ಪತ್ರ -ಮೊಮ್ಮಗಳಿಗೆ - ಅಧ್ಯಾಯ 3 - ಸಂಜೆ ರಾಮಯ್ಯ ಪಾರ್ಕ ನಲ್ಲಿ ನಿನ್ನ ನಲಿದಾಟ
ಅಧ್ಯಾಯ
3
ಪ್ರತಿದಿನ
ಸಂಜೆ ಎಂ.ಎಸ್. ರಾಮಯ್ಯ ಪಾರ್ಕ್ – ಆಟದ ಮೈದಾನ
ಇದೊಂದು ಸಂಭ್ರಮದ ಚಟುವಟಿಕೆ
, ಸುಮಾರು ಒಂದೂವರೆ ವರ್ಷಗಳ ಕಾಲ ಪ್ರತಿ ಸಂಜೆ.
ಮನೆಯಿಂದ ಒಂದು ಕಿ.ಮೀ.
ದೂರದಲ್ಲಿ ಎಂ.ಏಸ್.ರಾಮಯ್ಯ ಬಡಾವಣೆ. ಅಲ್ಲಿ ಒಂದು ಪುಟ್ಟ ಉದ್ಯಾನವನ – ಮಕ್ಕಳ ಆಟದ ಅಂಗಳ . ಜೋಕಾಲಿ, ಜಾರುಬಂಡೆ, ಹಸಿರುಹಾಸಿನ ಮೇಲೆ ಜೂಟಾಟ, ನಮ್ಮದೇ ಶೈಲಿಯಲ್ಲಿ ಕಬಡಿ, ಸೀ-ಸಾ, ತಿರುಗು ಕುರ್ಚಿ, ಹೀಗೆ ಹಲವಾರು
ಆಟಗಳಲ್ಲಿ ಸುಮಾರು ಒಂದು ಗಂಟೆ ನಿರತ , ನೀನೂ ಮತ್ತು
ನಾವೂ. ಎಲ್ಲಾ ಮಕ್ಕಳೂ ಆನಂದಿಸುವ ಹಾಗೇ ನೀನೂ ಆನಂದಿಸ್ತಾ ಇದ್ದೆ. ನಮಗೋ, ನಿನ್ನನ್ನು ಆಡಿಸುವ ಖುಷಿ, ಒಮ್ಮೊಮ್ಮೆ
ಆತಂಕ (ಎಲ್ಲಿ ಬಿದ್ದುಬಿಡ್ತೀಯೋ ಅಂತ )
ಇನ್ನೊಂದು ತುಂಬಾ ನೆನಪಿನಲ್ಲಿಳಿಯುವ ಪುಟ್ಟ ಸಂಭ್ರಮ
ಈ ಆಟದ
ಉದ್ಯಾನವನಕ್ಕೆ ಹೋಗುವಾಗಿನ ಸಂಭ್ರಮ
ಅಲ್ಲಿಗೆ
ಹೊರಡುವುದಕ್ಕಿಂತಾ ಒಂದು ಗಂಟೆ ಮುಂಚೆಯೇ ‘ರಾಮಯ್ಯ
ಪಾಲ್ಕ್ ಗೆ ಹೋಗ್ತೀನಿ’ ಅಂತ
ಮನೆಯವರಿಗಷ್ಟೇ ಅಲ್ಲದೆಯೇ, ನೆರೆಹೊರೆಯವರೆಲ್ಲರಿಗೂನಿನ್ನ
ಟಾಂ..ಟಾಂ.
ನಾನೂ, ನೀನೂ ಮತ್ತು ಅಮ್ಮ ಅಥವಾ ಅಜ್ಜಿ ಕಾರಲ್ಲಿ.
ಕಾರೊಳಗೆ ಕುಳಿತೊಡನೆಯೇ, ಶಾಲೆಯಲ್ಲಿ ಹಾಜರಿ ಕರೆಯುವ ಹಾಗೆ
ನಾಟಕೀಯ ಸಂಭಾಷಣೆ.
“ರಶ್ಮಿ” ಅಥವಾ “ವಿಜೂ ಅಜ್ಜಿ”
“ಯಸ್ ಮಿಸ್” ( ಅವರ ಉತ್ತರ)
“ದತ್ತಜ್ಜ”
ನೋ ಮಿಸ್, ಸಾಗಲ {ನಿನ್ನ ಉತ್ತರ, ಯಾಕೆಂದ್ರೆ ದತ್ತಜ್ಜ ಗೈರು ಹಾಜರಿ}
“ಶಾಂತಜ್ಜಿ”
ನೋ ಮಿಸ್, ಸಾಗಲ { ನಿನ್ನ ಉತ್ತರ, ಯಾಕೆಂದ್ರೆ ದತ್ತಜ್ಜ ಗೈರು ಹಾಜರಿ }
“ಆರೋಹಿ ” {ನಾ ಕರೆದದ್ದು}
‘ಯಸ್ ಮಿಸ್{ನಿನ್ನ ಉತ್ತರ }
----
ನಂತರ ,
“ಹೊರಡೋಣವಾ?” ನನ್ನ ಪ್ರಶ್ನೆ
ನಿನ್ನ ಉತ್ತರ
“ ರೈ......ಯ್ಯಾ...” {ಬಸ್ ಕಂಡಕ್ಟರ್ ನ ಹಸಿರು ನಿಶಾನೆ ಕೂಗು }
ಕಾರು ಚಲಿಸಲು ಪ್ರಾರಂಭ
-------------
ಕೇವಲ 4 ನಿಮಿಷದ ಡ್ರೈವ್. ಆದರೆ
ಅಷ್ಟೇ ಸಮಯದಲ್ಲಿ, ಅದೆಷ್ಟುಮಾತುಕತೆ ಕಾರಿನೊಳಗೆ!
ದಾರಿಯಲ್ಲಿ ಕಾಣುವ , ನೀ ಭೇಟಿಕೊಟ್ಟ ಅಂಗಡಿಗಳ ಹೆಸರನ್ನು ನೀ
ನಿನ್ನ ಮುದ್ದು ಭಾಷೆಯಲ್ಲಿ ಹೇಳ್ತಾ ಇದ್ದೆ.
ಅಷ್ಟೇ ಅಲ್ಲ,
ಅಲ್ಲಿಯ ಕೆಲವು ನೆನಪುಗಳ
ಮೆಲುಕು
“ ಇಲ್ಲಿ ಬಿದ್ದಿದ್ದೆ”
“ ಅಲ್ಲಿ ಬೆಕ್ಕುಮರಿ
ಇತ್ತು, ಇಲ್ಲಿ ಬೌ ಬೌ ಇತ್ತು” ..ಇತ್ಯಾದಿ
-----
ನಂತರ, ಮತ್ತೆ ‘ನಾಟಕೀಯ’ ಸಂಭಾಷಣೆ
“ ಪಾರ್ಕ್ , ಎಲ್ಲೋ ಕಳೆದು ಹೋಯ್ತು – ಅಲ್ವೇನೇ ಪುಟ್ಟಿ” ಅಂತ ನಾವು ಕೇಳೋದು.
ಅದಕ್ಕೆ ಇನ್ನೂ
ನಾಟಕೀಯವಾಗಿ ನಿನ್ನ ಮಾತು-ಹಾವ-ಭಾವ - ಅಭಿನಯ (ಹಿಂದೆ-ಮುಂದೆ ನೋಡೋದು, ಗಾಬರಿಯಿಂದ )
“ ಅಯ್ಯೋ- ಪಾಲ್ಕ್ ಎಲ್ಲಿಗೆ ಹೋತು- ಸಾಗಲಕ್ಕೆ ಹೋತಾ ಏನೋ? ಡೆಲ್ಲಿ ಗೆ ಹೋತಾ ಏನೋ”
{ನಿನಗೆ ಈಗಾಗಲೇ , ಡೆಲ್ಲಿ ಅಂತ ಒಂದು ಊರಿದೆ, ವಿಮಾನದಲ್ಲಿ ಮೋದಿ ಅಲ್ಲಿಗೆ ಹೋಗ್ತಾರೆ ಅಂತ
ಬೇರೆ ಗೊತ್ತಿತ್ತು }
----------------
ಇಷ್ಟು ಹೊತ್ತಿಗಾಗಲೇ, ಪಾರ್ಕ್
ತಲುಪಿಯಾಗಿರ್ತಿತ್ತು. ಆಗ ನಿನಗೆ ಸಡಗರವೋ ಸಡಗರ
“ಇದೇ....ಇಲ್ಲೇ
ಇದ್ದು ಪಾಲ್ಕ್- ಮಕ್ಳೆಲ್ಲಾ ಆಡ್ತಾ ಇದ್ದ...” {ನೀನೇನು 70 ವರ್ಷದ ಅಜ್ಜಿನೋ ? }
-----
ಅಲ್ಲಿ ಥರ ಥರದ ಆಟ ಆಡೋದ್ರ ಜೊತೆಗೆ, ಸ್ನೇಹಿತರ ಸಂಪಾದನೆ
ಆಗ್ತಾ ಇತ್ತು. ನಿನಗೆ ಪುಟಾಣಿಗಳ ಸ್ನೇಹ ( ಅಘನ್ಯ, ಅಗಸ್ತ್ಯ, ಧೃತಿ, ಅನೂ...ಇನ್ನೂ ಹಲವಾರು), ನಮಗೆ ಅವರ ಪಾಲಕರ ಸ್ನೇಹ
.
ಅಲ್ಲಿಯೇ ಇದ್ದ ವ್ಯಾಯಾಮ ಮಾಡುವುದಕ್ಕಾಗಿದ್ದ
Exercise park ನಲ್ಲಿ ನೀನೂ ವ್ಯಾಯಾಮ ಮಾಡ್ತಾ ಇದ್ದೆ.
ಜೋಕಾಲಿಯಾಡುವಾಗ ನಾನೂ ನೀನೂ ಆಡ್ತಾ ಇದ್ದಿದ್ದ ಪದಗಳ ಆಟ.
ನಾನು ಒಂದು ಪದ ಹೇಳ್ತಾ ಇದ್ದೆ, ಅದಕ್ಕೆ ಪೂರಕವಾದ
ಪದವನ್ನು ನೀನು ಹೇಳ್ತಿದ್ದೆ.
ಹೀಗೆ :
ನಾನು : ರಾಮ
ನೀನು: ಕೃಷ್ಣ
ನಾನು : ಮೇಲೆ
ನೀನು : ಕೆಳಗೆ
ನಾನು : ಸೂರ್ಯ
ನೀನು : ಚಂದ್ರ
ಹೀಗೇ ಮುಂದುವರೆಯುತ್ತಿತ್ತು ನಮ್ಮ ಆಟ
Up – Down
ಸೂರ್ಯ – ಚಂದ್ರ
ಇಡ್ಲಿ- ವಡ
ದೋಸೆ – ಚಟ್ನಿ
ಅಪ್ಪ – ಅಮ್ಮ
ಅಜ್ಜ – ಅಜ್ಜಿ
ಅಕ್ಕಪಕ್ಕದಲ್ಲಿರೋರಿಗೆ ಆಶ್ಚರ್ಯ. ಇದೇನಿದು! ಒಂದೂವರೆ
ವರ್ಷದ ಹುಡುಗಿಯ ಈ ಮಾತಿನಾಟ!
ಆ
ಸಂದರ್ಭದಲ್ಲಿ ನಾನು ಮಕ್ಕಳನ್ನು ಆಡಿಸಲು ಬರುವವರ ಬಗ್ಗೆ ಗಮನಿಸಿದ್ದು
ಒಂದು
ವರ್ಗ
ಅಮ್ಮ ಅಪ್ಪಂದಿರಿಗೆ ಮಕ್ಕಳ ಆಟವನ್ನು ಆನಂದಿಸುವ ಆಸಕ್ತಿ ಇಲ್ಲ. ಮಕ್ಕಳನ್ನು
ತಮ್ಮ ಪಾಡಿಗೆ ಆಡೋದಕ್ಕೆ ಬಿಟ್ಟು, ತಾವು ಮೊಬೈಲ್ ನಲ್ಲಿ ನಿರತ.
ಇನ್ನೊಂದು
ವರ್ಗ
ಮಕ್ಕಳೊಂದಿಗೆ ತಾವೂ ಮಕ್ಕಳಾಗಿ ಆಟ ಆಡುವವರು. ಆಸಕ್ತಿಯನ್ನು ಸೃಷ್ಟಿಸುವವರು.
ನಿನ್ನ ಆಗಮನ ಆಗೋದಕ್ಕಿಂತ ಮೊದಲೇ ನನಗೆ ಎಂ.ಎಸ್. ರಾಮಯ್ಯ
ಬಡಾವಣೆ ನನ್ನ ಬದುಕಿನ ಅಂಗವಾಗಿತ್ತು. ನಾನು ಕಳೆದ 15 ವರ್ಷಗಳಿಂದಲೂ ನನ್ನ ಕಾಲ್ನಡಿಗೆಯ
ಅಚ್ಚುಮೆಚ್ಚಿನ ತಾಣ. ನನ್ನ ನೆಚ್ಚಿನ youtube ಕಾರ್ಯಕ್ರಮಗಳನ್ನು
ಕೇಳ್ತಾ, ಮನೋರಂಜನೆ, ಮನೋವಿಕಾಸ
ಪಡೆಯುತ್ತಾ ವಾಯುವಿಹಾರ ಆನಂದಿಸುವ, ಹಸಿರು
ಆವರಿಸಿದ ಬಡಾವಣೆ.
ಕುಟುಂಬಕ್ಕೆ ನಿನ್ನ
ಪ್ರವೇಶದ ನಂತರ ನಿನ್ನ ಆಟದ ದಿನಚರಿ, ನನ್ನ ಮತ್ತು
ಈ ಬಡಾವಣೆಯ ನಂಟಿಗೊಂದು ಹೊಸ ಮೆರಗನ್ನು ಕೊಟ್ಟಿದೆ.
ಇಲ್ಲಿ ಆಡಿಸುವಾಗ , ಹಂತ ಹಂತದ, ಪುಟ್ಟ ಪುಟ್ಟ ಬೆಳವಣಿಗೆಯನ್ನು ಸಂಭ್ರಮಿಸ್ತಾ ಇದ್ದೆವು ನಾವು , ಉದಾಹರಣೆಗೆ , ಮೊದ ಮೊದಲು ಕಡಿಮೆ ಎತ್ತರದ ಜಾರುಬಂಡೆಯ ಮೆಟ್ಟಿಲನ್ನು ಹತ್ತಿ, ಮೇಲಿನಿಂದ ಜಾರುವಾಗ ನಿನಗೆ ಹೆದರಿಕೆ , ನಮ್ಮ support ಬೇಕಿತ್ತು. ಕ್ರಮೇಣ ನಮ್ಮ support ಇಲ್ಲದೆಯೇ ಇನ್ನೂ ಎತ್ತರದ ಜಾರುಬಂಡೆ. ಕ್ರಮೇಣ ಹತ್ತುವ , ಜಾರುವ ಕೌಶಲ್ಯದ ಕಲಿಕೆ.
ಹೀಗೇ ಒಂದು ಗಂಭೀರ ಚಿಂತನೆ
ಈ ಪುಟ್ಟ ಉದಾಹರಣೆ , ನಮ್ಮೆಲ್ಲರ ಬದುಕಿನ ಕ್ರಮದ ಪ್ರ್ತತಿನಿಧಿ ಯಲ್ಲವೇ?
ಬೆಳೆಯುತ್ತಾ ಹೋದಂತೆಯೇ
ಹತ್ತಾರು , ನೂರಾರು ವಿದ್ಯೆ, ಕೌಶಲ್ಯಗಳನ್ನು ಕಲಿಯುತ್ತಾ ಹೋಗ್ತೇವೆ. ಪ್ರಾರಂಭದಲ್ಲಿ ಅದೇನೋ ಆಸಕ್ತಿ, ಕುತೂಹಲ, ಜೊತೆ
ಜೊತೆಗೇ ಆತಂಕ, ಭಯ. ಕಲಿಯುತ್ತಾ
ಹೋದಂತೆಯೇ “ ಅಯ್ಯೋ, ಅದೇನು ಮಹಾ!” ಎಂಬಷ್ಟು ಕರಗತ.
ಜೊತೆ ಜೊತೆಗೇ ಒಂದು
ಚಟುವಟಿಕೆಯ ಮೇಲೆ ಇರುವ ಆಸಕ್ತಿ, ಇನ್ನೊಂದು
ಹಂತದಲ್ಲಿ ಕಡಿಮೆಯಾಗುತ್ತೆ. ಹೊಸ
ಚಟುವಟಿಕೆಗಳನ್ನು ಬಯಸುತ್ತೆ. ಏಕತಾನತೆಯಿಂದ ಹೊರಬರಲು ಚಡಪಡಿಕೆ.
ಜೀವನ ಪಯಣ ಕುತೂಹಲಮಯ ,
ಉತ್ಸಾಹಮಯವಾಗಿರೋಕೆ ಈ ‘ಚಡಪಡಿಕೆ’
ಯೇ ಇಂಧನ ಅಲ್ಲವೇ ?
ನಾನಂತೂ , ನನ್ನ ಜೀವನಾರಂಭ ದಿನಗಳಲ್ಲಿ, ನಮ್ಮನ್ನು ಏರಲು , ಜಾರಲು, ಬೀಳಲು , ಬಿದ್ದರೆ ಎದ್ದು ಓಡುವುದನ್ನು ಕಲಿಸಿದ ಪ್ರತ್ಯಕ್ಷ ಮತ್ತು ಪರೋಕ್ಷ , ಅಧಿಕೃತ ಮತ್ತುಅನಧಿಕೃತ ನೂರಾರು ಗುರುಗಳಿಗೆ / ಗುರು ಸಮುದಾಯ ಕ್ಕೆ ಪ್ರತಿದಿನ ಒಂದು ಕೃತಜ್ನತೆ ಸಲ್ಲಿಸುವ ಕ್ರಮ ಇಟ್ಕೊಂಡಿದ್ದೀನಿ.
ನಮ್ಮ ಮನೆಯ ಮಗುವಿನ ಒಂದೊಂದು ಸಣ್ಣ ಸಣ್ಣ ಬೆಳವಣಿಗೆಯನ್ನೂ ಸಂಭ್ರಮಿಸುವ ಮನೋಭಾವ ನಮ್ಮಲ್ಲಿದ್ದರೆ ( ಸಾಮಾನ್ಯವಾಗಿ ಬಹುತೇಕರಲ್ಲಿ ಇದ್ದೇ ಇರುತ್ತೆ), ಬದುಕಿನ ಚೆಲುವಿಗೆ ಮೆರಗು.
ಈ ಸಂದರ್ಭದಲ್ಲಿ, ನನ್ನನ್ನು ಕಾಡಿದ, ನನ್ನ ಮೇಲೆ ಪ್ರಭಾವ ಬೀರಿದ, ನನ್ನೊಳಗೆ
ಬೆಳಕು ಚೆಲ್ಲಿದ , ಜಿ.ಎಸ್.ಶಿವರುದ್ರಪ್ಪ ಅವರ ಕವಿತೆ ನೆನಪಾಗ್ತಾ ಇದೆ.
‘ಹೊಸಿಲು ದಾಟಿತು ಹಸುಳೆ’ . ಮನೆಯ ಮಗು ಮೊದಲ ಬಾರಿಗೆ ಹೊಸಿಲು ದಾಟಿದ, ಸರಳ ಸಂಗತಿಯ ಸಂಭ್ರಮವನ್ನು ಕವಿ ವೈಭವೀಕರಿಸಿದ್ದಾರೆ. ತಾತ್ವಿಕ ಸಂದೇಶವನ್ನೂ
ನೀಡಿದ್ದಾರೆ.
ಹೊಸಿಲು ದಾಟಿತು ಹಸುಳೆ
ನಡುಮನೆಯ ಬಿತ್ತರದ ಬಯಲು ನಾಡನು ಕಳೆದು
ಒಳಮನೆಗೂ ಹೊರಮನೆಗೂ ಕೋಟೆಗಟ್ಟಿದ
ಹೊಸಿಲ ಪರ್ವತ ಶ್ರೇಣಿಯನು ದಾಟಿಬಿಟ್ಟಿತು ಹಸುಳೆ
ಓ ಅಲ್ಲಿ
ಹಿಮಗಿರಿಯ ಶಿಖರದಲಿ
ವಿಜಯಿಯಾದನು ವೀರ ತೇನ್ಸಿಂಗ್,
ಇದೋ ಇಲ್ಲಿ
ಅದಕಿಂತಲೂ ಮಿಗಿಲು ಹಬ್ಬವಾಯಿತು ಮನೆಗೆ
ಕಾಯೊಡೆದು, ಕರ್ಪೂರದಾರತಿಯ ಬೆಳಗಿ
ನಲಿಯಿತೀ ಮನೆಯ ಜನಲೋಕ
ಕತ್ತಲೆಯ ಬಸಿರಿಂದ ಮೆಲ್ಲಡಿಯಿಟ್ಟು,
ನೀರಾಗಿ, ಹಸಿರಾಗಿ, ಖಗವಾಗಿ, ಮೃಗವಾಗಿ
ಕಡೆಗೆ ಮಾನವನಾಗಿ ಕಾಲದುಸುಬನು ತುಳಿದು
ಪ್ರಗತಿಯನು ಸಾಧಿಸಿದ ಮಾನವ ಚರಿತ್ರೆಯಲಿ
ಹೊಸಿಲುದಾಟಿದ ಈ ಹಸುಳೆಯದೊಂದು ಪುಟ
ಅದನು ತಿರುವಿತು ಹಸುಳೆ ; ಏನಿದದ್ಭುತ
ಮಾಟ!!
ಈ ಕವಿತೆಯ ಕುರಿತೇ ದೀರ್ಘವಾಗಿ ಬರೆಯಬಹುದು. ಇತಿಹಾಸದಲ್ಲಿ ಪ್ರತಿ ದಿನವೂ , ಪ್ರತಿ ಕ್ಷಣವೂ ಲಕ್ಷಾಂತರ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಒಂದು ಬಗೆಯ ನೇತಾತ್ಮಕ, ನಿರ್ಲಕ್ಷ್ಯ ಮನೋಭಾವವಿರುವವರಿಗೆ , ಭಾವನಾ ರಹಿತರಿಗೆ, “ಅದರಲ್ಲೇನು ಮಹಾ ?” ಅನಿಸಬಹುದೇನೋ. ಆದರೆ ಧನಾತ್ಮಕ ಮನೋಭಾವದ ಭಾವಜೀವಿಗಳಿಗೆ, ತಮ್ಮ ಆವರಣದಲ್ಲಿ ಘಟಿಸುವ ಪುಟ್ಟ ಪುಟ್ಟ ಸಂಗತಿ – ಪ್ರಗತಿಗಳೂ ಸಂಭ್ರಮವೇ.
ಅದಕ್ಕೆ ಒಂದು ಉದಾಹರಣೆ ‘ ನಮ್ಮ ಮನೆಯ ಮಗು ಮೊದಲ ಬಾರಿಗೆ ಹೊಸಿಲು ದಾಟಿದ ಪ್ರಗತಿ
ನಿನ್ನ ಪ್ರತಿ ಬೆಳವಣಿಗೆಯನ್ನು ಗಮನಿಸಿದಾಗಲೂ, ಈ ಕವಿತೆ ನೆನಪಾಗುತ್ತೆ ಪುಟ್ಟಿ
OKAY, ಸಾಕು ಪಾರ್ಕ್ ;
ಈಗ ನಮ್ಮ ಮುಂದಿನ
ಪ್ರಯಾಣ ಆರ್.ಬಿ.ಐ.ಬಡಾವಣೆಯ ವರದಾಂಜನೇಯ
ದೇವಸ್ಥಾನಕ್ಕೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ