಸಮೃದ್ಧಳಾಗು

-ಇಂತಿ

ನಿನ್ನ

ಚಿದು ಅಜ್ಜ

 

15 ಡಿಸೆಂಬರ್ 2025


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ